ಮಡಿಕೇರಿ, ಡಿ. 30: ಇತಿಹಾಸದ ಕಾಲಘಟ್ಟಕ್ಕೆ 2019ನೇ ಕ್ಯಾಲೆಂಡರ್ ವರ್ಷ ಸೇರ್ಪಡೆಗೊಳ್ಳುತ್ತಿದೆ... ಹಲವಾರು ಘಟನಾವಳಿಗಳು... ಸಿಹಿ... ಕಹಿ ಘಟನೆಗಳು, ರಾಜಕೀಯ ಏಳು - ಬೀಳುಗಳ ನೆನಪುಗಳನ್ನು ಜನಮಾನಸಕ್ಕೆ ಬಿಟ್ಟು 2019ನೇ ವರ್ಷ ಮರೆಯಾಗುತ್ತಿದೆ. ಈ ವರ್ಷದಲ್ಲಿ ಜಿಲ್ಲೆಯಲ್ಲಿ ಘಟಿಸಿದ ವಿಚಾರಗಳ ಕುರಿತಾದ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ...2018ರಲ್ಲಿ ಕೊಡಗು ಈ ಹಿಂದೆಂದೂ ಕಂಡು ಕೇಳರಿಯದ ಪ್ರಾಕೃತಿಕ ದುರಂತಕ್ಕೆ ಸಿಲುಕಿ ನಲುಗಿತ್ತು. ಈ ದುರಂತದ ಧಾರುಣತೆಯನ್ನು ಒಂದಷ್ಟು ಸರಿಪಡಿಸುವ ವಿವಿಧ ರೀತಿಯ ಪ್ರಯತ್ನಗಳು ನಡೆಯುತ್ತಿದ್ದ ಬೆನ್ನಲ್ಲೇ ಕೊಡಗು ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ ಜಿಲ್ಲೆಯಿಂದ ನಿರ್ಗಮಿಸಿದ್ದರು. ಫೆಬ್ರವರಿ ತಿಂಗಳಿನಲ್ಲಿ ನೂತನ ಜಿಲ್ಲಾಧಿಕಾರಿಯಾಗಿ ಅನೀಸ್ ಕಣ್ಮಣಿ ಜಾಯ್ ಅವರು ನಿಯುಕ್ತಿಗೊಂಡರು. ಜಿಲ್ಲೆಯಲ್ಲಿ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕು ರಚನೆಯ ಬೇಡಿಕೆಗೆ ಮಾರ್ಚ್ ತಿಂಗಳಿನಲ್ಲಿ ಸರಕಾರದ ಒಪ್ಪಿಗೆ ದೊರೆಯಿತು. ಕೊಡವ ಜನಾಂಗದಲ್ಲಿ ಮದುವೆ ಸಂದರ್ಭ ಗಂಗಾಪೂಜೆಯ ಅವಧಿಯಲ್ಲಿ ಮದ್ಯ ಬಳಕೆಯ ನಿಷೇಧಕ್ಕೆ ಅಮ್ಮತ್ತಿ ಕೊಡವ ಸಮಾಜ ಮುನ್ನಡಿಬರೆದಿದ್ದೂ ಮಾರ್ಚ್ ತಿಂಗಳಿನಲ್ಲಿ. ಏಪ್ರಿಲ್ ಹಾಗೂ ಮೇ ತಿಂಗಳು ಕೊಡಗಿನಲ್ಲಿ ಜನಾಂಗೀಯ ಕ್ರೀಡಾಕೂಟಗಳ ಸಂಭ್ರಮವಿರುತ್ತಿತ್ತು. ಆದರೆ ಪ್ರತಿಷ್ಠಿತ ಹಾಕಿ ನಮ್ಮೆಯೂ ಸೇರಿದಂತೆ ವಿವಿಧ ಕ್ರೀಡಾ ಹಬ್ಬಗಳು ಹಿಂದಿನ ವರ್ಷದ ದುರಂತದಿಂದಾಗಿ ಈ ಬಾರಿ ಜರುಗಲಿಲ್ಲ. ಏಪ್ರಿಲ್ - ಮೇ ತಿಂಗಳು ಈ ಬಾರಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಕದನಕ್ಕೆ ಸಾಕ್ಷಿಯಾಗಿತ್ತು. ಹಲವಾರು ರಾಜಕೀಯ ಧುರೀಣರ - ಚಟುವಟಿಕೆಗಳು ಗರಿಗೆದರಿದ್ದವು. ಚುನಾವಣೆಯ ಬಳಿಕ ಮೇ 24ರಂದು ನಡೆದ ಮತ ಎಣಿಕೆಯಲ್ಲಿ ನೂತನ ಸಂಸದರಾಗಿ ಪ್ರತಾಪ್ ಸಿಂಹ ಪುನಾರಾಯ್ಕೆಗೊಂಡರು. ಸರ್ವೋಚ್ಚ ನ್ಯಾಯಾಲಯದ ಓರ್ವ ನ್ಯಾಯಾಧೀಶರಾಗಿ ಜಸ್ಟೀಸ್ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರ ಆಯ್ಕೆ ಜಿಲ್ಲೆಗೆ ಸಂತಸ ತಂದಿತ್ತು.

ಈ ವರ್ಷದ ಬೇಸಿಗೆಯ ಸಂದರ್ಭದಲ್ಲಿ ಹಾಗೂ ವಾಡಿಕೆಯಂತೆ ಮಳೆಗಾಲ ಕಂಡುಬರುವ ಜೂನ್ - ಜುಲೈ ತಿಂಗಳಿನಲ್ಲಿ ನಿರೀಕ್ಷಿತ

(ಮೊದಲ ಪುಟದಿಂದ) ಮಳೆ ಸುರಿಯದೆ ಈ ಸಂದರ್ಭದಲ್ಲಿ ಬರಗಾಲದ ಛಾಯೆ ಗೋಚರಿಸಿದ್ದೂ ಆಗಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಮತ್ತೊಮ್ಮೆ 2018ರ ದುರಂತವನ್ನು ಮರುಕಳಿಸುವಂತ ರೀತಿಯಲ್ಲಿ ಭಾರೀ ಮಳೆ - ಗಾಳಿ - ಬೆಟ್ಟ- ಗುಡ್ಡಗಳ ಕುಸಿತದೊಂದಿಗೆ ಸತತ ಎರಡನೆಯ ವರ್ಷವೂ ಸಾವು - ನೋವುಗಳು, ಆಸ್ತಿ - ಪಾಸ್ತಿ ನಷ್ಟಗಳು ನಡೆದು ಹೋಯಿತು. ಆಗಸ್ಟ್ - ಸೆಪ್ಟೆಂಬರ್, ತಿಂಗಳು ಪೂರ್ತಿ ಭಾರೀ ಮಳೆ- ಗಾಳಿಯಿಂದಲೇ ಕೂಡಿದ್ದು ಜನತೆ ಅದರಲ್ಲೂ ಈ ಬಾರಿ ದಕ್ಷಿಣ ಕೊಡಗಿನ ಜನರು ತತ್ತರಿಸುವಂತಾಗಿತ್ತು. ಹಲವು ದೇಹಗಳೇ ಪತ್ತೆಯಾಗದ ದುರಂತಮಯ ಸನ್ನಿವೇಶವೂ 2019ರ ಕಹಿ ಘಟನೆಗಳಲ್ಲಿ ಒಂದು. ಹಿರಿಯ ರಾಜಕಾರಣಿ, ಮಾಜಿ ಎಂ.ಎಲ್.ಸಿ. ಎ.ಕೆ. ಸುಬ್ಬಯ್ಯ ಆಗಸ್ಟ್ ಅಂತ್ಯದಲ್ಲಿ ವಿಧಿವಶರಾದರು. ಕರಾಳತೆಯ ನಡುವೆಯೂ ಎದುರಾದ ನಾಡಹಬ್ಬ, ಗೌರಿ - ಗಣೇಶೋತ್ಸವ ಉತ್ಸವಗಳ ಮೂಲಕ ಜನರು ಒಂದಷ್ಟು ನೆಮ್ಮದಿ ಕಂಡುಕೊಂಡರು. ಇವೆಲ್ಲದರ ನಡುವೆ ಜಿಲ್ಲೆಯಲ್ಲಿ ಹುಲಿ, ಚಿರತೆ, ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಹಲವಾರು ಜನ - ಜಾನುವಾರುಗಳು ಬಲಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿ - ಪಾಸ್ತಿ ನಷ್ಟ, ರೈತರು- ಬೆಳೆಗಾರರ ಪ್ರತಿಭಟನೆಗಳು, ವಿವಿಧ ಸಂಘಟನೆಗಳಿಂದ ಬೇಕು - ಬೇಡಿಕೆಗಳ ಆಗ್ರಹ ತಲಕಾವೇರಿ ತೀರ್ಥೋದ್ಭವ ಸೇರಿದಂತೆ ವಿವಿಧ ಹಬ್ಬ -ಹರಿದಿನಗಳ ಆಚರಣೆ - ಇನ್ನಿತರ ಸಭೆ -ಸಮಾರಂಭ, ಪ್ರಮುಖ ದಿನಾಚರಣೆಗಳು ಹಲವೆಡೆ ಕ್ರೀಡೆಗಳು, ಅಪಘಾತ ಪ್ರಕರಣಗಳು, ಹಲವು ಸರಕಾರಿ ಅಧಿಕಾರಿಗಳ ಅಮಾನತುಗಳು 2019ರ ಬೆಳವಣಿಗೆಗಳಾಗಿದ್ದವು.

ಪ್ರಮುಖವಾಗಿ ಇತಿಹಾಸ ಹೊಂದಿದ್ದ ಮಡಿಕೇರಿಯ ರಾಜರ ಕೋಟೆಯಿಂದ ಜಿ.ಪಂ. ಕಚೇರಿಗಳು ಸೇರಿದಂತೆ ಇತರ ಕಚೇರಿಗಳ ಸ್ಥಳಾಂತರ ಈ ವರ್ಷದ ಮಹತ್ವದ ಬೆಳವಣಿಗೆಗಳಲ್ಲಿ ಒಂದಾಗಿದೆ. ಕೊಡಗಿನ ಇಬ್ಬರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದೂ ಒಂದು ಸಂತಸದ ವಿಚಾರ.

ಕೋವಿ ಪರವಾನಗಿ ವಿನಾಯಿತಿ ವಿಚಾರದ ವಿವಾದ 2029ರ ತನಕ ಯಥಾಸ್ಥಿತಿಯಂತೆ ಮುಂದುವರಿಕೆಗೆ ಕೇಂದ್ರ ಗೃಹ ಇಲಾಖೆ ಮೂಲಕ ಅನುಮತಿ ಹೊರಬಿದ್ದಿದ್ದೂ ಸ್ಮರಣೀಯ ವಿಚಾರಗಳಲ್ಲಿ ಒಂದು. ಪೌರತ್ವ ಕಾಯ್ದೆಯ ಕಿಚ್ಚೂ ಜಿಲ್ಲೆಯಲ್ಲಿ ಪ್ರತಿಧ್ವನಿಸಿದೆ. ವಷಾರ್ಂತ್ಯ ಹಾಗೂ ಡಿಸೆಂಬರ್ ತಿಂಗಳಿನ ಅಂತ್ಯದಲ್ಲಿ ಕ್ರಿಸ್‍ಮಸ್ ಸಡಗರ, ಅಂತರಕೇರಿ ಮೇಳಗಳ ಸಂಭ್ರಮ- ಮಂದ್ ನಮ್ಮೆಯ ಕಲರವ, ಅಪರೂಪದ ಕಂಕಣ ಸೂರ್ಯಗ್ರಹಣ ಅಲ್ಲಲ್ಲಿ ಅಯ್ಯಪ್ಪ ದೀಪಾರಾಧನೋತ್ಸವಗಳ ಮೂಲಕ ಹಾಗೂ 2020ರ ಸ್ವಾಗತಕ್ಕೆ ಸಿದ್ಧತೆಯೊಂದಿಗೆ 2019ನೇ ಕ್ಯಾಲೆಂಡರ್ ವರ್ಷಕ್ಕೆ ತಾ.31ರಂದು (ಇಂದು) ತೆರೆ ಬೀಳುತ್ತಿದೆ.

-ಶಶಿಸೋಮಯ್ಯ