ಮಡಿಕೇರಿ, ಜ. 3: ಭಾರತ ಪಾಕ್ ನಡುವೆ 1965 ರಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಕೊಡಗಿನ ವೀರಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಆರು ಮುಕ್ಕಾಲು ಅಡಿ ಕಂಚಿನ ಪ್ರತಿಮೆ ನಿರ್ಮಾಣ ಸಂಬಂಧ ನಗರದ ದೇವಯ್ಯ ವೃತ್ತದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ಅಜ್ಜಮಾಡ ಕುಟುಂಬಸ್ಥರು, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮೆಮೋರಿಯಲ್ ಟ್ರಸ್ಟ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಮತ್ತು ಕೊಡವ ಮಕ್ಕಡ ಕೂಟದ ಆಶ್ರಯದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಲಾಯಿತು.
ಈ ಸಂದರ್ಭ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಪ್ರತಿಮೆ ತಲೆಎತ್ತಲಿರುವ ಜಾಗದಲ್ಲಿ ಇರುವ ಹೈ ಮಾಸ್ಕ್ ದೀಪವನ್ನು ನಾಳೆಯೇ ತೆರವುಗೊಳಿಸಬೇಕು, ನಾಳೆಯಿಂದಲೇ ಇಲ್ಲಿ ಪ್ರತಿಮೆ ನಿರ್ಮಾಣ ಸಂಬಂಧ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.
(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮೆಮೊರಿಯಲ್ ಟ್ರಸ್ಟ್ನ ಅಜ್ಜಮಾಡ ಕಟ್ಟಿ ಮಂದಯ್ಯ, ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಸಂಚಾಲಕ ನಿವೃತ್ತ ಮೇಜರ್ ಬಿದ್ದಂಡ ನಂಜಪ್ಪ, ಅಜ್ಜಮಾಡ ಕುಟುಂಬದ ಅಧ್ಯಕ್ಷ ಲವ ಕುಶಾಲಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಮಾಜಿ ಸೈನಿಕ ಹಾಗೂ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ನಗರಸಭೆ ಇಂಜಿನಿಯರ್ ನಾಗರಾಜ್, ಅಜ್ಜಮಾಡ ಕುಟುಂಬಸ್ಥರು, ಮಾಜಿ ಸೈನಿಕರು ಮತ್ತಿತರರು ಇದ್ದರು.