ನಾಪೋಕ್ಲು, ಡಿ. 31: ಪಟ್ಟಣದ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಹಾಗೂ ಚೆರಿಯಪರಂಬು ಮಖಾಂಗೆ ತೆರಳುವ ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಕಸದ ರಾಶಿಯಿಂದಾಗಿ ಪರಿಸರವೆಲ್ಲಾ ಗಬ್ಬೆದ್ದು ನಾರುತ್ತಿದೆ.

ಲೋಡ್‍ಗಟ್ಟಲೇ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ರಸ್ತೆಬದಿಯಲ್ಲಿ ತಂದು ಎಸೆಯ ಲಾಗಿದ್ದು, ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿಗಳು, ಊಟದ ತಟ್ಟೆಗಳು ಸೇರಿದಂತೆ ಕಸದ ರಾಶಿಯನ್ನು ಜಾನುವಾರುಗಳು ಹಾಗೂ ಬೀದಿನಾಯಿಗಳು ಎಳೆದಾಡಿರು ವುದರಿಂದ ಕಸವೆಲ್ಲಾ ಹರಡಿ ದುರ್ನಾತ ಬೀರುತ್ತಿದೆ. ರಸ್ತೆ ಯಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡು ವಂತಾಗಿದೆ ಸ್ಥಳೀಯ ನಿವಾಸಿಗಳಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ.

ಯಾರೋ ಸಭೆ, ಸಮಾರಂಭ ಗಳನ್ನು ನಡೆಸಿದ ಬಳಿಕ ಇಲ್ಲಿ ತ್ಯಾಜ್ಯಗಳನ್ನು ತಂದು ಸುರಿಯಲಾಗಿದೆ ಎನ್ನಲಾಗಿದ್ದು, ಪಟ್ಟಣದ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಕೇವಲ ಗ್ರಾಮ ಪಂಚಾಯ್ತಿಯನ್ನು ಮಾತ್ರ ಹೊಣೆಗಾರಿಕೆ ಮಾಡುವ ಬದಲು ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಎಲ್ಲರ ಜವಾಬ್ದಾರಿ ಎಂಬುದನ್ನು ಹೀಗೆ ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ತಂದು ಎಸೆಯು ವವರು ಅರ್ಥಮಾಡಿ ಕೊಳ್ಳಬೇಕಿದೆ.

ಜನರಲ್ ತಿಮ್ಮಯ್ಯ ಕ್ರೀಡಾಂಗಣ ಹಾಗೂ ಚೆರಿಯಪರಂಬು ಮಖಾಂಗೆ ತೆರಳುವ ರಸ್ತೆಯಲ್ಲಿ ಯಾರೋ ತ್ಯಾಜ್ಯವನ್ನು ತಂದು ಸುರಿದಿರುವು ದರಿಂದ ಪರಿಸರವೆಲ್ಲಾ ದುರ್ಗಂಧ ಬೀರುತ್ತಿದ್ದು, ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡುವಂತೆ ಕೇವಲ ಗ್ರಾಮ ಪಂಚಾಯ್ತಿಯನ್ನೇ ಹೊಣೆಗಾರಿಕೆ ಮಾಡುವುದು ಸರಿಯಲ್ಲ; ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಇನ್ನಾದರೂ ಎಲ್ಲೆಂದರಲ್ಲಿ ತ್ಯಾಜ್ಯವನ್ನು ತಂದು ಸುರಿಯದಂತೆ ಶುಚಿತ್ವದ ಕಡೆಗೆ ಗಮನ ಹರಿಸಬೇಕೆಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಸಲೀಂ ಹ್ಯಾರಿಸ್ ಅಭಿಪ್ರಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ವತಿಯಿಂದ ಸಂತೆ ಮಾರುಕಟ್ಟೆ ಬಳಿಯಲ್ಲಿ ಈಗಾಗಲೇ 2 ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಿ, ಇಬ್ಬರು ಶುಚಿತ್ವಗಾರರಿಂದ ಒಣಕಸ ಹಾಗೂ ಹಸಿಕಸವನ್ನು ವಿಂಗಡಿಸ ಲಾಗುತ್ತಿದೆ. ಹಸಿಕಸ ಹಾಗೂ ಒಣಕಸವನ್ನು ವಿಂಗಡಣೆ ಮಾಡಿ ಪಂಚಾಯ್ತಿಯ ಕಸದ ವಾಹನಕ್ಕೆ ನೀಡುವಂತೆ ಪಟ್ಟಣ ವ್ಯಾಪ್ತಿಯ ನಾಗರಿಕರು ಹಾಗೂ ವರ್ತಕರಲ್ಲಿ ಅರಿವು ಮೂಡಿಸಲಾಗಿದ್ದು, ಸಮರ್ಪಕ ಕಸವಿಲೇವಾರಿ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಆದರೂ ಯಾರೋ ಸಭೆ ಸಮಾರಂಭಗಳನ್ನು ನಡೆಸಿದ ಬಳಿಕ ಕಸವನ್ನು ಇಲ್ಲಿ ತಂದು ಸುರಿಯುತ್ತಿ ರುವುದು ಸರಿಯಲ್ಲ. ಪಟ್ಟಣದ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಗ್ರಾಮ ಪಂಚಾಯಿತಿ ಯೊಂದಿಗೆ ಕೈಜೋಡಿಸಬೇಕಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಹೇಳಿದ್ದಾರೆ. -ದುಗ್ಗಳ