3 ಸೇನಾಪಡೆ ಮುಖ್ಯಸ್ಥರಾಗಿ ರಾವತ್ ಆಯ್ಕೆ
ನವದೆಹಲಿ, ಡಿ. 30: ದೇಶದ ಮೂರು ಸೇನಾಪಡೆಗಳ(ಭೂ ಸೇನೆ, ವಾಯುಪಡೆ, ನೌಕಾ ಪಡೆ) ಮೊದಲ ಮುಖ್ಯಸ್ಥರಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಂಬುವದಾದರೆ, 62 ವರ್ಷದ ಬಿಪಿನ್ ರಾವತ್ ಅವರು ರಕ್ಷಣಾ ಪಡೆಗಳ ಮುಖ್ಯಸ್ಥ(ಚೀಫ್ ಆಫ್ ಡಿಫೆನ್ಸ್ ಸ್ಟಾಫ್)ರಾಗಿ ನೇಮಕಗೊಂಡಿದ್ದಾರೆ. ರಾಮ್ ವಿಲಾಸ್ ಪಾಸ್ವಾನ್ ಹಾಗೂ ಯೋಗಿ ಆದಿತ್ಯನಾಥ್ ಅವರು ನೂತನ ಹುದ್ದೆ ವಹಿಸಿಕೊಂಡ ಬಿಪಿನ್ ರಾವತ್ ಅವರನ್ನು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಮೂರು ವರ್ಷಗಳ ಸೇವಾವಧಿ ನಾಳೆ ಪೂರ್ಣಗೊಳಿಸುತ್ತಿದ್ದು, ಅವರು ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಂತೆಯೇ ಅವರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಗೆ ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರ ಸಹ ಬಿಪಿನ್ ರಾವತ್ ಅವರಿಗೆ ಅನುಕೂಲವಾಗುವಂತೆ ಕಾನೂನು ತಿದ್ದುಪಡಿ ಮಾಡಿದೆ. ನಿನ್ನೆಯಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥರ ವಯೋಮಿತಿಯನ್ನು 62ರಿಂದ 65 ವರ್ಷಕ್ಕೆ ಏರಿಸಿತ್ತು. ಆದರೆ ಅವರ ಅಧಿಕಾರವಧಿ ಇನ್ನೂ ನಿಗದಿ ಮಾಡಿಲ್ಲ.
ಮಂಗಳೂರು ಗೋಲಿಬಾರ್ ತನಿಖೆ ಆರಂಭ
ಮಂಗಳೂರು, ಡಿ. 30: ಇಬ್ಬರನ್ನು ಬಲಿ ಪಡೆದ ಮಂಗಳೂರು ಗೋಲಿಬಾರ್, ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಸೋಮವಾರ ಮ್ಯಾಜಿಸ್ಟೇಟ್ ತನಿಖೆ ಆರಂಭವಾಗಿದೆ. ಮಂಗಳೂರು ಹಿಂಸಾಚಾರದ ತನಿಖೆಯನ್ನು ರಾಜ್ಯ ಸರಕಾರ ಮ್ಯಾಜಿಸ್ಟೇಟ್ ತನಿಖೆಗೆ ನೀಡಿದ್ದು, ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ. ಅಲ್ಲದೆ ಮೂರು ತಿಂಗಳಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅದರಂತೆ ಇಂದು ಮಂಗಳೂರಿಗೆ ಆಗಮಿಸಿದ ಜಿಲ್ಲಾಧಿಕಾರಿ ಜಗದೀಶ್ ಅವರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಜಗದೀಶ್ ಅವರು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರೊಂದಿಗೆ ಸಮಾಲೋಚಿಸಿದರು. ಬಳಿಕ ಸ್ಟೇಟ್ ಬ್ಯಾಂಕ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ನೆಲ್ಲಿಕಾಯಿ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಪೆÇಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು.
ಜಮ್ಮು-ಕಾಶ್ಮೀರದಲ್ಲಿ ಸಿಬಿಐ ದಾಳಿ
ಜಮ್ಮು, ಡಿ. 30 : ಸುಮಾರು 2 ಲಕ್ಷ ನಕಲಿ ಬಂದೂಕು ಪರವಾನಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸೋಮವಾರ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ 14 ಕಡೆ ದಾಳಿ ನಡೆಸಿದ್ದಾರೆ. ಜಮ್ಮು-ಕಾಶ್ಮೀರದ 10 ಜಿಲ್ಲೆಗಳ 14 ಕಡೆ ಸೋಮವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ‘ಶ್ರೀನಗರದ ಒಂಭತ್ತು ಕಡೆ, ಜಮ್ಮು-ಕಾಶ್ಮೀರದ ಐದು ಕಡೆ ದಾಳಿಗಳನ್ನು ನಡೆಸಲಾಗಿದೆ.’ ಎಂದು ಮೂಲಗಳು ತಿಳಿಸಿವೆ. ಜಮ್ಮು, ಕುಪ್ವಾರ, ಬಾರಾಮುಲ್ಲಾ, ಉಧಮ್ಪುರ, ಕಿಶ್ತ್ವಾ’ರ್, ಶೋಪಿಯಾನ್, ರಜೌರಿ, ದೋಡಾ ಮತ್ತು ಪುಲ್ವಾಮಗಳಲ್ಲಿ ವ್ಯಾಪಿಸಿರುವ ಜಾಗಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ‘ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸುಮಾರು 2 ಲಕ್ಷ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ನೀಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳ ತನಿಖೆಯ ಭಾಗವಾಗಿ ಈ ದಾಳಿಗಳು ನಡೆದಿವೆ.’ ನಿಯಮಗಳನ್ನು ಉಲ್ಲಂಘಿಸಿ, ಜಮ್ಮು-ಕಾಶ್ಮೀರದ ನಿವಾಸಿಗಳಲ್ಲದವರಿಗೂ ಪರವಾನಿಗೆಗಳನ್ನು ಸರ್ಕಾರಿ ಸಿಬ್ಬಂದಿ ಲಂಚ ಪಡೆದು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ನಿತ್ಯಾನಂದ ಸ್ವಾಮಿ ಆಶ್ರಮ ನೆಲಸಮ
ಅಹಮದಾಬಾದ್, ಡಿ. 30: ಅತ್ಯಾಚಾರ ಆರೋಪ ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿ ದೇಶ ಬಿಟ್ಟು ಪರಾರಿಯಾಗಿದ್ದು ಈ ಮಧ್ಯೆ ಅವರ ಆಶ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರ ನೆಲಸಮಗೊಳಿಸಿದೆ. ಸ್ವಯಂಘೋಷಿತ ದೇವಮಾನ ನಿತ್ಯಾನಂದ ಸ್ವಾಮೀಜಿ ಗುಜರಾತ್‍ನ ಅಹಮದಾಬಾದ್ ನಲ್ಲಿರುವ ಯೋಗಿನಿ ಸರ್ವಜ್ಞಪೀಠ ಆಶ್ರಮಕ್ಕೆ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಭೂಮಿಯನ್ನು ಲೀಸ್ ಗೆ ನೀಡಿದ್ದ ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ಪ್ರಾಂಶುಪಾಲರನ್ನು ಪೆÇಲೀಸರು ಬಂಧಿಸಿದ್ದರು. ಇದೀಗ ಅಹಮದಾಬಾದ್ ಹೊರವಲಯದಲ್ಲಿರುವ ಹೀರಾಪುರ ಗ್ರಾಮದಲ್ಲಿರುವ ಡಿಪಿಎಸ್ ಶಾಲೆಯ ಬಳಿ ಅಕ್ರಮವಾಗಿ ನಿರ್ಮಿಸಲಾಗಿದ್ದ ನಿತ್ಯಾನಂದನ ಆಶ್ರಮವನ್ನು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರ ನೆಲಸಮಗೊಳಿಸುತ್ತಿದ್ದಾರೆ
ಹುದ್ದೆಗಳ ಕೆಪಿಎಸ್‍ಸಿ ಸಂದರ್ಶನ ರದ್ದು
ಬೆಂಗಳೂರು, ಡಿ. 30: ಎ ಮತ್ತು ಬಿ ದರ್ಜೆಯ ವೈದ್ಯ ಹಾಗೂ ಇಂಜಿನಿಯರ್ ನಂತಹ ಆಯ್ದ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ನಡೆಸುತ್ತಿದ್ದ ಸಂದರ್ಶನವನ್ನು ರದ್ದುಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಇನ್ನು ಮುಂದೆ ಲಿಖಿತ ಪರೀಕ್ಷೆಯ ಮೂಲಕ ಆ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು ಸೋಮವಾರ ಹೇಳಿದ್ದಾರೆ. ಇಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ ಸಿಯ ಎ ಮತ್ತು ಬಿ ದರ್ಜೆಯ ಕೆಲವು ಹುದ್ದೆಗಳಿಗೆ ಇನ್ನುಮುಂದೆ ಸಂದರ್ಶನ ಇರುವುದಿಲ್ಲ ಎಂದರು. ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಸಂಬಂಧ ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಇಲ್ಲಿವರೆಗೆ ಕರ್ನಾಟಕ ವಿದ್ಯಾರ್ಥಿಗಳಿಗೆ ಕಾನೂನು ಕಾಲೇಜಿನಲ್ಲಿ ಮೀಸಲಾತಿ ಸೌಲಭ್ಯ ದೊರಕಿರಲಿಲ್ಲ. ಹಿಂದಿನ ಸರ್ಕಾರ ಶೇ. 50 ರಷ್ಟು ಮೀಸಲು ನೀಡಬೇಕು ಎಂದು ವಿಧಾನ ಮಂಡಲದಲ್ಲಿ ಅನುಮೋದನೆಯ ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿತ್ತು. ಆದರೆ ರಾಜ್ಯಪಾಲರು ಸರ್ಕಾರ ರೂಪಿಸಿದ್ದ ಕಾನೂನನ್ನು ತಿರಸ್ಕರಿಸಿದ್ದರು.
ಮೋಹನ್ ಭಾಗವತ್ ವಿರುದ್ಧ ಕೇಸ್
ಹೈದರಾಬಾದ್, ಡಿ. 30 : ದೇಶದ 130 ಕೋಟಿ ಭಾರತೀಯರೂ ಹಿಂದೂಗಳೇ ಎಂದು ಹೇಳಿಕೆ ನೀಡಿದ್ದ ಆರ್ ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ವಿ ಹನುಮಂತ ರಾವ್ ಅವರು ಕೇಸ್ ದಾಖಲಿಸಿದ್ದಾರೆ ಎಂದು ಸೋಮವಾರ ಪೆÇಲೀಸರು ತಿಳಿಸಿದ್ದಾರೆ. ಈ ಸಂಬಂಧ ಎಲ್ ಬಿ ನಗರ ಪೆÇಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿರುವ ಕಾಂಗ್ರೆಸ್ ನಾಯಕ, ಮೋಹನ್ ಭಾಗವತ್ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇತ್ತೀಚಿಗೆ ಹೈದರಾಬಾದಿನಲ್ಲಿ ನಡೆದ ಆರ್‍ಎಸ್‍ಎಸ್ ನ ಮೂರು ದಿನಗಳ ‘ವಿಜಯ್ ಸಂಕಲ್ಪ ಸಭಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಭಾಗವತ್, ಭಾರತ ಮಾತೆಯ 130 ಕೋಟಿ ಪುತ್ರರು ಯಾವುದೇ ಭಾಷೆಯನ್ನು ಬೇಕಾದರೆ ಮಾತನಾಡಲಿ, ಯಾವುದೇ ಧರ್ಮ ಆಚರಣೆಯನ್ನು ಅನುಸರಿಸಲಿ. ಇವರೆಲ್ಲ ಹಿಂದೂ ಧರ್ಮವನ್ನು ಆಚರಿಸದೇ ಇದ್ದರೂ ಸಂಘದ ಪಾಲಿಗೆ ಇವರೆಲ್ಲರೂ ಹಿಂದೂಗಳೇ ಎಂದು ಹೇಳಿದ್ದರು. ಭಾರತವು ಸಾಂಪ್ರದಾಯಿಕವಾಗಿ ಹಿಂದುತ್ವವಾಗಿದೆ. ಭಾರತದ ಮೋಕ್ಷ ರಾಜಕೀಯ ಮತ್ತು ರಾಜಕೀಯ ನಾಯಕರಿಂದ ಸಾಧ್ಯವಿಲ್ಲ. ಆದರೆ ಉತ್ತಮ ಸಮಾಜ ಮತ್ತು ಹಿಂದುತ್ವದಿಂದ ಸಾಧ್ಯವಿದೆ ಎಂದು ಹೇಳಿದ್ದರು.
ಸಿಎಂ ಯೋಗಿ ವಿರುದ್ಧ ವಾಗ್ಧಾಳಿ
ನವದೆಹಲಿ, ಡಿ. 30 : ದೇಶದಲ್ಲಿ ಹಿಂಸಾಚಾರ ಅಥವಾ ಸೇಡಿಗೆ ಜಾಗವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸೋಮವಾರ ತಿರುಗೇಟು ನೀಡಿದ್ದಾರೆ. ಸಾರ್ವಜನಿಕ ಆಸ್ತಿ ಹಾನಿ ಮಾಡುವವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಅವರು ಎಚ್ಚರಿಸಿದ ಬೆನ್ನಲ್ಲೇ, ಕೇಸರಿ ಪಕ್ಷದ ಹಿಂದೂತ್ವ ಅಥವಾ ಧರ್ಮ ಹಿಂಸಾಚಾರ ಮಾಡುವಂತೆ, ಸೇಡು ತೀರಿಸಿಕೊಳ್ಳುವಂತೆ ಹೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಹೇಳಿದ್ದಾರೆ.