ಗೋಣಿಕೊಪ್ಪ ವರದಿ, ಡಿ. 30: ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಅಜ್ಜಿಕುಟ್ಟೀರ ಕುಟುಂಬಸ್ಥರ ಸಂಘದಿಂದ ನ್ಯಾಯಮೂರ್ತಿ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಅವರೊಂದಿಗೆ ಪತ್ನಿ ರೋನಾ ಬೋಪಣ್ಣ ಕೂಡ ಸನ್ಮಾನ ಸ್ವೀಕರಿಸಿದರು. ಮುಖ್ಯ ದ್ವಾರದಿಂದ ಕೊಡವ ಸಾಂಪ್ರದಾಯಿಕ ವಾಲಗ, ತಳಿಯತಕ್ಕಿ ಬೆಳಕಿನೊಂದಿಗೆ ಸ್ವಾಗತಿಸಲಾಯಿತು.ಸುಪ್ರೀಂಕೋರ್ಟ್ ನ್ಯಾಯ ಮೂರ್ತಿಯಾಗಿ ಆಯ್ಕೆಯಾಗಿರುವು ದನ್ನು ಕುಟುಂಬದ ಸದಸ್ಯರು ಅಭಿನಂದಿಸುವ ಮೂಲಕ ಶುಭ ಕೋರಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿ ಅಜ್ಜಿಕುಟ್ಟೀರ ಎಸ್. ಬೋಪಣ್ಣ, ಬದುಕಿನಲ್ಲಿ ಸಮಯ ಪ್ರಜ್ಞೆಯಿಂದ ಮಾತ್ರ ಹೆಚ್ಚಿನದನ್ನು ಸಾಧಿಸಲು ಸಾಧ್ಯ ಎಂದರು. ಪ್ರತಿ ಕ್ಷಣ ಕೂಡ ಬದುಕಿನಲ್ಲಿ ಅಮೂಲ್ಯ ಎಂದು ನಾವು ಸಮಯಕ್ಕೆ ಗೌರವ ನೀಡಬೇಕು. ಪ್ರತಿಯೊಬ್ಬರಿಗೂ ಒಳ್ಳೆಯ ದಿನಗಳು ಬರುತ್ತದೆ ಎಂಬ ನಿರೀಕ್ಷೆಯಿಂದ ಬದುಕಬೇಕು ಎಂದು ಸಲಹೆ ನೀಡಿದರು.ಶಾನ್ವಿ ಮುತ್ತಕ್ಕ ಪ್ರಾರ್ಥಿಸಿದರು. ಕುಟುಂಬದ ಹಿರಿಯರಾದ ಎ.ಸಿ. ಸುಬ್ಬಯ್ಯ, ರಾಜಾ ನಂಜಪ್ಪ, ಕುಟುಂಬ ಸಂಘದ ಅಧ್ಯಕ್ಷ ಎ.ಸಿ. ಪೂಣಚ್ಚ, ಉಪಾಧ್ಯಕ್ಷ ಎ.ಕೆ. ಅಚ್ಚಯ್ಯ, ನಿರ್ದೇಶಕ ಎ.ಎಸ್. ಮಾದಯ್ಯ, ರೋನಾ ಬೋಪಣ್ಣ ಉಪಸ್ಥಿತರಿದ್ದರು.