ಗೋಣಿಕೊಪ್ಪ, ಜ. 3: ಗೋಣಿಕೊಪ್ಪಲುವಿನ ಸೆಂಟ್ ಥಾಮಸ್ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಬೆಳ್ತಂಗಡಿಯ ರೆ.ಫಾ. ಲಾರೆನ್ಸ್ ಮುಕ್ವಿ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಸೆಂಟ್ ಥಾಮಸ್ ಇಂಗ್ಲೀಷ್ ಮಾಧ್ಯಮದ ಶಾಲೆ ತನ್ನದೆ ಕೀರ್ತಿ ಪತಾಕೆಯನ್ನು ಹಾರಿಸಿದೆ.ಇದರ ಹಿಂದೆ ಅಪಾರ ಜನತೆಯ ಶ್ರಮ ಶ್ಲಾಘನೀಯ, ಶಿಸ್ತು ಬದ್ಧ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದ ಅವರು; ವಾರ್ಷಿಕ ಫಲಿತಾಂಶದಲ್ಲಿ ಗಣನೀಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು 50 ವರ್ಷದ ಸಾಧನೆಯನ್ನು ಗುಣಗಾನ ಮಾಡಿದರು.

ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಉತ್ತಮ ಫಲಿತಾಂಶಕ್ಕೆ ಸಾಕ್ಷಿಯಾಗಿದೆ ಎಂದರು.

ಮತ್ತೋರ್ವ ಅತಿಥಿ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಬೋದಸ್ವರೂಪನಂದಾಜಿ ಮಹರಾಜ್ ಮಾತನಾಡಿ ತ್ಯಾಗ, ಸೇವೆ ಬಲಿದಾನ, ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇವಲ ಇಂಜಿನಿಯರಿಂಗ್, ಡಾಕ್ಟರ್ ಮಾಡುವುದೆ ಕಾಯಕವಾಗಬಾರದು, ಪ್ರತಿಭೆಯನ್ನು ಗುರುತಿಸಿ ಬೆಳೆಸಬೇಕು ಎಂದರು.

ಗೋಣಿಕೊಪ್ಪ ಶಾಫಿ ಜುಮ್ಮಾ ಮಸೀದಿಯ ಖತೀಬ ಮಹಮದ್ ಹಾಲಿ ಪೈಜಿ ಮಾತನಾಡಿದರು.

ಮೈಸೂರಿನ ಸೆಂಟ್ ಥಾಮಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ರೆ. ಫಾದರ್ ವರ್ಗೀಸ್, ಕಾರ್ಯದರ್ಶಿ ರೆ. ಫಾದರ್ ಜೋಸೆಫ್ ಫಿಲಿಪ್, ಶಾಲೆಯ ಪ್ರಾಂಶುಪಾಲ ರೆ. ಫಾದರ್ ಪಿ.ಕೆ. ಜಾರ್ಜ್, ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ರೆ. ಫಾದರ್ ಅಂತೋಣಿ, ಶಾಲೆಯ ಆಡಳಿತ ಮಂಡಳಿಯ ಎಂ.ಪಿ. ಕೇಶವ್ ಕಾಮತ್, ಅಬ್ದುಲ್ ಸಮ್ಮದ್, ಎ.ಜೆ.ಬಾಬು, ವಿಲ್ಸನ್, ಚೇಂದಿರ ಪ್ರಭಾವತಿ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಪಿ.ಕೆ.ಪ್ರವೀಣ್, ಪ್ರ. ಕಾರ್ಯದರ್ಶಿ ಎಂ.ಕೆ. ಮಾಚಯ್ಯ, ಉಪಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಖಜಾಂಚಿ ಚಂದನ್ ಕಾಮತ್, ಸಂಚಾಲಕ ಶರತ್ ಕಾಂತ್, ಸಿ.ಅರ್. ಪಿ.ಯ. ಜ್ಯೋತಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕಿ ಶುಭ, ಶಾಂತಿ, ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಕವಾಯತು ನಡೆದವು, ಅತಿಥಿಗಳನ್ನು ಬ್ಯಾಂಡ್ ಸೆಟ್, ಚಂಡೆವಾದ್ಯದ ಮೂಲಕ ವೇದಿಕೆಗೆ ವಿದ್ಯಾರ್ಥಿಗಳು ಕರೆ ತಂದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಲವಾರು ಶಿಕ್ಷಕರನ್ನು ಸುವರ್ಣ ಮಹೋತ್ಸವ ಅಂಗವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಅಂಗವಾಗಿ ಕಲಾಂದರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅತಿಥಿಗಳು ಗೌರವಿಸಿದರು.