ಮಡಿಕೇರಿ, ಡಿ. 31: ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ವತಿಯಿಂದ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಇಂದು ವಿದ್ಯಾರ್ಥಿ ಸಮೂಹಕ್ಕೆ ಸ್ವಚ್ಛತೆಯ ಕುರಿತು ಜಾಗೃತಿ ಕಾರ್ಯಕ್ರಮ ನೀಡಲಾಯಿತು.
ಕೇಂದ್ರ ಸರಕಾರದ ಪ್ರವಾಸೋದ್ಯಮ ಮಂತ್ರಾಲಯದ ಪ್ರತಿನಿಧಿಗಳಾದ ದೀಪಿಕಾ, ಜಯಕುಮಾರನ್ ಹಾಗೂ ರಮೇಶನ್ ತಂಡ ಶಾಲೆಗೆ ಖುದ್ದು ಭೇಟಿ ನೀಡಿ ಮಕ್ಕಳೊಂದಿಗೆ ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನ ಕುರಿತು ಸಂವಾದ ನಡೆಸಿತು.
ಅಲ್ಲದೆ ಸ್ವಚ್ಛತಾ ಜಾಗೃತಿ ಕುರಿತು ಮಕ್ಕಳು ಅನುಸರಿಸಬೇಕಾದ ಜವಾಬ್ದಾರಿಗಳ ಕುರಿತು ನೆನಪಿಸಲಾಯಿತು. ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಬಿ.ಎಂ. ಸರಸ್ವತಿ, ಉಪನ್ಯಾಸಕಿ ಸವಿತಾ, ನಿವೃತ್ತ ಪ್ರಾಂಶುಪಾಲೆ ಎಂ.ಎ. ಪೊನ್ನಪ್ಪ ಹಾಗೂ ಸರಕಾರದ ಪ್ರತಿನಿಧಿಗಳು ಮಕ್ಕಳಲ್ಲಿ ಅರಿವು ಮೂಡಿಸಿದರು.
ಕೊಡಗು ಪ್ರವಾಸೋದ್ಯಮ ಇಲಾಖೆಯ ಚೇತನ್ ಹಾಗೂ ಸಂಗಡಿಗರ ಕಾರ್ಯಕ್ರಮ ಆಯೋಜಿಸಿದ್ದು, ವಿದ್ಯಾ ಸಾಗರ ಕಲಾ ಬಳಗದಿಂದ ರಾಜು ಅವರ ತಂಡದಿಂದ ಭೂಮಾತೆಯ ಕುರಿತು ಹಾಡುಗಾರಿಕೆಯೊಂದಿಗೆ ಸ್ವಚ್ಛತೆಯ ಬಗ್ಗೆ ಬೀದಿ ನಾಟಕ ಮುಖಾಂತರ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು. ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿ ಸಮೂಹದವರು ಪಾಲ್ಗೊಂಡಿದ್ದರು.
ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಇಂದು ಎಲ್ಲೆಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಮ್ಮ ತಂಡ ಕೊಡಗಿನಲ್ಲಿ ಈ ಸಂಬಂಧ ಅರಿವು ಮೂಡಿಸಲು ಜನರಲ್ ತಿಮ್ಮಯ್ಯ ಶಾಲೆಯನ್ನು ಆರಿಸಿಕೊಂಡಿದ್ದಾಗಿ ಕೇಂದ್ರ ಸರಕಾರದ ಪ್ರತಿನಿಧಿಗಳ ತಂಡದ ದೀಪಿಕಾ ಮಾಹಿತಿ ನೀಡಿದರು.
ಆ ಮುನ್ನ ನಗರದ ರಾಜಾಸೀಟ್, ಕೋಟೆ ಆವರಣದಲ್ಲಿ ಪ್ರವಾಸಿಗಳಿಗೆ ಇಲಾಖೆಯ ವತಿಯಿಂದ ಸ್ವಚ್ಛತೆಗಾಗಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.