ಸೋಮವಾರಪೇಟೆ, ಡಿ. 30: ಸಮೀಪದ ಐಗೂರು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರಿಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಐಗೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ. ದಿನೇಶ್ ಹಲ್ಲೆಗೊಳಗಾದ ವ್ಯಕ್ತಿ. ಯಡವಾರೆ ಗ್ರಾಮದ ಬೆಳ್ಳಿಯಪ್ಪ, ರಘು, ಪಾಕು, ಲಾಲು ಅವರುಗಳು ತನ್ನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ದಿನೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಯಡವಾರೆ ಕೂಪ್ ತೋಟಕ್ಕೆ ತೆರಳುವ ಜಂಕ್ಷನ್‍ನಲ್ಲಿ ನಡೆದುಕೊಂಡು ತೆರಳುತ್ತಿದ್ದ ಸಂದರ್ಭ ಬೆಳ್ಳಿಯಪ್ಪ ತಮ್ಮ ಜೀಪಿನಲ್ಲಿ ಅಕ್ರಮಕೂಟ ಕಟ್ಟಿಕೊಂಡು, ‘ಕಂತ್ರಳ್ಳಿ ರಸ್ತೆ ನಿರ್ಮಾಣಕ್ಕೆ ನೀನು ತಡೆಹಾಕುತ್ತಿದ್ದೀಯಾ?’ ಎಂದು ಪ್ರಶ್ನಿಸಿ, ಕೈಯಲ್ಲಿ ಹಲ್ಲೆ ನಡೆಸಿ, ದಾರಿಯಲ್ಲಿ ತಿರುಗಾಡಿದರೆ ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದಾರೆ ಎಂಬ ನೀಡಿದ ದೂರಿನನ್ವಯ ಮೊಕದ್ದಮೆ ದಾಖಲಾಗಿದೆ.