ಮಡಿಕೇರಿ, ಡಿ.30: ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಿಂದ ಹೆಣ್ಣು ಮಕ್ಕಳ ರಕ್ಷಣೆಗೆ “ಭಾಗ್ಯಲಕ್ಷ್ಮಿ” ಎಂಬ ಹೊಸ ಯೋಜನೆ ರೂಪಿಸಿದೆ.
ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ 2006ರ ಮಾರ್ಚ್ 31ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿ ಗಳಾಗಿ ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ. ಮಗು ಜನಿಸಿದ ಎರಡು ವರ್ಷದೊಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ನೋಂದಾಯಿಸಲು ಅವಕಾಶವಿದೆ. ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಕುಟುಂಬದಲ್ಲಿ ಮಕ್ಕಳ ಸಂಖ್ಯೆ 3ಕ್ಕಿಂತ ಹೆಚ್ಚಿಗೆ ಇರಬಾರದು. ಯೋಜನೆಯಡಿ ನೋಂದಣಿಯಾದ ಕುಟುಂಬದಲ್ಲಿನ ಮೊದಲನೇ ಹೆಣ್ಣು ಮಗುವಿನ ಹೆಸರಿನಲ್ಲಿ ರೂ.19,300 ಹಾಗೂ ಅದೇ ಕುಟುಂಬದಲ್ಲಿನ 2ನೇ ಹೆಣ್ಣು ಮಗುವಿನ ಹೆಸರಿನಲ್ಲಿ ರೂ.18,350 ಗಳನ್ನು ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ಪ್ರಾರಂಭಿಕ ಠೇವಣಿ ಇಡಲಾಗುತ್ತದೆ. 18 ವರ್ಷ ಪೂರ್ಣಗೊಂಡ ನಂತರದಲ್ಲಿ ಹೆಣ್ಣು ಮಕ್ಕಳು ರೂ. 1 ಲಕ್ಷ ಪರಿಪಕ್ಷ ಮೊತ್ತ ಪಡೆಯಲು ಅರ್ಹರಿರುತ್ತಾರೆ.
ಮಗುವನ್ನು ನೋಂದಾಯಿಸಲು ಅವಶ್ಯಕ ದಾಖಲೆಗಳು: ಅರ್ಜಿ ನಮೂನೆ, ಪೋಷಕರೊಂದಿಗೆ ಮಗುವಿನ ಭಾವಚಿತ್ರ, ಮಗುವಿನ ಜನನ ಪ್ರಮಾಣ ಪತ್ರದ ನಕಲು, ಶಾಶ್ವತ ಬಿಪಿಎಲ್ ಕಾರ್ಡ್, ಆದ್ಯತಾ ಕುಟುಂಬ ಪಡಿತರ ಚೀಟಿಯ ಪ್ರತಿ. ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ್ದಲ್ಲಿ ಜಾತಿ ಪ್ರಮಾಣ ಪತ್ರ, ವಿವಾಹ ನೋಂದಣಿ ಪ್ರಮಾಣ ಪತ್ರ, ಪೋಷಕರ ಸ್ವಯಂ ಘೋಷಣಾ ವಿವಾಹ ದೃಢೀಕರಣ ಪತ್ರ (ನಮೂನೆ-6ರಲ್ಲಿ).
ಭಾಗ್ಯಲಕ್ಷ್ಮಿ ಯೋಜನೆಯಡಿ ಪ್ರಾರಂಭದಿಂದ ಇದುವರೆಗೆ ಒಟ್ಟು 15,622 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 14,851 ಫಲಾನುಭವಿಗಳಿಗೆ ಠೇವಣಿ ಬಾಂಡ್ ಸ್ವೀಕೃತವಾಗಿದೆ. 771 ಫಲಾನುಭವಿಗಳಿಗೆ ಠೇವಣಿ ಬಾಂಡ್ ಬರಲು ಬಾಕಿ ಇರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.