ಸಿದ್ದಾಪುರ, ಜ. 3: ಇಂದು ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳುತ್ತಿದ್ದ ವೇಳೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿನಿ ಯೋರ್ವಳು ಗಂಭೀರವಾಗಿ ಗಾಯಗೊಂಡು; ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂಜಿಲಗೆರೆಯಲ್ಲಿ ನಡೆದಿದೆ. ಇಂಜಿಲಗೆರೆಯ ಪುಲಿಯೇರಿ ಗ್ರಾಮದ ಸ್ಕೂಲ್ ಎಸ್ಟೇಟ್ನ ಲೈನ್ ಮನೆಯಲ್ಲಿ ವಾಸಮಾಡಿಕೊಂಡಿರುವ ಮಣಿ ಎಂಬವರ ಮಕ್ಕಳಾದ ನಿತ್ಯಶ್ರೀ ಹಾಗೂ ಯುವಶ್ರೀ ಮನೆಯಿಂದ ಇಂಜಿಲಗೆರೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಳಿಗ್ಗೆ 8.15ರ ಸಮಯಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿರುವ ಸಂದರ್ಭ ಏಕಾಏಕಿ ತೋಟದಿಂದ ಒಂಟಿ ಸಲಗವೊಂದು ದಾಳಿ ನಡೆಸಿದೆ. ಈ ಸಂದರ್ಭ ಸಲಗವು ಯುವಶ್ರೀ (7) ಎಂಬಾಕೆಯನ್ನು ಸೊಂಡಿಲಿನಿಂದ ಎಸೆದ ಪರಿಣಾಮ ಬಾಲಕಿಯ ತಲೆಯ ಭಾಗಕ್ಕೆ ಹಾಗೂ ಮುಖ ಹಾಗೂ ದವಡೆಯ ಭಾಗಕ್ಕೆ, ಕಣ್ಣಿನ ಬಳಿ ಗಾಯವಾಗಿದೆ.
(ಮೊದಲ ಪುಟದಿಂದ) ಈ ಸಂದರ್ಭ ಜೊತೆಯಲ್ಲಿದ್ದ ಆಕೆಯ ಅಕ್ಕ ನಿತ್ಯಶ್ರೀ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ಸಂದರ್ಭ ಬಿದ್ದು ಕಾಲಿಗೆ ಗಾಯವಾಗಿದೆ. ಗಾಯಗೊಂಡಿರುವ ಯುವಶ್ರೀ ಇಂಜಿಲಗೆರೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ನಿತ್ಯಶ್ರೀ 4ನೇ ತರಗತಿ ಓದುತ್ತಿದ್ದಾಳೆ. ಕಾಡಾನೆಯ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿರುವ ಯುವಶ್ರೀಗೆ ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಯನ್ನು ಮಡಿಕೇರಿಯ ಜಿಲ್ಲಾ ಆಸ್ಪೆತ್ರೆಯಲ್ಲಿ ನೀಡಲಾಯಿತು. ಬಳಿಕ ಹಲ್ಲುಗಳಿಗೂ ತೊಂದರೆಯಾಗಿರುವ ಕಾರಣ ಆಕೆಯನ್ನು ವೀರಾಜಪೇಟೆಯ ದಂತ ಮಹಾವಿದ್ಯಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅರಣ್ಯ ಇಲಾಖಾ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರೂ ಕೂಡಾ ಅಧಿಕಾರಿಗಳು, ಸಿಬ್ಬಂದಿ ತಡವಾಗಿ ಆಗಮಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಇಲಾಖೆಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಇಂಜಿಲಗೆರೆ, ಪುಲಿಯೇರಿ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಈ ಭಾಗದ ಕಾಫಿ ತೋಟ ಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆ ಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಇಂಜಿಲಗೆರೆ ಪುಲಿಯೇರಿ ಭಾಗದಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಒಂದೆರಡು ದಿನಗಳಲ್ಲಿ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲು ಕ್ರಮಕೈಗೊಳ್ಳಲಾಗುವದೆಂದು ವೀರಾಜಪೇಟೆ ವಲಯ ಎ.ಸಿ.ಎಫ್. ರೋಶಿನಿ ಮಾಹಿತಿ ನೀಡಿದರು.
ಶಿಕ್ಷಕಿ ಅಳಲು: ಕಾಡಾನೆ ದಾಳಿ ಕುರಿತು ಪ್ರತಿಕ್ರಿಯಿಸಿದ ಶಾಲಾ ಶಿಕ್ಷಕಿ ಲತಾ, ನಿರಂತರ ಕಾಡಾನೆ ಉಪಟಳದಿಂದ ಮಕ್ಕಳು ಶಾಲೆಗೆ ಬರುತ್ತಿಲ್ಲವೆಂದು, ಇಂದಿನ ಘಟನೆಯಿಂದ 17 ಮಕ್ಕಳ ಪೈಕಿ ಒಂದು ಮಗು ಮಾತ್ರ ಶಾಲೆಗೆ ಬಂದಿರುವುದಾಗಿ ಅಳಲು ತೋಡಿಕೊಂಡರು. ಕಾರ್ಮಿಕರ ಮಕ್ಕಳೇ ಹೆಚ್ಚಾಗಿರುವ ಕಾರಣ ಬಸ್ ಸೌಲಭ್ಯಕ್ಕೆ ಕೋರಿದ್ದರೂ ಯಾರೂ ಸ್ಪಂದಿಸಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ವರದಿ: ವಾಸು ಎ.ಎನ್