ಕೆಟ್ಟ ಶಾಖೆಯನ್ನು ನನ್ನ ಜೀವಮಾನದಲ್ಲೆ ನೋಡಿಲ್ಲ.. ನನ್ನ ಚೆಕ್ಕನ್ನೇ ಕಳೆದುಬಿಟ್ಟಿದ್ದಾರೆ... ನಮಗೆ ನೂರೆಂಟು ಸಮಸ್ಯೆ ಇರುತ್ತದೆ... ಅದು ಇವರಿಗೆ ಅರ್ಥ ಆಗೋದಿಲ್ಲ... ಬೇಜವಾಬ್ದಾರಿ ಜನ ಇಲ್ಲಿ ತುಂಬಿಕೊಂಡಿದ್ದಾರೆ...’ ರಾಮಸ್ವಾಮಿಯವರ ಕೂಗಾಟ ಕೇಳಿದ ಪ್ರಬಂಧಕರು ಕೊಠಡಿಯಿಂದ ಹೊರಬಂದರು. ರಾಮಾಸ್ವಾಮಿಯವರಿಂದ ವಿಷಯ ತಿಳಿದುಕೊಂಡರು.

ಒಂದು ಕ್ಷಣ ಯೋಚಿಸಿ ಪ್ರಬಂಧಕರು ಕೇಳಿದರು, ‘ಚೆಕ್ಕನ್ನು ಯಾರಿಗೆ ಕೊಟ್ಟಿದ್ದಿರಿ...?’

‘ಡ್ರಾಪ್ ಬಾಕ್ಸಿನಲ್ಲಿ ಹಾಕಿದ್ದೆ...’ ರಾಮಸ್ವಾಮಿಯವರ ಉತ್ತರ.

‘ಯಾವ ಬಾಕ್ಸ್...?’

‘ಅದೆ... ಆ ಮೂಲೆಯಲ್ಲಿ ಇದೆಯಲ್ಲ...’

ಪ್ರಬಂಧಕರು ಸ್ವಲ್ಪ ಜೋರಾಗಿಯೆ ಕೇಳಿದರು, ‘ನಿಮಗೆ ಇಂಗ್ಲೀಷ್, ಹಿಂದಿ, ಕನ್ನಡ ಓದೋಕೆ ಬರುತ್ತಾ...?’

‘ಮೂರು ಭಾಷೆಯನ್ನೂ ಓದ್ತೀನಿ...’ ರಾಮಸ್ವಾಮಿಯವರ ಉತ್ತರ.

‘ನೀವು ಹೇಳುವ ಆ ಬಾಕ್ಸ್ ಮೇಲೆ ಏನು ಬರೆದಿದೆ ಓದಿ...’

ರಾಮಸ್ವಾಮಿ ಓದಿ ಹೇಳಿದರು, ‘ವೇಸ್ಟ್ ಪೇಪರ್ ಬಾಕ್ಸ್, ರದ್ದಿ ಕಾಗದಗಳ ಪೆಟ್ಟಿಗೆ....’

‘ಚೆಕ್ ಡ್ರಾಪ್ ಬಾಕ್ಸ್, ಚೆಕ್ಕುಗಳನ್ನು ಹಾಕುವ ಪೆಟ್ಟಿಗೆ. ಅಂತ ಈ ಮೂಲೆಯಲ್ಲಿರುವ ಬಾಕ್ಸಿನ ಮೇಲೆ ಬರೆದಿದೆಯಲ್ಲ. ಅದನ್ನು ಓದಿಲ್ಲವಾ ನೀವು’ ಪ್ರಬಂಧಕರು ಪ್ಯೂನನ್ನು ಕರೆದು ರದ್ದಿ ಕಾಗದಗಳ ಪೆಟ್ಟಿಗೆಯನ್ನು ತೆರೆಸಿದರು. ಅರ್ಧ ಬರೆದು ಹಾಳು ಮಾಡಿದ ಚಲನ್ನುಗಳು, ಖಾಲಿಯಾದ ಚೆಕ್ ಪುಸ್ತಕಗಳ ರಕ್ಷಾ ಪುಟಗಳು, ಸರಿಯಾಗಿ ಫ್ರಿಂಟ್ ಬರದ ಕೆಲವು ಕಾಗದಗಳು ಇದ್ದವು. ಅವುಗಳೊಂದಿಗೆ ರಾಮಸ್ವಾಮಿಯವರ ಚೆಕ್ಕೂ ಇತ್ತು.

‘ಯಾರು ಬೇಜವಾಬ್ದಾರಿ ಜನ ಅಂತ ಈಗ ಹೇಳಿ...’ ಪ್ರಬಂಧಕರು ಕೇಳಿದರು.

‘ಆದರೂ... ರದ್ದಿ ಕಾಗದಗಳ ಪೆಟ್ಟಿಗೆ ಅಂತ ಬರೆದರೆ ಯಾರಿಗೆ ಅರ್ಥ ಆಗುತ್ತೆ ಹೇಳಿ... ಲಕ್ಷಣವಾಗಿ ಕಸದ ಪೆಟ್ಟಿಗೆ ಅಂತ ಬರೆಸಬಾರದಾ...’ ಎನ್ನುತ್ತ ರಾಮಸ್ವಾಮಿ ಹೊರಟರು. ಅವರು ಹೊರಡುವಾಗ ಅವರ ಪರಿಚಿತರ್ಯಾರೊ ಮಾತಾಡಿಸಿದರು.

‘ಏನ್ಮಾಡೋದು... ಈ ಬ್ಯಾಂಕಿನವರಿಗೆ ಕನ್ನಡ ಸರಿಯಾಗಿ ಬರೊಲ್ಲ...’ ಎನ್ನುತ್ತ ಹೊರನಡೆದರು ರಾಮಸ್ವಾಮಿ. ‘ಅಡಿಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ...’ ಎನ್ನುತ್ತ್ತಾ ನಕ್ಕೆವು ನಾವು.

? ನರಸಿಂಹ ಹೆಗಡೆ

(ನಿವೃತ್ತ ಬ್ಯಾಂಕ್ ಉದ್ಯೋಗಿ)

ಬೆಂಗಳೂರು. ಮೊ : 9449060077