ಸತಿ-ಪತಿಗಳು ಪರಸ್ಪರ ದೈಹಿಕ ಸಮಾಗಮವಾಗುವದಕ್ಕೆ ಮುನ್ನ ಯಾವ ರೀತಿಯ ಸಿದ್ಧತೆ, ಪೂರ್ವ ತಯಾರಿಯಿರಬೇಕು ಎಂಬ ಲೋಪಾಮುದ್ರೆಯ ಅಭಿಪ್ರಾಯ, ಸಲಹೆಯನ್ನು ಕೇಳಿ ಅಗಸ್ತ್ಯರು ಚಕಿತರಾಗುತ್ತಾರೆ. ಆಗಷ್ಟೇ ತಪೋಭೂಮಿಕೆಯಿಂದ ಹೊರಬಂದು ಪ್ರಥಮಬಾರಿಗೆ ತನ್ನ ಪತ್ನಿ ಲೋಪಾಮುದ್ರ್ರೆಯೊಂದಿಗೆ ಸುರತ ಕ್ರಿಯೆ ನಡೆಸಬೇಕೆಂದು ಉತ್ಸುಕರಾಗಿದ್ದ ಮಹರ್ಷಿ ಅಗಸ್ತ್ಯರು ಅವಸರ ಪಡದೆ, ತನ್ನ ಧರ್ಮ ಪತ್ನಿ, ಸಹಧರ್ಮಿಣಿ, ಸಹವರ್ತಿನಿ ಲೋಪಾಮುದ್ರೆಯ ಮಾತಿಗೆ ಮಾನ್ಯತೆ ನೀಡುತ್ತಾರೆ.
ಪ್ರಿಯತಮೆಯಾದ ಲೋಪಾಮುದ್ರೆಯ ಮಾತುಗಳನ್ನು ಕೇಳಿ ಅಗಸ್ತ್ಯರು ನಸುನಗುತ್ತಾ ಹೇಳಿದರು: “ಕಲ್ಯಾಣಿ, ಸುಮಧ್ಯಮೆ, ಲೋಪಾಮುದ್ರೆ, ನೀನು ಹೇಳಿದಂತೆ ನನ್ನೀ ಶರೀರವನ್ನು ಉತ್ತಮವಾದ ವಸ್ತ್ರಧಾರಣೆಯಿಂದಲೂ,ದಿವ್ಯಾಭರಣಗಳಿಂದಲೂ ಅಲಂಕರಿಸಿಕೊಳ್ಳಲು ನನ್ನಲ್ಲಿ ನಿನ್ನ ತಂದೆ ವಿದರ್ಭ ಮಹಾರಾಜ ನಿಗಿರುವಂತೆಯೇ ಐಶ್ವರ್ಯವಿರುವದೇನು ? ಉತ್ತಮ ವಸ್ತ್ರಗಳನ್ನು, ರತ್ನಮಯ ದಿವ್ಯಾಭರಣಗಳನ್ನು ನಿನಗೆ ತಂದುಕೊಡಲಿಕ್ಕಾದರೂ ನನ್ನಲ್ಲಿ ಹಣವಿರುವದೇನು ? ಧನವಿಲ್ಲದಿದ್ದಲ್ಲಿ ಇವುಗಳು ಪ್ರಾಪ್ತವಾಗುವ ಮಾರ್ಗವೆಂತು ? ಇಂತಹ ಅಮೂಲ್ಯ ವಸ್ತುಗಳನ್ನು ಕೇವಲ ತಪೋಧನನಾದ ನಾನು ಪಡೆಯಲು ಹೇಗೆ ತಾನೇ ಸಾಧ್ಯ?
ಆಗ ಲೋಪಾಮುದ್ರೆ ಮಾತೃಭಾಷೆ ಶುದ್ಧ ಸಂಸ್ಕøತದಲ್ಲಿ ಹೀಗೆ ಸಲಹೆ ನೀಡುತ್ತಾಳೆ: ‘‘ಈಶೋಸಿ ತಪಸಾ ಸರ್ವಂ ಸಮಾಹರ್ತುಂ ತಪೋಧನ, ಕ್ಷಣೇನ ಜೀವಲೋಕೇ ಯದ್ವಸು ಕಿಂಚನ ವಿದ್ಯತೇ”. ಇದರರ್ಥ ಹೀಗಿದೆ: ‘‘ಮಹಾನುಭಾವ, ನೀವು ತಪೋಧನರು, ತಪ:ಪ್ರಭಾವದಿಂದ ಪ್ರಪಂಚದ ಈಶತ್ವವನ್ನು ಪಡೆದಿರುತ್ತೀರಿ. ನೀವು ಮನಸ್ಸು ಮಾಡಿದರೆ ನಿಮಿಷಾರ್ಧದಲ್ಲಿ ಈ ವಿಶ್ವದಲ್ಲಿರುವ ಸಕಲವಸ್ತು ಗಳನ್ನೂ ಸಹ ನಿಮ್ಮ ತಪೋಬಲದಿಂದ ಸಿದ್ಧಪಡಿಸಲು ಸಮರ್ಥ ರಾಗಿರುವಿರಿ. ಈ ವಿಷಯವನ್ನು ನಾನು ತಿಳಿಯದವಳಲ್ಲ್ಲ ಪತಿದೇವ”
ಇದೆಂತಹ ರೋಮಾಂಚಕಾರೀ ಸಂಭಾಷಣೆ, ಒಂದೆಡೆ ಮಹಾತಪಸ್ವಿ ಅಗಸ್ತ್ಯರು, ಇನ್ನೊಂದೆಡೆ ಮಹಾ ಸಾಧ್ವೀಮಣಿ ಲೋಪಾಮುದ್ರೆ. ಇದೊಂದು ರೀತಿ ಅಗಸ್ತ್ಯರಿಗೂ ಅಗ್ನಿ ಪರೀಕ್ಷೆ, ಸದಾ ತಪೋನಿರತರಾಗಿರುವ ಅಗಸ್ತ್ಯರು ತಾವು ಸಂಪಾದಿಸಿದ ತಪೋಶಕ್ತಿಯನ್ನು ಸದಾ ಲೋಕಕಲ್ಯಾಣಕ್ಕಾಗಿ, ಲೋಕಕ್ಕೆ ಸಂಕಷ್ಟ ತಲೆದೋರಿದಾಗ ಅಂತಹ ಸಂಕಟ ಕೋಟಲೆಯಿಂದ ಜನರನ್ನು ಪಾರು ಮಾಡಲು, ಧರ್ಮ ಸ್ಥಾಪನೆಗಾಗಿ ಮಾತ್ರ ಬಳಸುತ್ತ ಬಂದಿದ್ದರು. ತಮ್ಮ ತಪಸ್ಸಿನ ಫಲವನ್ನು ಲೋಕೋತ್ತರ ಉತ್ತಮ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರು. ತಮ್ಮ ತಪೋಬಲ ಇದರಿಂದಾಗಿ ಕಡಿಮೆಯಾಗದಿರಲು ಮತ್ತೆ ಮತ್ತೆ ತಪಸ್ಸುಗೈಯ್ಯುತ್ತಿದ್ದರು. ಆದರೆ, ಇದುವರೆಗೆ ತನ್ನ ಸ್ವಂತ ಸುಖಕ್ಕಾಗಿ, ಕುಟುಂಬದ ಹಿತಕ್ಕಾಗಿ ತಮ್ಮ ತಪಸ್ಸನ್ನು ಅವರೆಂದಿಗೂ ವ್ಯಯಮಾಡಿರಲಿಲ್ಲ. ಅವರ ತಪೋಶಕ್ತಿ ಎಷ್ಟೊಂದು ಅಗಾಧವಾಗಿತ್ತು, ಪರಿಣಾಮಕಾರಿಯಾಗಿತ್ತು ಎಂಬ ಮಹತ್ವವನ್ನು ಸ್ವತ; ಲೋಪಾಮುದ್ರೆ ತನ್ನ ಸಂಭಾಷಣೆ ಮೂಲಕ ಲೋಕಕ್ಕೆ ಪರಿಚಯಿಸಿರುವದನ್ನು ಕಾಣಬಹುದು. ಅವರನ್ನು ಪರೀಕ್ಷಿಸುವಂತೆ ಪತ್ನಿ ಲೋಪಾಮುದ್ರೆ ಪ್ರಶ್ನೆ ಮುಂದಿಟ್ಟಾಗ ವಿಚಲಿತರಾಗದೆ ಅಗಸ್ತ್ಯರು ಹೀಗೆ ಉತ್ತರಿಸಿದರು:” ಪ್ರಿಯೆ, ಲೋಪಾಮುದ್ರೆ, ನೀನು ಹೇಳುವದೂ ನಿಜ, ನನಗಿಚ್ಛೆಯಾದ ವಸ್ತ್ತುಗಳನ್ನು ತಪೋಬಲದಿಂದ ನಾನು ನಿಮಿಷಾರ್ಧದಲ್ಲಿ ಸೃಷ್ಟಿಸಬಲ್ಲೆನು. ಆದರೆ, ನಾನು ಬಹುಕಷ್ಟದಿಂದ ಆರ್ಜಿಸಿರುವ ತಪ:ಫಲವು ಇದರಿಂದ ವ್ಯಯವಾಗಿ ಹೋಗುವದಲ್ಲವೇ?”ಯಥಾ ತು ಮೇ ನ ನಶ್ಯೇತ ತಪಸ್ತನ್ಮಾಂ ಪ್ರಚೋದಯ” ಅಂದರೆ, ಯಾವ ಕಾರ್ಯ ಮಾಡುವದರಿಂದ ನನ್ನ ತಪ:ಫಲವು ನಾಶವಾಗುವ ದಿಲ್ಲವೋ ಅಂತಹ ಕಾರ್ಯವನ್ನು ನೀನು ಹೇಳಿದೆಯಾದರೆ ನಾನು ಖಂಡಿತವಾಗಿಯೂ ಮಾಡು ವೆನು” ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಅಗಸ್ತ್ಯರಿಗೆ ಲೋಪಾಮುದ್ರೆ ಯಲ್ಲಿದ್ದ ಅಗಾಧ ಪ್ರೀತಿ ಹಾಗೂ ಆಕೆಯ ಮೇಲಿದ್ದ ಅಚಲ ವಿಶ್ವಾಸ. ಶೀಘ್ರ ಕೋಪಿಗಳಾದ ಅಗಸ್ತ್ಯರು ಲೋಪಾಮುದ್ರೆಯ ನಡೆ, ನುಡಿ, ವರ್ತನೆ ಸದ್ಗುಣ, ರೂಪಕ್ಕೆ ಮಾರು ಹೋಗಿರುತ್ತಾರೆ. ಅವರೇ ಸ್ವತ: ನಿರ್ಧಾರ ತೆಗೆದುಕೊಳ್ಳ ಬಹುದಾದರೂ ತನ್ನ ಮಡದಿಗೆ ಅತಿ ಪ್ರಾಮುಖ್ಯತೆ ಕೊಡುತ್ತಾರೆ. ಆಕೆಯೊಂದಿಗೆ ಏಕಾಂತದಲ್ಲಿ ದ್ದರೂ ತನ್ನ ಸಹಧರ್ಮಿಣಿ ಯೆನ್ನುವ ಸದ್ಭಾವನೆ, ಗೌರವ ನೀಡುತ್ತಾರೆ. ತಾನು ಯಾವ ರೀತಿ ಆಕೆಯೊಂದಿಗೆ ಸಮಾಗಮಕ್ಕೆ ಮುನ್ನ ತಯಾರಾಗಲು ಅಗತ್ಯವಾದ ವಾತಾವರಣ ಕಲ್ಪಿಸಿಕೊಳ್ಳಲು ಮುಂದುವರಿಯಬೇಕು ಎಂಬ ಸಲಹೆಯನ್ನು ಮುಕ್ತವಾಗಿ ಲೋಪಾಮುದ್ರೆಯೊಂದಿಗೇ ಕೇಳುತ್ತಾರೆ. ಸಮಾಗಮ ಕ್ರಿಯೆ ಬಗ್ಗೆ ಅವರಲ್ಲಿದ್ದ, ಕುತೂಹಲ ಹಾಗೂ ತ್ವರಿತವಾಗಿ ಸೇರಬೇಕೆನ್ನುವ ಅದಮ್ಯ ಬಯಕೆಯನ್ನೂ ಅಗಸ್ತ್ಯರು ನಿಯಂತ್ರಿಸಿ ಕೊಂಡು ತನ್ನ ಪತ್ನಿಯ ನಿರ್ದೇಶನಕ್ಕಾಗಿ ಕಾತರತೆ ವ್ಯಕ್ತಪಡಿಸುತ್ತಾರೆ.
ಆಗ ಲೋಪಾಮುದ್ರೆ ಸಂದರ್ಭೋಚಿತವಾಗಿ ಸನ್ನಿವೇಶಕ್ಕನುಗುಣ ವಾಗಿ ಹೀಗೆ ಉತ್ತರಿಸುತ್ತಾಳೆ:-
ಅಲ್ಪಾವಶಿಷ್ಟ: ಕಾಲೋಯಮೃತೋರ್ಮಮ ತಪೋಧನ, ನ ಚಾನ್ಯಥಾಹಮಿಚ್ಛಾಮಿ ತ್ವಾಮುಪೈತುಂ ಕಥಂಚನ, ನ ಚಾಮಿ ಧರ್ಮಮಿಚ್ಛಾಮಿ ವಿಲೋಪ್ತುಂ ತೇ ಕಥಂಚನ, ಏವಂ ತು ಮೇ ಯಥಾ ಕಾಮಂ ಸಂಪಾದಯಿತುಮರ್ಹಸಿ. ಇದರ ಅರ್ಥ ಹೀಗಿದೆ:-ಪತಿದೇವ, ನನ್ನ ಋತುಕಾಲದ ಸ್ವಲ್ಪ ಭಾಗವು ಮಾತ್ರವೇ ಇನ್ನು ಉಳಿದಿದೆ. ನಾನು ಹಿಂದೆಯೇ ತಿಳಿಸಿದಂತೆ ವೈಭವೋಪೇತವಾದ ಸನ್ನಿವೇಶದಲ್ಲಿ ಮಾತ್ರವೇ ತಮ್ಮೊಡನೆ ಸಮಾಗಮವನ್ನು ಇಚ್ಛಿಸುತ್ತೇನೆ. ವೈಭವೋಪೇತವಾದ ಸನ್ನಿವೇಶದ ಕಲ್ಪನೆಯು ತಮ್ಮ ತಪ: ಫಲದ ವ್ಯಯದಿಂದಾಗಲೆಂದೂ ಸಹ ನಾನು ಹೇಳಲಾರೆನು. ಯಾವ ರೀತಿ ಯಲ್ಲಿ ತಮಗೆ ಉಚಿತವೆನಿಸುವದೋ ಆ ರೀತಿಯಲ್ಲಿ ನನ್ನ ಕಾಮನೆ ಗಳನ್ನು ಪೂರೈಸಿಕೊಡಲು ತಾವು ಅರ್ಹರಾಗಿರುತ್ತೀರಿ” ಎನ್ನುತ್ತಾಳೆ ವನಸಿರಿಯ ಹಸಿರಿನ ನಡುವೆ ತನ್ನ ಪತಿಯ ಮುಂದೆ ನಿಂತಿದ್ದ ಸುಕೋಮಲೆ ಲೋಪಾಮುದ್ರೆ.
ಇದೆಂತಹ ಸಮತೂಕದ ಮಾತು! ತನ್ನ ಪತಿಯ ವ್ಯಕ್ತಿತ್ವಕ್ಕೆ ಸರಿಸಮನಾಗಿ ಪತ್ನಿಯಾದವಳು ಅರ್ಧಾಂಗಿಯೆಂಬ ಲೋಕೋಕ್ತಿಗೆ ಅಪಚಾರವಾಗದಂತೆ ಪತಿ-ಪತ್ನಿಯರ ಸಮಾಗಮವೂ ಅತ್ಯಂತ ಮಹತ್ವಪೂರ್ಣ ವಾದುದು ಎಂಬದನ್ನು ಆಕೆಯ ಮಾತಿನ ಪ್ರೌಢಿಮೆ ಸಾಕ್ಷೀಕರಿಸು ತ್ತದೆ. ದೈಹಿಕ ಸಮಾಗಮ ಪ್ರಕ್ರಿಯೆಗಳು ಸಹಜವಾದರೂ ಅದಕ್ಕೆ ಪೂರಕ ಸನ್ನಿವೇಶಗಳು ಯಾವ ರೀತಿ ಇರಬೇಕು, ಮನ:ಪೂರ್ವಕ ತನ್ಮಯತೆಯ ಸಮ್ಮಿಲನಕ್ಕೆ ವೈಭವಪೂರ್ಣವಾದ ವಾತಾವರಣವಿದ್ದರೆ ಮಾತ್ರ ಆ ಪ್ರಕ್ರಿಯೆ ಪರಿಪೂರ್ಣವಾಗುತ್ತದೆ ಎಂಬದರ ಕುರಿತು ಆಕೆ ತನ್ನ ದೃಢ ನಿಲುವನ್ನು ಪುನರುಚ್ಚರಿಸುತ್ತಾಳೆ. ಹೇಗೆಂದರೆ ಹಾಗೆಂಬಂತೆ ಮಿಳಿತ ಗೊಳ್ಳ್ಳುವ ಆತುರಾತುರದ ಬಯಕೆ ಈಡೇರಿಕೆಯು ಅಸಂಬದ್ಧ ವಾದುದು ಎನ್ನುವ ಅಮೋಘ ಸಂದೇಶ ಸಾರುತ್ತಾಳೆ. ದಾಂಪತ್ಯ ಸಾಮರಸ್ಯದಲ್ಲಿ ಆದರ್ಶದ ನಡೆಯೊಂದಿಗೆ ಇತರರಿಗೆ ಆಕೆ ಮಾರ್ಗದರ್ಶಕಳಾಗಿ ವರ್ತಿಸುತ್ತಾಳೆ.
ಹೀಗೆ ವನವಾಸ ಕಾಲದಲ್ಲಿ ಪಾಂಡವ ಜ್ಯೇಷ್ಠ ಧರ್ಮರಾಜ ಹಾಗೂ ಆತನ ನಾಲ್ವರು ಸಹೋದರರಾದ ಭೀಮ, ಅರ್ಜುನ, ನಕುಲ, ಸಹದೇವ ಮತ್ತು ಪತ್ನಿ ದ್ರೌಪದಿಗೆ ನೈಮಿಷಾರಣ್ಯದಲ್ಲಿ ಅಗಸ್ತ್ಯ ಮಹರ್ಷಿಗಳ ಆಶ್ರಮದ ಬಳಿ ತಂಗಿದ್ದಾಗ ಲೋಮಶ ಮಹರ್ಷಿಗಳು ಮಹತ್ವಪೂರ್ಣವಾದ ಅಗಸ್ತ್ಯ ಲೋಪಾಮುದ್ರೆಯರ ಚರಿತ್ರೆಯನ್ನು ಹೇಳುತ್ತಿದ್ದರು. ಪಾಂಡವರು ಮತ್ತು ದ್ರೌಪದಿ ಅತ್ಯಂತ ಕುತೂಹಲದಿಂದ ಮುಂದೇನಾಯಿತು, ಅಗಸ್ತ್ಯರು- ಲೋಪಾಮುದ್ರ್ರೆಯ ಸಮಾಗಮಕ್ಕೆ ಅನುಕೂಲಕರ ವಾತಾವರಣ ಹೇಗೆ ಒದಗಿ ಬಂದಿತು ? ಎಂಬಿತ್ಯಾದಿ ಆಸಕ್ತಿಯುತ ಪ್ರಶ್ನೆಗಳನ್ನು ಮುಂದಿಟ್ಟರು. ಪಾಂಡವರು ಈ ಚರಿತ್ರೆ ಕೇಳುವದರಲ್ಲ್ಲಿ ತಲ್ಲೀನಗೊಂಡಿರುವದನ್ನು ಗಮನಿಸಿದ ಲೋಮಶರು ತಾವೂ ಕೂಡ ಉತ್ಸುಕಭರಿತರಾದರು. ಇದೊಂದು ಪುಣ್ಯಮಯವಾದ ಚರಿತ್ರೆ ಎನ್ನುತ್ತ ಅಗಸ್ತ್ಯ- ಲೋಪಾಮುದ್ರೆಯ ಕಥನವನ್ನು ಪ್ರತ್ಯಕ್ಷ ಗೋಚರವಾಗುವಂತೆ ತಮ್ಮ ವಾಕ್ಚಾತುರ್ಯತೆಯಿಂದ ವರ್ಣಿಸುತ್ತ ಮತ್ತೆ ಮುಂದುವರಿಸಿದರು:-
“ಅಗಸ್ತ್ಯರು ಲೊಪಾಮುದ್ರೆಯೊಂದಿಗೆ ಸಮಾಗಮಕ್ಕಾಗಿ ಅಗತ್ಯವಾದ ವೈಭವೋಪೇತ ಸನ್ನಿವೇಶ ಸೃಜಿಸಲು ಉಳಿದಿರುವ ಏಕೋಪಾಯ ಮಾರ್ಗವೆಂದರೆ ಅದಕ್ಕೆ ಬೇಕಾದಂತಹ ಐಶ್ವರ್ಯವನ್ನು ಸಂಪಾದಿಸಲೇಬೇಕು ಎಂದು ಖಚಿತ ನಿರ್ಧಾರ ಕೈಗೊಂಡರು. ಈ ಕಾರ್ಯಕ್ಕಾಗಿ ಅವರು ಆಶ್ರಮವನ್ನು ಬಿಟ್ಟು ಹೊರಡಲು ಅನುವಾದರು. ಹೊರಡುವ ಮುನ್ನ ಲೋಪಾಮುದ್ರೆಗೆ ಆಶ್ವಾಸನೆಯಿತ್ತರು, ಅವರ ಮಾತು ಹೀಗಿದೆ;- “ಕಲ್ಯಾಣಿ, ಲೋಪಾಮುದ್ರ್ರೆ, ಈ ನಿನ್ನ ಅಭಿಲಾಷೆಯು ನಿನ್ನ ದೃಢ ನಿಶ್ಚಯವೇ ಆಗಿರುವದರಿಂದ ನಾನು ಕಾಮೋಪಭೋಗ ವಸ್ತುಗಳ ಪ್ರಾಪ್ತಿಗಾಗಿ ಐಶ್ವರ್ಯವನ್ನು ಸಂಪಾದಿಸಿ ತರಲು ಈಗಲೇ ಆಶ್ರಮದಿಂದ ಹೊರಡುವೆನು. ಏಕೆಂದರೆ ಈ ವನಪ್ರದೇಶದಲ್ಲಿದ್ದುಕೊಂಡು ಏನನ್ನೂ ಸಂಪಾದಿಸಲು ಅಸಾಧ್ಯ. ನಾನು ಬರುವವರೆಗೂ ನೀನಿಲ್ಲಿಯೇ ವ್ರತಾನುಷ್ಠಾನಗಳಿಂದ ಸಮಯವನ್ನು ಕಳೆಯುತ್ತಿರು” ಎಂದು ಸೂಚನೆಯಿತ್ತರು. ತಾನು ಅಗತ್ಯವಾದ ಐಶ್ವರ್ಯವನ್ನು ಸಂಪಾದಿಸಿ ಅನುಕೂಲಕರ ವಾತಾವರಣದಲ್ಲಿ ಸಮಾಗಮಕ್ಕೆ ಏರ್ಪಾಡು ಮಾಡುವವರೆಗೂ ಲೋಪಾಮುದ್ರೆ ಆಕೆಯ ಬಯಕೆಯನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಇನ್ನೂ ಕೆಲ ಕಾಲ ಆಕೆ ಜಿತೇಂದ್ರಿಯ ಳಾಗಿರಬೇಕಾದ ಸನ್ನಿವೇಶವಿದೆ. ಅದಕ್ಕೋಸ್ಕರ ಅವಳು ಈ ಹಿಂದಿನಂತೆಯೇ ವ್ರ್ರತಾನುಷ್ಠಾನ ಮಾಡಬೇಕಾದ ಅನಿವಾರ್ಯತೆ ಯಿದೆ ಎಂಬ ಕುರಿತು ಮಹರ್ಷಿಗಳು ಆಕೆಗೆ ಸೂಚ್ಯವಾಗಿ ನುಡಿದಿದ್ದರು.
ಲೋಮಶರು ಚರಿತ್ರೆಯನ್ನು ಮುಂದುವರಿಸುತ್ತ ಅತ್ಯಂತ ಚಕಿತರಾಗಿ ಮುಂದಿನ ಸನ್ನಿವೇಶದ ಬಗ್ಗೆ ಆಸಕ್ತರಾಗಿದ್ದ ಪಾಂಡವರಿಗೆ ವಿವರಿಸುತ್ತಾರೆ:- “ಧರ್ಮರಾಜ, ತಮ್ಮ ಆಶ್ರಮದಿಂದ ಹೊರ ಹೊರಟ ಅಗಸ್ತ್ಯರು ಐಶ್ವರ್ಯ ಸಂಪಾದನೆಗಾಗಿ ಅನ್ಯ ಮಾರ್ಗ ಸಿಗದೆ ನೇರವಾಗಿ ಶ್ರ್ರುತರ್ವಾಣ ಎಂಬ ರಾಜನ ರಾಜಧಾನಿಗೆ ಪಾದಯಾತ್ರೆ ಮೂಲಕ ಸಂಚಾರ ಕೈಗೊಳ್ಳುತ್ತಾರೆ. ಶ್ರ್ರುತರ್ವಾಣ ಓರ್ವ ಮಹಾಧನಿಕ ಎಂದು ಸುಪ್ರಸಿದ್ಧನಾಗಿರುತ್ತಾನೆ. ಅಗಸ್ತ್ಯರು ತನ್ನ ರಾಜಧಾನಿಗೆ ಬರುತ್ತಿದ್ದಾರೆ ಎಂಬ ವರ್ತಮಾನ ವನ್ನು ತನ್ನ ಚಾರಣರ ಮೂಲಕ ತಿಳಿದೊಡನೇ ಶ್ರುತರ್ವಾಣ ರಾಜನು ತನ್ನ ಮಂತ್ರಿಗಳೊಡಗೂಡಿ ತನ್ನ ರಾಜಧಾನಿಯ ಗಡಿ ಪ್ರದೇಶದ ಬಳಿ ತೆರಳುತ್ತಾನೆ.ಅಲ್ಲ್ಲಿಗೆ ತಲುಪಿದ ಅಗಸ್ತ್ಯರನ್ನು ಬ್ರಹ್ಮರ್ಷಿಗಳಿಗೆ ಸಲ್ಲಬೇಕಾದ ಸಕಲ ಮರ್ಯಾದೆಗಳಿಂದ ಬರಮಾಡಿಕೊಳ್ಳುತ್ತಾನೆ. ಅವರನ್ನು ಸಕಲೋಪಚಾರಗಳೊಂದಿಗೆ ತನ್ನ ರಾಜಧಾನಿಗೆ ಕರೆತರುತ್ತಾನೆ. ಮಹರ್ಷಿ ಗಳನ್ನು ಅರಮನೆಯಲ್ಲಿ ಗೌರವದಿಂದ ಮತ್ತು ಆದರದಿಂದ ಸ್ವಾಗತಿಸುತ್ತಾನೆ.