ಸಿದ್ದಾಪುರ, ಜ.3: ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಪೌರತ್ವ ಕಾಯ್ದೆ ವಿರುದ್ಧ ಸಿದ್ದಾಪುರದಲ್ಲಿ ಸಭೆ ನಡೆಸಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಮಂದಿ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು “ಬೇಡವೇ ಬೇಡ ಪೌರತ್ವ ಕಾಯ್ದೆ ಬೇಡವೇ ಬೇಡ”, “ಜಗ್ಗೋದಿಲ್ಲ ಬಗ್ಗೋದಿಲ್ಲ ಸಿ.ಎ.ಎ. ಯನ್ನು ಒಪ್ಪೋದಿಲ್ಲ,” ಭಿಕ್ಷೆಯಲ್ಲ ಭಿಕ್ಷೆಯಲ್ಲ, ನಿಮ್ಮ ಪೌರತ್ವ ಕಾಯ್ದೆ ನಿಮ್ಮ ಭಿಕ್ಷೆಯಲ್ಲ, ಭಾರತ ದೇಶ ನಮ್ಮ ನಾಡು ಭಾರತ, ಒಂದೇ ತಾಯಿಯ ಮಕ್ಕಳು ನಾವು” ಎಂಬ ಘೋಷಣೆಯನ್ನು ಕೂಗಿದರು.
ಸಿದ್ದಾಪುರದ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿ ವತಿಯಿಂದ ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಚರ್ಚ್ ಮೈದಾನದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಯಿತು. ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಕೇಂದ್ರದ ಬಿ.ಜೆ.ಪಿ ಸರ್ಕಾರವು ಜಾತಿ, ಭಾಷೆ ಆಧಾರದಲ್ಲಿ ಸಂಘರ್ಷ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ದೇಶದ ಭಾಷೆ, ಸಂಸ್ಕøತಿ, ಜನಾಂಗದ ಹೆಸರಿನಲ್ಲಿ ಪರಸ್ಪರ ಹೊಡೆದಾಡುವ ನೀತಿಯನ್ನು ಅನುಸರಿಸುತ್ತಿದೆ ಎಂದರು. ಧರ್ಮದ ಹೆಸರಿನಲ್ಲಿ ಷಡ್ಯಂತರ ನಡೆಸಿ ಅಧಿಕಾರಕ್ಕಾಗಿ ಜನರ ನಡುವೆ ಸಂಘರ್ಷ ಉಂಟು ಮಾಡುತ್ತಿದೆ, ಹಿಂದುತ್ವದ ಹೆಸರಿನಲ್ಲಿ ದೇಶದ ಪರಂಪರೆಗೆ ಧಕ್ಕೆ ತರುತ್ತಿದೆ ಎಂದು ದೂರಿದರು. ಜಾತ್ಯತೀತ ನೆಲೆ ಇರುವ ಈ ದೇಶದಲ್ಲಿ ಜನಾಂಗವನ್ನು ಬೇರ್ಪಡಿಸಿ ಅಶಾಂತಿ ಸೃಷ್ಟಿಸುತ್ತಿರುವ ಕೇಂದ್ರ ಸರ್ಕಾರವು ಅನಗತ್ಯವಾಗಿ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು. ಇತ್ತೀಚೆಗೆ ಶಾಸಕ ಬೋಪಯ್ಯ ಕೊಡಗು ಜಿಲ್ಲೆಯಲ್ಲಿ ಒಂದು ಲಕ್ಷ ಜನ ಹೊರಗಿನವರು ನುಸುಳಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಸಿದ್ದಾಪುರದ ಮಸೀದಿಯ ಖತೀಬ್‍ನೌಫಲ್‍ಉದ್ಮಿ ಮಾತನಾಡಿ ಕೇಂದ್ರ ಸರ್ಕಾರವು ಜಾತಿ ಸಂಘರ್ಷ ಮಾಡಲು ಯತ್ನಿಸುತ್ತಿದೆ. ದೇಶದಲ್ಲಿ ಒಂದೇ ಜಾತಿ, ಒಂದೇ ಮತ ಎಂಬ ಸಂದೇಶ ಇದ್ದರೂ ಕೂಡ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಜಾತಿ - ಧರ್ಮಗಳ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಿದ್ದಾರೆ ಎಂದು ದೂರಿದರು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಮುಸ್ಲಿಮರು ಕೂಡಾ ಹೋರಾಟ ನಡೆಸಿದ್ದಾರೆ. ದೇಶದಲ್ಲಿ ಐಕ್ಯತೆ ಮುಖ್ಯ ಎಂದ ಅವರು; ಸೌಹಾರ್ದತೆಯಿಂದ ಜೀವನ ನಡೆಸುತ್ತಿರುವ ಭಾರತ ದೇಶದಲ್ಲಿ ಪೌರತ್ವ ಕಾಯ್ದೆ ಜಾರಿಗೆ ತಂದಿರುವುದು ಕೇಂದ್ರ ಸರ್ಕಾರದ ಸ್ವಾರ್ಥ ಲಾಭಕ್ಕಾಗಿ ಎಂದು ಟೀಕಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ ಭಾರತೀಯರಾದ ನಾವೆಲ್ಲರೂ ಒಂದೇ ಆದರೆ ಕೇಂದ್ರ ಸರ್ಕಾರವು ಜನ ವಿರೋಧಿ ನೀತಿ ಅನುಸರಿಸುತ್ತಿದ್ದು ಇದರ ವಿರುದ್ಧ ಕಾಂಗ್ರೆಸ್ ಪಕ್ಷವು ಜಾತಿ ಭೇದವಿಲ್ಲದೇ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದರು.
ವಕೀಲ ಎಂ.ಎಸ್. ವೆಂಕಟೇಶ್ ಮಾತನಾಡಿ ಸಂವಿಧಾನದ ರಕ್ಷಣೆ ಮಾಡಬೇಕಾದ ಬಿಜೆಪಿಯ ಕೇಂದ್ರ ಸರ್ಕಾರ ಇತ್ತೀಚೆಗೆ ಅನಗತ್ಯವಾಗಿ ಕಾಯ್ದೆಗಳನ್ನು ಜಾರಿಗೆ ತಂದು ಜನರನ್ನು ಶೋಷಣೆ ಮಾಡುತ್ತಿದೆ ಎಂದು ದೂರಿದರು. ಮೋದಿ ಸರ್ಕಾರವು ನಿರುದ್ಯೋಗಿ ಸಮಸ್ಯೆಯನ್ನು ಬಗೆಹರಿಸು ವುದಾಗಿ ತಿಳಿಸಿದ್ದರೂ ದೇಶದಲ್ಲಿ ನಿರುದ್ಯೋಗಿ ಸಮಸ್ಯೆ ತೀವ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ ದೇಶದಲ್ಲಿ ಜಾರಿಗೆ ತಂದಿರುವ ಪೌರತ್ವದ ವಿರುದ್ಧ ದೇಶದಾದ್ಯಂತ ಹೋರಾಟಗಳು ನಡೆಯುತ್ತಿದ್ದರೂ ಕೂಡಾ ಕೇಂದ್ರ ಸರ್ಕಾರವು ಪೌರತ್ವ ಕಾಯ್ದೆಯ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಟೀಕಿಸಿದರು. ದೇಶದ ಸಂವಿಧಾನದ ಹಕ್ಕುಗಳನ್ನು ಕೇಂದ್ರ ಸರ್ಕಾರವು ಕಸಿಯಲು ಯತ್ನಿಸುತ್ತಿರುವುದು ಖಂಡನೀಯ ಎಂದರು.
ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಮಾತನಾಡಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವವರು ಯಾರು ಭಯೋತ್ಪಾದಕರಲ್ಲ; ಕೇಂದ್ರದ ಬಿಜೆಪಿ ಸರ್ಕಾರವು ಕೇಸರಿ ಧ್ವಜದಲ್ಲಿ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದೇಶದಲ್ಲಿ ಅಶಾಂತಿ ಸೃಷ್ಟಿಸಿದೆ ಎಂದು ದೂರಿದರು. ಹಿಂದುಗಳನ್ನು ಓಲೈಸಿಕೊಂಡು ಮತಬ್ಯಾಂಕ್ ಸೃಷ್ಟಿಸುತ್ತಿರುವ ಬಿಜೆಪಿ ಸರ್ಕಾರವು ಮುಸ್ಲಿಂ ಹಾಗೂ ಹಿಂದೂಗಳ ನಡುವೆ ಕಂದಕಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ದೇಶ ಭಕ್ತರ ಹೆಸರಿನಲ್ಲಿ ದೇಶದಲ್ಲಿ ಸಂಘರ್ಷ ಉಂಟುಮಾಡುತ್ತಿರುವ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ಜಾರಿಗೆ ತರುತ್ತಿರುವುದು ಖಂಡನೀಯ ಎಂದರು.
ಸಾಮಾಜಿಕ ಕಾರ್ಯಕರ್ತ ಎ.ಎಸ್. ಮುಸ್ತಫ ಪ್ರಾಸ್ತಾವಿಕ ಮಾತನಾಡಿ; ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಸಂವಿಧಾನ ವಿರೋಧಿ ಹಾಗೂ ಮನುಷ್ಯ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಧರ್ಮಾಧಾರಿತ ಪೌರತ್ವವನ್ನು ಜಾರಿಗೆ ತರುತ್ತಿರುವುದು ಖಂಡನೀಯ ಎಂದರು. ಪೌರತ್ವದ ವಿರುದ್ಧ ಯಾವ ಹೋರಾಟಕ್ಕೂ, ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದರು. ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಮೂಲಕ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಸುತ್ತಿದೆ ಎಂದು ದೂರಿದರು.
ಸಭೆಯ ಅಧ್ಯಕ್ಷತೆಯನ್ನು ಕೆ.ಯು. ಅಬ್ದುಲ್ ಮಜೀದ್ ವಹಿಸಿದ್ದರು. ವೇದಿಕೆಯಲ್ಲಿ ಸಿದ್ದಾಪುರದ ಜುಮ್ಮ ಮಸೀದಿಯ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಗ್ರಾ.ಪಂ ಅಧ್ಯಕ್ಷ ಮಣಿ, ಸಮಾಜ ಸೇವಕ ಜೋಸೆಫ್ ಶ್ಯಾಂ, ತೌಸಿಫ್, ಪಿ.ಎಂ. ಖಾಸೀಂ, ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ಎಂ.ಎಸ್. ಮುಸ್ತಫಾ ಸ್ವಾಗತಿಸಿದರು. ಎಂ.ಎ. ಅಜೀಜ್ ಕಾರ್ಯಕ್ರಮ ನಿರೂಪಿಸಿದರು. ಬಶೀರ್ ವಂದಿಸಿದರು. ಇದೇ ಸಂದರ್ಭದಲ್ಲಿ ಸಿದ್ದಾಪುರದ ಪಿ.ಡಿ.ಓ. ವಿಶ್ವನಾಥ್ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು.
ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಠಾಣಾಧಿಕಾರಿ ಬೋಜಪ್ಪ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.