ಮಡಿಕೇರಿ, ಜ. 3: ಅನೇಕ ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಜಿಲ್ಲಾ ಯುವ ಭವನದಲ್ಲಿ ನಡೆಯುತ್ತಿರುವ ಇಲ್ಲಿನ ಸರಕಾರಿ ಮಹಿಳಾ ಪದವಿ ಕಾಲೇಜಿಗೆ ಮಡಿಕೇರಿ ಗೌಡ ಸಮಾಜದ ಬಳಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹಳೆಯ ಬಂಗಲೆ ನಿವೇಶನವನ್ನು ಆಯ್ಕೆ ಮಾಡಲಾಗಿದೆ.ಇಂದು ಮಡಿಕೇರಿ ಕ್ಷೇತ್ರದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಪಿ. ಅಪ್ಪಚ್ಚುರಂಜನ್ ಅವರು ನಗರಸಭೆ ಹಾಗೂ ಕಾಲೇಜು ಶಿಕ್ಷಣ ಅಧಿಕಾರಿ ಗಳೊಂದಿಗೆ (ಮೊದಲ ಪುಟದಿಂದ) ಈ ನಿವೇಶನ ಪರಿಶೀಲಿಸಿ ತಾ. 4ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖ ಕಾಲೇಜು ಕಟ್ಟಡಕ್ಕೆ ಭೂಮಿಪೂಜೆ ಕೈಗೊಳ್ಳಲಾಗುವುದು ಎಂದರು. ಅನೇಕ ವರ್ಷಗಳಿಂದ ನಿವೇಶನಕ್ಕೆ ಹುಡುಕಾಟ ನಡೆದಿದ್ದು, ಪ್ರಸ್ತುತ ಜಿಲ್ಲಾ ಕ್ರೀಡಾಂಗಣದ ಬಳಿ ಈ ನಿವೇಶನ ಕಾಲೇಜಿಗೆ ಸೂಕ್ತವೆಂದು ಅಭಿಪ್ರಾಯಪಟ್ಟರು.ಆ ದಿಸೆಯಲ್ಲಿ ಸ್ವತಃ ಶಾಸಕರೇ ನಿಂತು ಜೆಸಿಬಿ ಯಂತ್ರದಿಂದ ರಾತ್ರಿ ತನಕವು ನಿವೇಶನ ಸಮತಟ್ಟು ಗೊಳಿಸುವ ಕಾರ್ಯಾಚರಣೆಯಲ್ಲಿ ಮುಂದಾಗಿದ್ದರು.

ಜಿಲ್ಲಾ ಕೇಂದ್ರದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಿಂದ ಪದವಿ ಕಾಲೇಜು ತನಕ ಒಂದೇ ಪರಿಸರದಲ್ಲಿ ವ್ಯವಸ್ಥೆ ರೂಪಿತಗೊಳ್ಳಲಿದ್ದು, ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸೂಕ್ತ ರಕ್ಷಣೆ ದೊರಕಲಿದೆ

ಎಂದು ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದರು.

ನಗರಸಭೆ ಆಯುಕ್ತ ಎಂ.ಎಲ್. ರಮೇಶ್, ಪ್ರಮುಖರಾದ ಎ.ಕೆ. ಪಾಲಾಕ್ಷ, ಕೋರನ ಸುನಿಲ್, ಆಪ್ತ ಸಹಾಯಕ ರವಿ ಮತ್ತಿತರರು ಉಪಸ್ಥಿತರಿದ್ದರು.