ಕೂಡಿಗೆ, ಡಿ.31 : ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರು ಇಲ್ಲದೆ, ಈ ವ್ಯಾಪ್ತಿಯ ರೋಗಿಗಳು ಪರದಾಡುವ ಪ್ರಸಂಗ ದಿನಂಪ್ರತಿ ಕಂಡು ಬರುತ್ತಿದೆ. ಈ ಆರೋಗ್ಯ ಕೇಂದ್ರಕ್ಕೆ ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿ ಮತ್ತು ಕುಶಾಲನಗರ ಅಂಗನವಾಡಿ ವಲಯಗಳು ಸೇರ್ಪಡೆಗೊಂಡಿವೆ. ಜಿಲ್ಲೆಯಲ್ಲಿಯೇ ಕೈಗಾರಿಕಾ ಘಟಕಗಳನ್ನು ಹೊಂದಿರುವ ಪ್ರದೇಶದಲ್ಲಿ ಹೆಚ್ಚು ಕಾರ್ಮಿಕರು ಸೇರಿದಂತೆ ದಿನಂಪ್ರತಿ 150 ಕ್ಕೂ ಹೆಚ್ಚು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ.
ಕಳೆದ ಹತ್ತು ವರ್ಷಗಳಿಂದ ಖಾಯಂ ವೈದ್ಯರು ಈ ಆಸ್ಪತ್ರೆಯಲ್ಲಿ ಇದ್ದರು. ಆದರೆ, ಮೂರ್ನಾಲ್ಕು ತಿಂಗಳುಗಳಿಂದ ಅಲ್ಲಿದ್ದ ವೈದ್ಯರನ್ನು ವರ್ಗಾವಣೆ ಮಾಡಿದ ಪರಿಣಾಮ ಅಂದಿನಿಂದ ದಿನಕ್ಕೊಬ್ಬರಂತೆ ಹೆಬ್ಬಾಲೆ, ಕುಶಾಲನಗರ, ನಂಜರಾಯಪಟ್ಟಣ ಆಸ್ಪತ್ರೆಯ ವೈದ್ಯರು ಸೇವೆ ಒದಗಿಸುತ್ತಿದ್ದಾರೆ. ಆದರೆ ಈ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳು, ಕಚೇರಿಗಳು ಹೆಚ್ಚಿರುವುದರಿಂದ ಹೆಚ್ಚು ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರುವುದರಿಂದ ಖಾಯಂ ವೈದ್ಯರ ಅವಶ್ಯಕತೆ ಇದೆ. ಖಾಯಂ ವೈದ್ಯರ ಜೊತೆಗೆ ನರ್ಸ್‍ಗಳ ನೇಮಕವೂ ಕೂಡ ಆಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.