ಮಡಿಕೇರಿ, ಡಿ.31 : ಮಡಿಕೇರಿ ನಗರದ ರಸ್ತೆಗಳ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮಡಿಕೇರಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಜಾತ್ಯತೀತ ಜನತಾದಳ(ಜೆಡಿಎಸ್) ಮಹಿಳಾ ಘಟಕ, ನಗರಸಭೆಯ ಪೌರಾಯುಕ್ತರ ವಿರುದ್ಧ ತಾ.6ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ ನಗರದ ಬಹುತೇಕ ಎಲ್ಲಾ ರಸ್ತೆಗಳು ಗುಂಡಿ ಬಿದ್ದು ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಇದೆ. ಇದನ್ನು ಅಭಿವೃದ್ಧಿಪಡಿಸುವಂತೆ ಹಲವಾರು ಬಾರಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಹಲವು ಸಂಘಟನೆಗಳು ಪ್ರತಿಭಟನೆಗಳನ್ನೂ ನಡೆಸಿವೆ. ಆದರೆ ಇದ್ಯಾವುದಕ್ಕೂ ಸ್ಪಂದಿಸದ ಪೌರಾಯುಕ್ತರು ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಗರ ವ್ಯಾಪ್ತಿಯ ರಸ್ತೆಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಅಗೆದಿದ್ದ ರಸ್ತೆಗಳನ್ನು ಈಗಾಗಲೇ ಗುಂಡಿ ಮುಚ್ಚಿದ್ದರೂ, ಉಳಿದ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಗರಸಭೆ ವಿಫಲವಾಗಿದೆ. ಮತ್ತೆ ಮಳೆ ಆರಂಭವಾಗಲಿದ್ದು, ಅದರೊಳಗಾಗಿ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಆದರೆ ಪೌರಾಯುಕ್ತರು ಮಾತ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದು, ಕನಿಷ್ಟ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನೂ ಮಾಡುತ್ತಿಲ್ಲ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಲೀಲಾ ಶೇಷಮ್ಮ ಟೀಕಿಸಿದರು.

ನಗರದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಈ ಬಗ್ಗೆ ಪ್ರಶ್ನಿಸಿದರೆ ಮೋಟಾರು ಕೆಟ್ಟಿದೆ ಎಂಬ ಉತ್ತರ ಬರುತ್ತಿದೆ. ನಗರೋತ್ಥಾನ ಯೋಜನೆಯಡಿ ಪ್ರತಿ ವರ್ಷ ಸುಮಾರು 12 ಕೋಟಿ ರೂ.ಗಳನ್ನು ಕುಡಿಯುವ ನೀರಿನ ಸರಬರಾಜಿಗಾಗಿ ವಿನಿಯೋಗಿಸಲಾಗುತ್ತಿದ್ದರೂ, ಮೋಟಾರು ದುರಸ್ತಿ ಮಾಡಲಾಗದ ಸ್ಥಿತಿಯಲ್ಲಿ ನಗರಸಭೆ ಇದೆ. ಇದಕ್ಕೆ ಪೌರಾಯುಕ್ತರ ನಿರ್ಲಕ್ಷ್ಯವೇ ಕಾರಣ ಎಂದು ಅವರು ಆರೋಪಿಸಿದರು.

ರಜೆ ಹಾಕಿ ತೆರಳುವುದರೊಂದಿಗೆ ಇತರ ಅಧಿಕಾರಿಗಳ ನೇಮಕಕ್ಕೆ ಪೌರಾಯುಕ್ತರು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ ಲೀಲಾ ಶೇಷಮ್ಮ, ನಗರಸಭೆಯ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಖಚಿತವೆಂದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದ, ಪ್ರಧಾನ ಕಾರ್ಯದರ್ಶಿ ಜೆಸಿಂತಾ ಹೂವಲ್ಲಿ, ಉಪಾಧ್ಯಕ್ಷೆ ಮಮತಾ ಹಾಗೂ ಸದಸ್ಯೆ ಸುಜಾತ ಉಪಸ್ಥಿತರಿದ್ದರು.