ಮಡಿಕೇರಿ, ಡಿ. 28: ಕೊಡಗು ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಲ್ಲಿ ನೈಸರ್ಗಿಕವಾದ ನದಿಗಳು ಸ್ವಚ್ಛತೆ ಕಳೆದುಕೊಳ್ಳುತ್ತಿರುವ ಪರಿಸ್ಥಿತಿ ಒಂದೆಡೆಯಾದರೆ, ಒಂದೆರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಗಳು ಘಟಿಸುತ್ತಿರುವ ಆತಂಕದ ಸನ್ನಿವೇಶವೂ ಕಂಡುಬರುತ್ತಿದೆ.
ಈ ನಿಟ್ಟಿನಲ್ಲಿ ಸ್ಥಳೀಯ ಕೆಲವು ಯುವಕರು ನದಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾಗೃತಿಯೊಂದಿಗೆ, ಸ್ವತಃ ಈ ವಿಚಾರದಲ್ಲಿ (ಮೊದಲ ಪುಟದಿಂದ) ಕೆಲಸನಿರ್ವಹಿಸುವುದು ಹಾಗೂ ಪ್ರಾಕೃತಿಕ ವಿಕೋಪಗಳು ಎದುರಾದ ಪಕ್ಷದಲ್ಲಿ ಆತ್ಮರಕ್ಷಣೆ ಮಾಡಿಕೊಳ್ಳುವಲ್ಲಿ ಮಾರ್ಗದರ್ಶನ ನೀಡುವ ಚಿಂತನೆಯೊಂದಿಗೆ ನಾಪೋಕ್ಲು ಸನಿಹದ ಕಕ್ಕಬೆ ನದಿಯಲ್ಲಿ ರೋಮಾಂಚಕಾರಿ ಈಜು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಕ್ಕಬೆ ಸ್ವಿಮ್ಮಿಂಗ್ ಕ್ಲಬ್, ಜಂಗಲ್ ಮೌಂಟ್ ಅಡ್ವೆಂಚರ್ಸ್‍ನ ಮೂಲಕ ಸ್ಥಳೀಯರಾದ ಅಪ್ಪಾರಂಡ ಸಾಗರ್, ಬೊಳಿಯಾಡಿರ ಸಂತು ಸುಬ್ರಮಣಿ, ಮಾದಂಡ ಉಮೇಶ್ ಅವರುಗಳು ಈ ಪ್ರಯತ್ನ ನಡೆಸಿದ್ದಾರೆ.
ಇದರಂತೆ ತಾ. 25ರಂದು ಇದೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಎಂಬಂತೆ ಕಕ್ಕಬೆ ನದಿಯಲ್ಲಿ ರಿವರ್ಸ್ ಸ್ವಿಮ್ಮಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ಸ್ಪರ್ಧೆಗಳು ಸೇರಿದಂತೆ, ಮಹಾರಾಷ್ಟ್ರ, ಕೇರಳ ಮತ್ತಿತರ ಕಡೆಗಳಿಂದಲೂ ಸುಮಾರು 93 ಈಜುಪಟುಗಳು ಪಾಲ್ಗೊಂಡಿದ್ದರು.ಈ ಸ್ಪರ್ಧೆಯೊಂದಿಗೆ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ನಡೆಸಲಾಗಿದೆ ಎಂದು ಅಪ್ಪಾರಂಡ ಸಾಗರ್ ‘ಶಕ್ತಿಗೆ ತಿಳಿಸಿದರು. ಇದೇ ನದಿಯಲ್ಲಿ ಕಳೆದ ವರ್ಷ ನಾಲ್ಕುಟನ್, ಈ ಬಾರಿ ಒಂದು ಟನ್‍ನಷ್ಟು ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಹೊರಭಾಗದಿಂದ ಹಲವಾರು ಸ್ಪರ್ಧಿಗಳ ಪಾಲ್ಗೊಳ್ಳುವಿಕೆ ಇತ್ತು. ದೃಷ್ಟಿಹೀನ ವ್ಯಕ್ತಿಯೊಬ್ಬರು 1.5 ಕಿ.ಮೀ. ದೂರವನ್ನು 52 ನಿಮಿಷದಲ್ಲಿ ಕ್ರಮಿಸಿ ಗಮನ ಸೆಳೆದಿದ್ದಾರೆ. ಮಹಿಳಾ ಸ್ಪರ್ಧಿಯೊಬ್ಬರೂ ಪಾಲ್ಗೊಂಡಿದ್ದರು. ಆದರೆ ಜಿಲ್ಲೆಯ ಸ್ಪರ್ಧಿಗಳ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು ಎಂದು ಬೇಸರ ವ್ಯಕ್ತಪಡಿಸಿದ ಸಾಗರ್, ಸಾಹಸಮಯವಾದ ಈಜು ಸ್ಪರ್ಧೆಯಲ್ಲಿ ಜಿಲ್ಲೆಯವರೂ ಪಾಲ್ಗೊಳ್ಳುವಂತಾಗ ಬೇಕು. ಇದು ಅವರ ಬದುಕಿಗೂ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಪೋಷಕರೂ ಮಕ್ಕಳನ್ನು ಉತ್ತೇಜಿಸ ಬೇಕಾಗಿದೆ ಎಂದರು.
ಪ್ರಯತ್ನಕ್ಕೆ ಸ್ಪಂದನ
ಆಯೋಜಕರ ಪ್ರಯತ್ನಕ್ಕೆ ಜಲಕ್ರೀಡೆ ಹಾಗೂ ರೆಸ್ಕ್ಯೂ ಟೀಂನಲ್ಲಿ ಕಾರ್ಯ ನಿರ್ವಹಿಸುವ ಹಲವರ ಸ್ಪಂದನೆ ಯೂ ದೊರೆತಿತ್ತು. ನದಿಯಲ್ಲಿ ರಿವರ್ಸ್ ಸ್ವಿಮ್ಮಿಂಗ್ ಸ್ಪರ್ಧೆ ಅಪಾಯಕಾರಿ ಯಾದರೂ ಸ್ಪರ್ಧಿಗಳ ಹಿಂದೆ ಈ ತಂಡ ಬೆಂಗಾವಲು ಒದಗಿಸಿತ್ತು. ಕಾವೇರಿ ರಿವರ್ ರ್ಯಾಫ್ಟಿಂಗ್, ಕೂರ್ಗ್ ವೈಟ್‍ವಾಟರ್ ರ್ಯಾಫ್ಟರ್ ಸಂಸ್ಥೆ, ರೆಸ್ಕ್ಯೂ ಗ್ರೂಪ್ ಕೊಡಗು , ಜಂಗಲ್‍ಮೌಂಟ್, ಎವರ್‍ಗ್ರೀನ್ ಕೌಂಟಿ ಬಿಟ್ಟಂಗಾಲ, ಮತ್ತಿತರ ಸಂಸ್ಥೆಗಳು ಈ ಸ್ಪರ್ಧೆಗೆ ಸಹಕಾರ ನೀಡಿದ್ದರು. ಈ ತಂಡಗಳು ಈ ಹಿಂದೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತಗಳ ಸಂದರ್ಭವೂ ರಕ್ಷಣಾ ಕಾರ್ಯನಿರ್ವಹಿಸಿವೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿವಿಧ ವಿಭಾಗಗಳ ವಿಜೇತರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಹಾಗೂ ಸರ್ಟಿಫಿಕೇಟ್ ನೀಡಲಾಯಿತು. ಮಾಜಿ ರಾಷ್ಟ್ರೀಯ ಚಾಂಪಿಯನ್ ಹಾಗೂ ತರಬೇತುದಾರರಾಗಿರುವ ರಾಮಕೃಷ್ಣ ನಾಯರ್ ಅವರು ಇದರಲ್ಲಿ ಭಾಗಿಯಾಗಿ ಸ್ಪರ್ಧಿಗಳನ್ನು ಉತ್ತೇಜಿಸಿದ್ದಾರೆ.
ಕಾರ್ಯಕ್ರಮದಲ್ಲಿ...
ಸ್ಪರ್ಧೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಕಾಫಿ ಬೆಳೆಗಾರ ಬಾಚಮಂಡ ರಾಜಾ ಪೂವಣ್ಣ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಜಿ.ಪಂ. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಜಿ.ಪಂ. ಸದಸ್ಯ ಮುರಳಿ ಕರುಂಬಮಯ್ಯ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಉಮಾಪ್ರಭು, ಕೋಡಿರ ಇಂದಿರಾ ಹರೀಶ್, ಆರ್.ಎಂ.ಸಿ. ಅಧ್ಯಕ್ಷ ಅಂಬಿ ಕಾರ್ಯಪ್ಪ, ಕಕ್ಕಬೆ ಗ್ರಾ.ಪಂ. ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಪ್ರೆಸ್‍ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ, ಮಡಿಕೇರಿಯ ಹಾಸ್ಪಿಟಾಲಿಟಿ ಸೈನ್ಸ್‍ನ ಮಂಡೇಪಂಡ ರತನ್ ಕುಟ್ಟಯ್ಯ, ಬಾಚಮಂಡ ಲವ, ಕುಡಿಯರ ಮುತ್ತಪ್ಪ, ಕಲ್ಯಾಟಂಡ ಗಿರೀಶ್, ಮತ್ತಿತರರು ಪಾಲ್ಗೊಂಡಿದ್ದರು.
ಅಂತರರಾಷ್ಟ್ರೀಯ ರ್ಯಾಲಿಪಟು ಮಾಳೇಟಿರ ಜಗತ್ ನಂಜಪ್ಪ ಅವರು ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.
ಪ್ರತಿಯೊಬ್ಬರು ನದಿ ಸ್ವಚ್ಛತೆ ಕಾಪಾಡಬೇಕು. ಜಿಲ್ಲಾಡಳಿತವೂ ಈ ನಿಟ್ಟಿನಲ್ಲಿ ಗಮನಹರಿಸಬೇಕು. ಜಿಲ್ಲೆಯ ಪೋಷಕರು ಮಕ್ಕಳನ್ನು ಈಜು ಸ್ಪರ್ಧೆಯತ್ತ ಉತ್ತೇಜಿಸಬೇಕೆಂಬುದು ತಮಗಳ ಅಭಿಲಾಷೆಯಾಗಿದೆ ಎಂದು ಅಪ್ಪಾರಂಡ ಸಾಗರ್ ಹೇಳುತ್ತಾರೆ.