ಮರಗೋಡು, ಡಿ. 30: ಇಲ್ಲಿನ ಹೊಸ್ಕೇರಿ-ಅಭ್ಯತ್‍ಮಂಗಲ ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ಹೊಸ್ಕೇರಿಯಿಂದ ಅಭ್ಯತ್ ಮಂಗಲ ಸಂಪರ್ಕಿಸುವ ಎಂಟು ಕಿಲೋಮೀಟರ್ ದೂರದ ರಸ್ತೆಯನ್ನು ರೂ. ಒಂದು ಕೋಟಿ ವೆಚ್ಚದಲ್ಲಿ ಅಗಲೀಕರಿಸುವ ಕಾಮಗಾರಿಗೆ ಅವರು ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಕಾಂತೂರು ಮೂರ್ನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಯ್ಯಪ್ಪ ಕಾಲೋನಿಯನ್ನು ಸಂಪರ್ಕಿಸುವ ಕಾಂಕ್ರಿಟ್ ರಸ್ತೆ ಕಾಮಗಾರಿಗೂ ಗುದ್ದಲಿ ಪೂಜೆ ನೆರವೇರಿಸಿದರು.

ಇನ್ನೊಂದೆಡೆ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50 ಲಕ್ಷ ರೂ ವೆಚ್ಚದ ಮರಗೋಡು - ಬಿದ್ರುಪಣೆ ನೂತನ ರಸ್ತೆ ಕಾಮಗಾರಿಗೂ ಶಾಸಕ ರಂಜನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗ್ರಾಮಗಳ ಮೂಲ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ಕಾಂಗೀರ ಸತೀಶ್, ಹೊಸ್ಕೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುಕ್ಕಾಟಿ ಚಿದಂಬರ, ಪ್ರಭುಶೇಖರ, ಬಡುವಂಡ್ರ ಕವಿತ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಳಂಗಂಡ ಅಪ್ಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.