ಮಡಿಕೇರಿ, ಡಿ. 28: ನಗರದ ಶ್ರೀ ಮುತ್ತಪ್ಪ ಸನ್ನಿಧಿ ಆವರಣದ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಇಂದು ನಾಲ್ಕು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಅಯ್ಯಪ್ಪ ದೀಪಾರಾಧನೋತ್ಸವವು ಅದ್ಧೂರಿಯಾಗಿ ನೆರವೇರಿತು. ಬೆಳಿಗ್ಗೆ 6 ಗಂಟೆಗೆ ನಡೆ ಸೇವೆಯೊಂದಿಗೆ; ಉತ್ಸವಕ್ಕೆ ಚಾಲನೆ ದೊರೆಯಿತು. ಆ ಬಳಿಕ ನೈರ್ಮಲ್ಯ ಪೂಜೆ, ಗಣಪತಿ ಹೋಮ, ಅಷ್ಟಾಭಿಷೇಕ, ಸಹಸ್ರನಾ ಮಾರ್ಚನೆ ಸೇವೆಗಳೊಂದಿಗೆ ಮಧ್ಯಾಹ್ನದ ಮಹಾಪೂಜೆ ನೆರವೇರಿತು.ಸಂಜೆ ಶಾಂತಿನಿಕೇತನ ಬಳಿಯ ಅಶ್ವಿನಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ವಿದ್ಯುತ್ ದೀಪಾಲಂಕೃತ ಮಂಟಪ ಸಹಿತ ಶ್ರೀ ಅಯ್ಯಪ್ಪ ಮೂರ್ತಿಯ ಮೆರವಣಿಗೆ ಆರಂಭಗೊಂಡಿತು. ನಗರದ ರಾಜಬೀದಿಗಳಲ್ಲಿ ಸಾಗಿದ ಶೋಭಾಯಾತ್ರೆಯು; ಅಯ್ಯಪ್ಪ ವ್ರತಧಾರಿಗಳಿಂದ ಶರಣು ಕರೆಯುವ ಮೂಲಕ ಚಂಡೆ ಸೇವೆಯೊಂದಿಗೆ ಸಾಗಿತು.
ಮುಸ್ಸಂಜೆಯ ನಡುವೆ ದೇವಾಲಯದ ಸನ್ನಿಧಿಯಲ್ಲಿ ಸಂಗಮಗೊಂಡ ಶೋಭಾಯಾತ್ರೆಯ ಬಳಿಕ; ಶ್ರೀ ಅಯ್ಯಪ್ಪ ಸ್ವಾಮಿಗೆ ದೀಪಾರಾಧನೆ, ಅಲಂಕಾರ ಪೂಜೆ, ಸೋಪಾನ ಸಂಗೀತ, ಪಡಿಪೂಜೆ, ರಂಗಪೂಜೆ, ಭಜನೆ ಸೇವೆಗಳೊಂದಿಗೆ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಸಾವಿರಾರು ಅಯ್ಯಪ್ಪ ವ್ರತಧಾರಿಗಳೊಂದಿಗೆ ಗುರುಸ್ವಾಮಿಗಳಾದ ಪಿ.ಸಿ. ಗೋಪಿಸ್ವಾಮಿ, ದೊರೆಸ್ವಾಮಿ, ಬಿ.ವೈ. ರುಕ್ಮಾ, ಆರ್. ಹರೀಶ್, ಟಿ.ಆರ್. ಹರೀಶ್ ಸೇರಿದಂತೆ ಹೇಮಂತ್ ಮತ್ತಿತರರು ನೇತೃತ್ವ ವಹಿಸಿದ್ದರು. ಶ್ರೀ ಅಯ್ಯಪ್ಪ ದೀಪಾರಾಧನೋತ್ಸವ ಪ್ರಯುಕ್ತ ಸನ್ನಧಿಯಲ್ಲಿ ವಿಶೇಷ ಅಲಂಕಾರದೊಂದಿಗೆ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
(ಮೊದಲ ಪುಟದಿಂದ)
ಸುಂಟಿಕೊಪ್ಪದಲ್ಲಿ ಪೂಜೋತ್ಸವ
ಸುಂಟಿಕೊಪ್ಪ : ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 49ನೇ ವರ್ಷದ ಮಂಡಲಪೂಜೆಯ ಅಂಗವಾಗಿ ಭವ್ಯ ಶೋಭಯಾತ್ರೆಯು ವಿಜ್ರಂಭಣೆಯಿಂದ ನಡೆಯಿತು.
ಅಯ್ಯಪ್ಪ ದೇವಾಲಯದಲ್ಲಿ ವಿಶೇಷ ಪೂಜೆ, ಬಿಲ್ವ ಪತ್ರ ಅರ್ಚನೆ, ತುಳಸಿ ಅರ್ಚನೆ ನಡೆದ ನಂತರ ದೇವಾಲಯದ ಆವರಣದಿಂದ ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೇರಳದ ಚಂಡೆ ಮತ್ತು ನೀಲಾಂಜನ ಹೊತ್ತ ಮಕ್ಕಳ ಮೆರವಣಿಗೆ ಮೂಲಕ ನೆರವೇರಿತು.
ರಾತ್ರಿ 10;30 ಗಂಟೆಗೆ ದೇವಾಲಯ ಬಾನಂಗಲದಲ್ಲಿ ಸಿಡಿಮದ್ದಿನ ಪ್ರದರ್ಶನ ನಡೆದು, ನಂತರ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಧನು ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್ ಗೋಪಿ, ಉಪಾಧ್ಯಕ್ಷ ಎ.ಶ್ರೀಧರನ್, ಬಿ.ಕೆ. ಪ್ರಶಾಂತ್, ಬಿ.ಎಲ್. ಆನಂದ, ಕಾರ್ಯದರ್ಶಿ ಎಂ.ಆರ್. ಶಶಿಕುಮಾರ್, ಖಜಾಂಚಿ ಬಿ.ಎಂ. ಸುರೇಶ್, ಗುರುಸ್ವಾಮಿ ಗಳಾದ ಬಾಲಕೃಷ್ಣ, ಮುತ್ತಯ್ಯ, ಮೋಹನ, ಬಿ.ಕೆ.ರಂಜಿತ್, ಪಿ.ಲೋಕೇಶ್, ಡಿ.ಕೆ.ರಾಕೇಶ್, ಉದಯ, ಶಿವಮಣಿ, ವಿ.ಎ. ಸಂತೋಷ್ ಇತರರು ಇದ್ದರು.
ಕರಿಕೆ ಮಂಡಲ ಪೂಜೋತ್ಸವ
ಕರಿಕೆ, ಡಿ:28: ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನ ಶಾಸ್ತಾವು ದೇವರ ಹದಿನೇಳನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಮಂಡಲ ದೀಪೋತ್ಸವವು ಇತ್ತೀಚೆಗೆ ಜರುಗಿತು.
ಶ್ರೀ ವನ ಶಾಸ್ತಾವು ಭಜನಾಮಂಡಳಿ, ಊರಿನ ಭಕ್ತರಿಂದ ಭಜನಾ ಕಾರ್ಯಕ್ರಮ ಹಾಗೂ ಪುಟಾಣಿ ಮಕ್ಕಳಿಂದ ಕುಣಿತ ಭಜನೆ ನಡೆಯಿತು. ನೆರೆದಿದ್ದ ಭಕ್ತಾಭಿಮಾನಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಚಂದ್ರನ್ ಗುರು ಸ್ವಾಮಿ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಾಲಯ ಆಡಳಿತ ಮಂಡಳಿಯ ಅಧÀ್ಯಕ್ಷ ನಾರಾಯಣ, ಉಪಾಧ್ಯಕ್ಷ ಕೆ.ಡಿ.ಬಾಲಕೃಷ್ಣ, ಕಾರ್ಯದರ್ಶಿ ತಾರೇಶ್ ಹೊದ್ದೆಟ್ಟಿ, ಅಯ್ಯಪ್ಪ ವ್ರತಧಾರಿಗಳು, ಆಡಳಿತ ಮಂಡಳಿ ಸದಸ್ಯರು, ಮಹಿಳಾ ಮಂಡಳಿ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.