ಮಣ್ಣಿನೊಳಗಿಂದ ಮೊಳಕೆಯೊಡೆವಂದು ತಮಟೆಯಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ.
ಪ್ರಸಿದ್ಧಿಗಳಿಸುವುದು, ಜನಪ್ರಿಯವಾಗುವುದು ಬಹುಷಃ ಮನುಷ್ಯನಿಗಂಟಿ ಕೊಂಡಿರುವ ಬಲುದೊಡ್ದ ರೋಗ. ಅಂತಹ ಮನಸ್ಥಿತಿಯನ್ನು ಹೊಂದಿರುವ ನಮಗೆಲ್ಲರಿಗೂ ದೇವನಹಳ್ಳಿ ವೆಂಕಟ್ರಮಣಯ್ಯ ಗುಂಡಪ್ಪನವರ ಔಷಧಿ ಈ ಕಗ್ಗ. ಪ್ರಸಿದ್ಧಿ ಮತ್ತು ಜನಪ್ರಿಯತೆ ಇವೆರಡು ವಿಭಿನ್ನ ಪರಿಕಲ್ಪನೆಗಳು. ಪ್ರಸಿದ್ಧರಾದವ ರೆಲ್ಲ ಜನಪ್ರಿಯರಾಗಿರಬೇಕಾದ್ದಿಲ್ಲ. ಹಿಟ್ಲರ್, ಒಸಾಮಾಬಿನ್‍ಲಾಡೆನ್ ಇವರೆಲ್ಲರೂ ಪ್ರಸಿದ್ಧರೇ ಆದರೂ ಜನಪ್ರಿಯರೆನ್ನಲು ಸಾಧ್ಯವಿಲ್ಲ. ಹಾಗೆಯೇ ಜನಪ್ರಿಯರಾದವರೆಲ್ಲ ಪ್ರಸಿದ್ಧರಾಗಿರಬೇಕಾದ್ದೂ ಇಲ್ಲ. ಅಂತವರು ಜಗತ್ತಿನಲ್ಲಿ ಲಕ್ಷಾಂತರ, ಕೋಟ್ಯಂತರ ಜನರಿರಬಹುದು. ಪ್ರಸಿದ್ಧರೂ ಜೊತೆಗೆ ಜನಪ್ರಿಯರೂ ಆದವರ ಸಂಖ್ಯೆ ಬಹಳ ದೊಡ್ಡದಲ್ಲ.
ಪ್ರಸಿದ್ಧರಾಗಬೇಕೆನ್ನುವುದು ನಮ್ಮಲ್ಲೇ ಬಹಳಷ್ಟು ಜನರ ಮನೋಭಿಲಾಷೆ. ಜನರ ನಾಲಗೆ ಗಳಲ್ಲಿ ನಮ್ಮ ಹೆಸರು ನಲಿದಾಡ ಬೇಕೆಂಬುದು ಒಂದು ಮನೋ ರೋಗವೇ ಸರಿ. ಪ್ರಸಿದ್ಧರಾಗಲು ಪ್ರಯತ್ನಿಸುವ ಮಾರ್ಗಗಳೂ ಹಲವು. ಬಹುಷಃ ಪ್ರಸಿದ್ಧರಾಗುವುದೇ ಸಾಧನೆ ಎಂದು ಭಾವಿಸುವವರು ಹಲವರಿರಬಹುದು. ರಾಜಕಾರಣಿಗಳು, ಅಲ್ಪಾವಧಿ ಪರಿಸರವಾದಿ ಗಳು, ಚಿಂತಕರೂ ಅನೇಕ ಸಂದರ್ಭಗಳಲ್ಲಿ ತಮ್ಮ ನಾಲಗೆಯನ್ನು ಹರಿಬಿಟ್ಟು, ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ವಾದರೂ ಚಾಲ್ತಿಯಲ್ಲಿರಲು ಬಯಸುವುದಕ್ಕೆ ನಾವು ಸಾಕ್ಷಿಗಳಾಗಿ ದ್ದೇವೆ.
ನಮ್ಮ ಆಧುನಿಕ ಜಗತ್ತಿನಲ್ಲಿ ಸಂಪರ್ಕ ಮಾಧ್ಯಮ ತೀವ್ರ ಬೆಳವಣಿಗೆಯನ್ನು ಸಾಧಿಸಿ, ಸಾಮಾಜಿಕ ಜಾಲತಾಣಗಳು ಪ್ರಸಿದ್ಧರಾಗುವ ಹುಚ್ಚಿಗೆ ನೀರೆರೆದಿವೆ. ಫೇಸ್‍ಬುಕ್, ಟ್ವಿಟರ್, ಲಿಂಕ್ಡ್‍ಇನ್, ಇನ್ಸ್ಟಗ್ರಾಮ್ ಹೀಗೆ ವೈವಿಧ್ಯಮಯ ಜಾಲತಾಣಗಳಲ್ಲಿ ಎಲ್ಲರೂ ಖಾತೆಗಳನ್ನು ಹೊಂದಿರುವವರೇ. ತಮಗೆ ಸಂಬಂಧಿಸಿದ, ಸಂಬಂಧಪಡದ ಎಲ್ಲ ವಿಚಾರಗಳ ಬಗ್ಗೆಯೂ ಅಭಿಪ್ರಾಯ ಪೆÇೀಸ್ಟ್ ಮಾಡುತ್ತಾ, ಕ್ಷಣಕ್ಕೊಮ್ಮೆ ಎಷ್ಟು ಲೈಕ್ ಬಂತು ಎಂದು ಗಮನಿಸಿದ್ದಾರೆ ಎಂದು ಚೆಕ್ ಮಾಡುತ್ತಿರುತ್ತೇವೆ. ಇದೂ ಒಂದು ಸಾಂಕ್ರಾಮಿಕ ಕಾಯಿಲೆಯೇ. ಹೆಚ್ಚೆಚ್ಚು ಜನರು ಗಮನಿಸಿದ್ದರೆ ಮನಸ್ಸಿನಲ್ಲಿ ವಿಲಕ್ಷಣವಾದ ಆನಂದವನ್ನು ಅನುಭವಿಸುತ್ತಿರುತ್ತೇವೆ.
ಹತ್ತಾರು ಚಟುವಟಿಕೆಗಳನ್ನು ಪ್ರಸಿದ್ಧರಾಗಲು, ಜನರಿಗೆ ಗೊತ್ತಾಗಲಿ ಎಂಬ ಉದ್ದೇಶದಿಂದಲೇ ಮಾಡುವುದು ತಿರಸ್ಕರಿಸಲಾಗದ ಸತ್ಯ. ‘ಕರ್ಮಣ್ಯೇ ವಾಧಿಕಾರಸ್ತು ಮಾಫಲೇಷು ಕದಾಚನ’ ಎಂಬುದು ನಮಗೆ ಅನ್ವಯವಾಗುವುದಿಲ್ಲ. ಯಾವುದೇ ಕೆಲಸ ಮಾಡಬೇಕಾದರೂ ನಮ್ಮ ಮೊಬೈಲ್ ನಲ್ಲಾದರೂ ಫೆÇೀಟೋ ತೆಗೆಯಲೇಬೇಕು, ಇನ್ನು ಕೆಲವರಿಗೆ ಮಾಧ್ಯಮವಿರಲೇಬೇಕು. ಇಲ್ಲದಿದ್ದಲ್ಲಿ ಕೆಲಸವೇ ವ್ಯರ್ಥ ಎಂಬ ಅಭಿಪ್ರಾಯ.
‘ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ’ ಎನ್ನುತ್ತಾರೆ ವಚನಕಾರರು. ನಾವಿಂದು ಎರಡನ್ನೂ ಮಾಡುತ್ತಿದ್ದೇವೆ. ಎಲ್ಲ ಕಾರ್ಯ ಗಳಲ್ಲೂ ನಮ್ಮನ್ನು ಸಮರ್ಥಿಸಿಕೊಳ್ಳುತ್ತಾ, ಎದುರಿನವರ ಚಟುವಟಿಕೆಗಳನ್ನು ದೋಷವನ್ನು ಹುಡುಕುತ್ತಾ, ಅದನ್ನೇ ಮುಖ್ಯ ವಿಷಯವನ್ನಾಗಿಸುತ್ತಿ ದ್ದೇವೆ. ಕಾರ್ಯಕ್ಕಿಂತ ಕರ್ತೃವನ್ನೇ ಮುಖ್ಯವನ್ನಾಗಿಸುವ ಪರಿಯಿದು. ನಾವಳಿದರೂ ನಮ್ಮ ಕಾರ್ಯಗಳುಳಿಯಬೇಕು ಎನ್ನುತ್ತಿದ್ದರು ಹಿರಿಯರು, ಗುರುಗಳು. ಇದಕ್ಕೆ ಬಹಳ ಅತ್ಯುತ್ತಮ ಉದಾಹರಣೆ ಜನಪದ ಸಾಹಿತ್ಯ. ನಮ್ಮ ನಡುವಿರುವ ನೂರಾರು ಜನಪದ ಗೀತೆ, ಕತೆಗಳ ರಚನೆಕಾರರ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಅವರ ಕೃತಿಗಳು ಮಾತನಾಡುತ್ತವೆ. ಪ್ರಸಿದ್ಧಿಯನ್ನು ಗಳಿಸುವ ಹುಚ್ಚಿನಲ್ಲಿ, ಸೆಲ್ಫಿ ಗೀಳಿಗೆ ಸಿಲುಕಿ, ಅತಿರೇಕದ ಸಾಹಸಗಳನ್ನು ಮಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡವರೂ ಹಲವರಿದ್ದಾರೆ. ಜನಪ್ರಿಯತೆ ಮತ್ತು ಪ್ರಸಿದ್ಧಿಯ ನಡುವಿನ ತೆಳುಗೆರೆಯನ್ನು ಅರಿತು, ನಾಲ್ಕು ಜನರಿಗೆ ಸಹಕಾರಿಯಾಗಿ, ಯಾವುದೇ ತೀವ್ರ ಪ್ರತಿಫಲಾಪೇಕ್ಷೆ ಇಲ್ಲದೆ ಬದುಕಿದರೆ ಅಳಿದಮೇಲೂ ನಾವು ಉಳಿಯ ಬಹುದು. ಅದಾಗಬೇಕಾದರೆ ನಮ್ಮಲ್ಲಿನ ‘ನಾನು’ ಇಲ್ಲವಾಗುವುದು ಮುಖ್ಯ.
-ಕಿಗ್ಗಾಲು ಜಿ. ಹರೀಶ್,
ಮೂರ್ನಾಡು.