ಒಡೆಯನಪುರ, ಡಿ. 28: ಕೊಡಗು ಕಸಾಪ ವತಿಯಿಂದ ಜ. 31 ಮತ್ತು ಫೆ. 1 ರಂದು ನಿಡ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮೇಳನದ ಕುರಿತು ನಿಡ್ತ ಪ್ರಾ.ಕೃ.ಪ.ಸ. ಸಂಘದ ಸಭಾಂಗಣದಲ್ಲಿ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಸಾಹಿತ್ಯ ಸಮ್ಮೇಳನದಲ್ಲಿ ಅಂದಾಜು 1 ಸಾವಿರಕ್ಕಿಂತ ಹೆಚ್ಚಿನ ಜನರು ಸೇರಬಹುದೆಂದು ನಿರೀಕ್ಷಿಸ ಲಾಯಿತು. 2 ದಿನದವರೆಗೆ ನಡೆಯುವ ಸಮ್ಮೇಳದ ಅಂಗವಾಗಿ ಸ.ಪ್ರಾ. ಶಾಲೆಯ ಮುಖ್ಯ ಪ್ರವೇಶ ಸೇರಿದಂತೆ ನಿಡ್ತ ಗ್ರಾ.ಪಂ.ಯ ವಿವಿಧ ಕಡೆಗಳಲ್ಲಿ 8 ದ್ವಾರಗಳನ್ನು ನಿರ್ಮಿಸುವಂತೆ ತೀರ್ಮಾನಿಸಲಾಯಿತು. ಸಮ್ಮೇಳನದ ಮೊದಲ ದಿನ ನಿಡ್ತ ಸಮೀಪದ ಮುಳ್ಳೂರು ಜಂಕ್ಸನ್‍ನಿಂದ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ನಾನಾ ಕಲಾತಂಡಗಳೊಂದಿಗೆ ಸಮ್ಮೇಳದ ಸಭಾಧ್ಯಕ್ಷರ ಮೆರವಣಿಗೆ ನಡೆಸಲಾಗುತ್ತದೆ.

ಈ ಸಂದರ್ಭ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸಾಹಿತಿಗಳ ಭಾವಚಿತ್ರವನ್ನು ನೀಡುವ ವ್ಯವಸ್ಥೆ ಮಾಡುವಂತೆ ತೀರ್ಮಾನಿಸಲಾಯಿತು.

2 ದಿನದ ಸಮ್ಮೇಳನದಲ್ಲಿ ಕವಿಗೋಷ್ಠಿ, ಗೀತಗಾಯನ, ಸಾಹಿತ್ಯಗೋಷ್ಠಿ, ವಿಚಾರಗೋಷ್ಠಿ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ, ಸಮ್ಮೇಳದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಳ್ಳುವುದರ ಮೂಲಕ ಗ್ರಾಮೀಣ ಸೊಗಡನ್ನು ಹೆಚ್ಚಿಸುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಶನಿವಾರಸಂತೆ ಕಸಾಪ ಅಧ್ಯಕ್ಷ ಬಿ.ಬಿ. ನಾಗರಾಜ್, ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯೆ ಲೀಲಾವತಿ, ಸ್ಥಳೀಯ ಪ್ರಮುಖರಾದ ಡಿ.ಬಿ. ಧರ್ಮಪ್ಪ ಹೆಚ್.ಪಿ. ಶೇಷಾದ್ರಿ, ಎನ್.ಬಿ. ನಾಗಪ್ಪ, ಹೆಚ್.ಪಿ. ಮೋಹನ್, ಎನ್. ಸುಬ್ಬಪ್ಪ, ಸಮ್ಮೇಳನ ಪ್ರಚಾರ ಸಮಿತಿ ಅಧ್ಯಕ್ಷೆ ಹೆಚ್.ಆರ್. ಹರೀಶ್, ಕಸಾಪ ಕೋಶಾಧಿಕಾರಿ ಡಿ.ಬಿ. ಸೋಮಪ್ಪ, ಕಸಾಪ ಜಿಲ್ಲಾ ಸಮಿತಿ ಸದಸ್ಯೆ ಹೆಚ್.ಬಿ. ಜಯಮ್ಮ, ಗ್ರಾ.ಪಂ. ಸದಸ್ಯೆ ವಿಜಯ, ಪಿಡಿಒ ಪ್ರತಿಮಾ, ಪ್ರಮುಖರಾದ ಕರುಣೇಶ್, ಆನಂದ್ ಮುಂತಾದವರಿದ್ದರು.