ಶ್ರೀಮಂಗಲ, ಡಿ. 1: ಶ್ರೀಮಂಗಲ ನಾಡು ಕೊಡವ ಸಮಾಜದ ಆಶ್ರಯದಲ್ಲಿ ಶ್ರೀಮಂಗಲ ಕೊಡವ ಸಮಾಜ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮುಕ್ತ ತೆಂಗಿನ ಕಾಯಿಗೆ ಪಾಯಿಂಟ್ 22 ಕೋವಿಯಲ್ಲಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಬಡುವಂಡ ದೇವಯ್ಯ, (ಮೂರ್ನಾಡು) ಪ್ರಥಮ, ಮುಂಡಂಡ ಪವಿಸೋಮಣ್ಣ (ಮೂರ್ನಾಡು) ದ್ವೀತಿಯ ಹಾಗೂ ಕುಪ್ಪುಡಿರ ಪ್ರಖ್ಯಾತ್‍ಚಿಣ್ಣಪ್ಪ(ಬಾಡಗರಕೇರಿ) ತೃತೀಯ ಸ್ಥಾನ ಪಡೆದುಕೊಂಡರು.
ಪ್ರಥಮ ಬಹುಮಾನ ರೂ 10 ಸಾವಿರ, ದ್ವಿತೀಯ ಬಹುಮಾನ ರೂ. 7 ಸಾವಿರ ಹಾಗೂ ತೃತೀಯ ಬಹುಮಾನ ರೂ. 5 ಸಾವಿರ ನಗದು ಮತ್ತು ಟ್ರೋಫಿಯನ್ನು ವಿಜೇತರಿಗೆ ನೀಡಲಾಯಿತು.
ಇದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯರು ಹಾಗೂ ಶ್ರೀಮಂಗಲ ಕೊಡವ ಸಮಾಜದ ನಿರ್ದೇಶಕ ಬಾದುಮಂಡ ಚಿಮ್ಮಉತ್ತಯ್ಯ ಮತ್ತು ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಅವರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಪೈಪೋಟಿಯನ್ನು ಜಂಟಿಯಾಗಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಚಿಮ್ಮಉತ್ತಯ್ಯ ಅವರು ಕೊಡವ ಸಮಾಜದ ಆಶ್ರಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಿಂದ ಗ್ರಾಮೀಣ ಭಾಗದಲ್ಲಿನ ಪ್ರತಿಭೆಗಳಿಗೆ ಮತ್ತು ಕ್ರೀಡೆಗೆ ಉತ್ತೇಜನ ನೀಡಿದಂತಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ತೋಟ, ಗದ್ದೆಗಳಲ್ಲಿಯೇ ದಿನನಿತ್ಯ ತೊಡಗಿಸಿಕೊಳ್ಳುವ ಸ್ಥಳೀಯರಿಗೆ ಇಂತಹ ಕಾರ್ಯಕ್ರಮಗಳು ಮನೋರಂಜನೆಯನ್ನು ನೀಡುತ್ತವೆ ಎಂದು ಹೇಳಿದರು.
ಮತ್ತೊಬ್ಬ ಅತಿಥಿ ಅಣ್ಣೀರ ಹರೀಶ್‍ಮಾದಪ್ಪ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರು, ಮಕ್ಕಳು ಸೇರಲು ಅವಕಾಶವಾಗುತ್ತದೆ. ಎಲ್ಲರೂ ಒಂದಾಗಿ ಸೇರುವ ಸಂದರ್ಭ ವಿಚಾರ ವಿನಿಮಯ, ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತೆ ಅರಿವು ಮೂಡುತ್ತದೆ. ಮನೋರಂಜನೆ ಯೊಂದಿಗೆ ಸ್ಥಳೀಯರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುತ್ತದೆ. ಆಗಾಗ ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದÀ ಸ್ಥಳೀಯರು ಬೆರೆಯಲು ಅವಕಾಶವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮಂಗಲ ನಾಡು ಕೊಡವ ಸಮಾಜದ ಅಧ್ಯಕ್ಷ ಚೋನಿರ ರತನ್ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸ ಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಸ್ಪರ್ಧಾರ್ಥಿಗಳು ಆಗಮಿಸಿದ್ದಾರೆ. ಕೊಡವ ಸಮಾಜದ ಪ್ರಯತ್ನಕ್ಕೆ ಉತ್ತಮ ಸ್ಪಂದನ ದೊರೆತಿದೆ ಎಂದು ಹೇಳಿದರು.
ಕೊಡವ ಸಮಾಜದ ಕಾರ್ಯದರ್ಶಿ ಮಚ್ಚಮಾಡ ವಿಜಯ್ ಅವರು ಮಾತನಾಡಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಬೆಂಬಲ ದೊರೆತಿದೆ. ಮಹಿಳೆಯರು, ಮಕ್ಕಳು, ಯುವಕರು ಮತ್ತು ವಯಸ್ಕರು ಸಹ ಪೈಪೋಟಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಉತ್ತಮ ಸ್ಪಂದನ ದೊರೆತಿರುವ ಹಿನ್ನೆಲೆಯಲ್ಲಿ ಮುಂದಿನ ಬಾರಿಯೂ ಈ ಪೈಪೋಟಿಯನ್ನು ಆಯೋಜಿಸಲು ಕೊಡವ ಸಮಾಜ ಚಿಂತನೆ ನಡೆಸಲಿದೆ ಎಂದು ಹೇಳಿದರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ಪಾಲ್ಗೊಂಡು ವಿಜೇರಿಗೆ ಟ್ರೋಫಿ ಹಾಗೂ ನಗದನ್ನು ವಿತರಿಸಿದರು.