ಮಡಿಕೇರಿ, ಡಿ.30: ನಗರದೆಲ್ಲೆಡೆ ಬಾವಿಯಂತಿರುವ ರಸ್ತೆಯಲ್ಲಿನ ಗುಂಡಿಗಳು, ಕಾಯಿಲೆಗಳನ್ನು ಹರಡಲು ಪೂರಕ ಕಸಗಳ ರಾಶಿ, ನಿರ್ವಹಣೆ ಇಲ್ಲದೆ ತುಂಬಿ ತುಳುಕುತ್ತಿರುವ ಚರಂಡಿಗಳು, ಇದು ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ನಗರಸಭೆಯ 2020-21 ನೇ ಸಾಲಿನ ಆಯವ್ಯಯ ಅನುಮೋದನೆಗೆ ಮುಂಚಿತ ಸಲಹೆ, ಸೂಚನೆಗಳನ್ನು ಪಡೆಯಲು ಕರೆಯಲಾಗಿದ್ದ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ವ್ಯತಿರಿಕ್ತ ಅಸಮಾಧಾನ ವ್ಯಕ್ತಗೊಂಡಿತು.

ಇಂದಿನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೌರಾಯುಕ್ತ ಎಂ.ಎಲ್. ರಮೇಶ್, ನಗರದ ಅಭಿವೃದ್ಧಿಗೆ ಪೂರಕ ಮುಂಗಡ ಪತ್ರ ಸಂಬಂಧ ಸಲಹೆಗಳನ್ನು ನೀಡಲು ಕೋರಿದರು. ಆದರೆ, ಸಾರ್ವಜನಿಕರು ನಗರದಲ್ಲಿನ ದಿನನಿತ್ಯದ ಸಮಸ್ಯೆಗಳನ್ನು ಎದುರಿಟ್ಟು ತಮ್ಮ ಅಸಮಾಧಾನ ಹೊರಗೆಡವಿದರು. ಸಾರ್ವಜನಿಕ ಪರವಾಗಿ ಉಷಾ ಮಾತನಾಡಿ; ನಗರದ ರಸ್ತೆ, ಚರಂಡಿ ಅಭಿವೃದ್ಧಿ ಯೊಂದಿಗೆ ವಾಹನ ನಿಲುಗಡೆಗೆÉ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ; ಕಸವನ್ನು ತೆರವಿಗೆ ಸಮರ್ಪಕ ಕಾರ್ಮಿಕರನ್ನು ನೇಮಿಸುವಂತೆ ಹಾಗೂ ಅವರಿಗೆ ಸೂಕ್ತ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿದರು.

ಇಂದಿರಾನಗರದ ನಿವಾಸಿ ಯೊಬ್ಬರು ಮಾತನಾಡಿ, ಬೀದಿ ದೀಪಗಳ ಕೊರತೆಯಿಂದ ರಾತ್ರಿ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ, ರಾಜಾಸಿಟಿನ ಬಳಿ ಮೂಟೆ-ಮೂಟೆ

(ಮೊದಲ ಪುಟದಿಂದ) ಕಸವನ್ನು ಯಾರೋ ಎಸೆದು ಹೋಗುತ್ತಾರೆ. ಹೀಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ವಾರ್ಡ್ ಸಭೆಗಳ ಅಗತ್ಯವಿದೆ ಎಂದು ಸಲಹೆ ನೀಡಿದರು.

ನಗರಕ್ಕೆ ಕುಡಿಯುವ ನೀರಿನ ಸಂಬಂಧ ಕುಂಡಾಮೇಸ್ತ್ರಿ ಯೋಜನೆಯ ನಿರ್ವಹಣೆಗೆ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದ್ದು; ಪ್ರತಿ ವರ್ಷವು ಮಳೆಯಿಂದಾಗಿ ತಾತ್ಕಾಲಿಕ ಮರಳು ಮೂಟೆಗಳ ತಡೆಗೋಡೆ ಕೊಚ್ಚಿ ಹೋಗುತ್ತಿದ್ದು; ಇದಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ವೀರನಾಡು ರಕ್ಷಣಾ ವೇದಿಕೆಯ ಹರೀಶ್ ಆಚಾರ್ಯ ಕೇಳಿಕೊಂಡರು. ನಗರಸಭೆಯ 3 ಶಾಲೆಗಳ ಗೌರವ ಶಿಕ್ಷಕರಿಗೆ ಸರಿಯಾಗಿ ಮಾಸಿಕ ಸಂಭಾವನೆ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದರು.

ಚೇಂಬರ್ ಆಫ್ ಕಾಮರ್ಸ್‍ನ ಧನಂಜಯ್ ಮಾತನಾಡಿ; ಆಯವ್ಯಯದಲ್ಲಿ ನಗರದ ಕಾಲೇಜು ರಸ್ತೆಯಲ್ಲಿ ಶೌಚಾಲಯ ನಿರ್ಮಾಣ ಹಾಗೂ ಪ್ರವಾಸಿಗರಿಗೆ ಅನುಕೂಲ ವಾಗುವಂತೆ ನಗರದ ಪ್ರಮುಖ ಕಡೆ ನಾಮಫಲಕಗಳ ಅಳವಡಿಕೆಗೆ ಮುಂಗಡ ಪತ್ರದಲ್ಲಿ ಹಣ ಒದಗಿಸುವಂತೆ ಒತ್ತಾಯಿಸಿದರು.

ಡಿಎಸ್‍ಎಸ್ ಪ್ರಮುಖ ಹೆಚ್.ಎಲ್. ದಿವಾಕರ್ ಮಾತನಾಡಿ; ಪೌರಕಾರ್ಮಿಕರಿಗೆ ವಸತಿ ಸೌಲಭ್ಯದೊಂದಿಗೆ ಮೂಲಭೂತ ಸೌಲಭ್ಯಕ್ಕೆ ಕೋರಿದರು. ಅಲ್ಲದೆ ನಗರದಲ್ಲಿ ರಸ್ತೆ ಕಾಮಗಾರಿ ಕಳಪೆಯಾಗಿದ್ದು; ಕೇವಲ ಒಂದು ವರ್ಷದಲ್ಲಿ ಮತ್ತೆ ಗುಂಡಿಗಳು ನಿರ್ಮಾಣವಾಗಿವೆ ವೈಜ್ಞಾನಿಕವಾಗಿ ಈ ಬಗ್ಗೆ ರಸ್ತೆ ಕಾಮಗಾರಿ ಮಾಡುವಂತೆ ಆಗ್ರಹಿಸಿದರು.

ಚೇಂಬರ್ ಆಫ್ ಕಾಮರ್ಸ್‍ನ ನವೀನ್ ಅಂಬೆಕಲ್ ಮಾತನಾಡಿ; ಸ್ವಯಂ ಆಸ್ತಿ ತೆÀರಿಗೆ ಸಂಗ್ರಹಣೆಯನ್ನು ಸರಿಯಾಗಿ ನಿರ್ವಹಿಸುವಂತೆ ಸಲಹೆ ನೀಡಿದರು. ನಗರದ ಜನರಲ್ ತಿಮ್ಮಯ್ಯ ವೃತ್ತ ಬಳಿ ಮೇಕೇರಿ ರಸ್ತೆ ಬದಿಯ ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೆ ದುರ್ನಾತ ಬೀರುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.