ಮಡಿಕೇರಿ ಜ.3 : ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ತಾ.10 ಮತ್ತು 11 ರಂದು ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ರವಿ ಅವರು, ಅಥ್ಲೆಟಿಕ್ಸ್‍ನಲ್ಲಿ 40 ವರ್ಷ ಒಳಪಟ್ಟ ಪುರುಷರಿಗೆ 100, 200, 400, 800, 1500, 5000, 10 ಸಾವಿರ ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ, ಜಾವೆಲಿನ್ ಎಸೆತ, 4 *100 ಹಾಗೂ 4* 400 ರಿಲೇ ನಡೆಯಲಿದೆ. ಪಂದ್ಯಾಟಗಳಲ್ಲಿ ವಾಲಿಬಾಲ್, ಫುಟ್ಬಾಲ್, ಹಾಕಿ, ಕಬಡ್ಡಿ, ಕ್ರಿಕೆಟ್, ಚೆಸ್, ಟೇಬಲ್ ಟೆನಿಸ್, ಕೇರಂ, ಲಾನ್ ಟೆನ್ನಿಸ್, ಕುಸ್ತಿ, ವೇಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ದೇಹ ದಾಡ್ರ್ಯ ಸ್ಪರ್ಧೆಗಳು ಜರುಗಲಿವೆ ಎಂದರು.

40 ರಿಂದ 50 ವರ್ಷ ಒಳಪಟ್ಟ ಪುರುಷರಿಗೆ 100, 400, 800 ಮೀ. ಓಟ, ಗುಂಡು ಎಸೆತ, ಡಿಸ್ಕಸ್ ಎಸೆತ, ಟೇಬಲ್ ಟೆನ್ನಿಸ್, ಲಾನ್ ಟೆನ್ನಿಸ್ (ಸಿಂಗಲ್ಸ್) ನಡೆಯಲಿದೆ. 50 ರಿಂದ 60 ವರ್ಷ ಒಳಪಟ್ಟವರಿಗೆ 100, 400, 800 ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ ನಡೆಯಲಿದೆ.

35 ವರ್ಷ ಒಳಪಟ್ಟ ಮಹಿಳೆಯರಿಗೆ ಅಥ್ಲೆಟಿಕ್ಸ್‍ನಲ್ಲಿ 100, 200, 400, 800 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ, ಜಾವೆಲಿನ್ ಎಸೆತ, 4*100 ಮತ್ತು 4* 400 ರಿಲೇ, ಪಂದ್ಯಾಟಗಳಲ್ಲಿ ಥ್ರೋಬಾಲ್, ಕಬಡ್ಡಿ, ಟೆನ್ನಿಕಾಯ್ಟ್ ರಿಂಗ್, ಕೇರಂ, ಟೇಬಲ್ ಟೆನಿಸ್, ಲಾನ್ ಟೆನ್ನಿಸ್, 35 ರಿಂದ 45 ವರ್ಷ ಒಳಪಟ್ಟ ಮಹಿಳೆಯರಿಗೆ 100, 200, 400 ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ, ಟೆನ್ನಿಕಾಯ್ಟ್ ರಿಂಗ್, ಟೇಬಲ್ ಟೆನ್ನಿಸ್ ಸಿಂಗಲ್ಸ್, 45 ರಿಂದ 60 ವರ್ಷ ಒಳಪಟ್ಟವರಿಗೆ 100, 200 ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ ಸ್ಪರ್ಧೆಗಳು ನಡೆಯಲಿವೆ ಎಂದು ರವಿ ವಿವರಿಸಿದರು.

ವೈವಿಧ್ಯಮಯ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಹಿಂದೂಸ್ಥಾನಿ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಕಥಕ್, ಒಡಿಸ್ಸಿ, ಕಥಕ್ಕಳಿ, ಕೂಚುಪುಡಿ, ಮಣಿಪುರಿ, ಭರತನಾಟ್ಯ ಸೇರಿದಂತೆ ಶಾಸ್ತ್ರೀಯ ನೃತ್ಯ, ಜಾನಪದ ಗೀತೆ(ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆ), ಕರಕುಶಲ ವಸ್ತುಗಳ ಪ್ರದರ್ಶನ, ಕಿರುನಾಟಕ, ಜಾನಪದ ನೃತ್ಯ ಸ್ಪರ್ಧೆಗಳು ನಡೆÀಯಲಿವೆ ಎಂದು ತಿಳಿಸಿದರು.

ಕ್ರೀಡಾಕೂಟದಲ್ಲಿ ರಾಜ್ಯ ಸರ್ಕಾರದ ಖಾಯಂ ನೌಕರರು ಮಾತ್ರ ಭಾಗವಹಿಸಲು ಅವಕಾಶವಿದ್ದು, ಪೊಲೀಸ್, ಅರಣ್ಯ, ಅಗ್ನಿಶಾಮಕ, ಅಬಕಾರಿ ಇಲಾಖೆಯ ಲಿಪಿಕ ನೌಕರರು, ಸಿಬ್ಬಂದಿವರ್ಗದವರು ಭಾಗವಹಿಸಬಹುದಾಗಿದೆ. ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಮತ್ತು ಇತರ ಸ್ವಾಯತ್ತ ಸಂಸ್ಥೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರು ಭಾಗವಹಿಸಬಹುದು. ಆದರೆ, ದೈಹಿಕ ಶಿಕ್ಷಣ ಅಧ್ಯಾಪಕರು ಮತ್ತು ಕ್ರೀಡಾ ಇಲಾಖೆಯ ತರಬೇತುದಾರರು ಕ್ರೀಡಾಕೂಟದಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೆ, ವೃತ್ತಿಪರ ಸಂಗೀತ, ನೃತ್ಯ ಶಿಕ್ಷಕರು, ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ. ದಿನಗೂಲಿ ನೌಕರರು, ಅರೆಕಾಲಿಕ ನೌಕರರು, ಮಿತ ವೇತನ ಪದವೀಧರರು, ಸಂಚಿತ ವೇತನದ ನೌಕರರು ಕೂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಒಬ್ಬ ಸ್ಪರ್ಧಿಯು ಟ್ರ್ಯಾಕ್ ಮತ್ತು ಫೀಲ್ಡ್ ಸೇರಿ ಅಥ್ಲೆಟಿಕ್ಸ್‍ನಲ್ಲಿ 3 ಸ್ಪರ್ಧೆ ಮತ್ತು ಗುಂಪು ಸ್ಪರ್ಧೆಗಳಲ್ಲಿ 3 ಆಟಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ. 45 ವರ್ಷ ಮೇಲ್ಪಟ್ಟ ಸ್ಪರ್ಧಿಗಳು 45 ವರ್ಷ ಒಳಪಟ್ಟ ಸ್ಪರ್ಧೆಗಳಲ್ಲಿ ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ಭಾಗವಹಿಸಬಹುದಾಗಿದ್ದು, ಎರಡೂ ವರ್ಗಗಳಲ್ಲಿ ಭಾಗವಹಿಸುವಂತಿಲ್ಲ ಎಂದರು.

ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧೆಗಳು ಜ.10 ರಂದು ಪೂರ್ವಾಹ್ನ 9.30ರ ಒಳಗೆ ಆಯೋಜಕರ ಬಳಿ ವರದಿ ಮಾಡಿಕೊಳ್ಳಬೇಕು. ಭಾಗವಹಿಸುವ ನೌಕರರಿಗೆ ಮಾತ್ರ ಅನ್ಯ ಕಾರ್ಯ ನಿಮಿತ್ತ(ಓಓಡಿ) ಸೌಲಭ್ಯವಿರುತ್ತದೆ ಎಂದು ಕೆ.ಬಿ.ರವಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಎಂ.ಸಿ., ಖಜಾಂಚಿ ಪಿ.ಡಿ. ರಾಜೇಶ್, ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ಪರಿಷತ್ ಸದಸ್ಯ ಪಿ.ಎಸ್. ಜನಾರ್ಧನ್ ಹಾಗೂ ನಿರ್ದೇಶಕ ಎಸ್.ಟಿ.ಶಮ್ಮಿ ಉಪಸ್ಥಿತರಿದ್ದರು.