ಮಡಿಕೇರಿ, ಜ. 4: ಅಪ್ರಾಪ್ತ ಯುವತಿಯೋರ್ವಳು ಜನ್ಮವಿತ್ತ ಮಗುವನ್ನು ಕಾನೂನು ಬಾಹಿರವಾಗಿ ಬೇರೊಬ್ಬರಿಗೆ ಹಸ್ತಾಂತರ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಠಾಣೆಯಲ್ಲಿ ನಗರದ ಸರಕಾರಿ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿದಂತೆ ಐವರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರಸವ ಮಾಡಿಸಿದ್ದಲ್ಲದೆ ಬಳಿಕ ಮಗುವನ್ನು ಬೇರೆಯವರಿಗೆ ನೀಡಿದ್ದ ಪ್ರಕರಣ ಬಯಲಾದ ಬಳಿಕ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಪತ್ತೆ ಮಾಡಿ ಹಾಸನದ ಶಿಶು ಪಾಲನಾ ಕೇಂದ್ರಕ್ಕೆ ಸೇರಿಸಲಾಗಿತ್ತು.

ಇದಾದ ಬಳಿಕ ಇದರ ತನಿಖೆ ನಡೆದು ಆರೋಪಿತರಿಗೆ ನೋಟೀಸ್ ಜಾರಿಗೊಳಿಸಿ ವಿಚಾರಣೆ ಮುಂದುವರಿದಿತ್ತು. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯ ದೂರಿನಂತೆ ಜಿಲ್ಲಾಸ್ಪತ್ರೆಯ ವೈದ್ಯರುಗಳಾದ ನವೀನ್, ರಾಜೇಶ್ವರಿ ಹಾಗೂ ಈ ಪ್ರಕರಣದಲ್ಲಿ ಸಹಕಾರ ನೀಡಿರುವರೆನ್ನಲಾದ ಇಬ್ಬರು ನರ್ಸ್‍ಗಳು, ಆಯಾ ಸೇರಿದಂತೆ ಒಟ್ಟು ಐವರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ ಎಂದು ತಿಳಿದುಬಂದಿದೆ.