ಹಬ್ಬವಾದುದರಿಂದ ಗೆಳೆಯರ ಜೊತೆ ಸೇರಿ, ಆಚರಣೆ ಮುಗಿಸಿ ಮನೆಗೆ ಹೊರಟಾಗ ಸಮಯ 8.30 ಆಗಿತ್ತು, ಅವಳು ತಾಯಿ ಮನೆಗೆ ಹೋಗಿರುವುದರಿಂದ ಸ್ವಲ್ಪ ಧೈರ್ಯವಾಗಿ ಸ್ವಲ್ಪ ಹೆಚ್ಚಾಗೇ ಏರಿಸಿ ಕೊಂಡಿದ್ದೆ. ಎಫ್‍ಎಂ.ನಲ್ಲಿ ಬರುತ್ತಿದ್ದ ಹಳೆಯ ಚಿತ್ರ ಗೀತೆಗಳು ಅಮಲಿಗೆ ಹೊಸ ತಾಳವನ್ನು ಕೊಡುತ್ತಿತ್ತು. “ಗಾಡಿ ಸೈಡಿಗೆ ಹಾಕು” ವಾಹನದ ಹವಾನಿಯಂತ್ರಣ ಜೊತೆಗೆ ಅಮಲಿನಲ್ಲಿದ್ದ ನನಗೆ ಪೇದೆಯ ಮಾತು ಕೇಳದಿದ್ದರೂ, ಅವನ ದೇಹ ಭಾಷೆ ಎಲ್ಲವನ್ನು ವ್ಯಕ್ತ ಪಡಿಸಿತ್ತು. ಜೊತೆಗೆ ತಲೆಯಲ್ಲಿದ್ದ ಅಮಲು ಇಳಿದು, ವಾಹನದ ಹವಾನಿಯಂತ್ರಣ ಸ್ಥಗಿತ ಗೊಂಡಿದೆಯೋ ಎಂಬ ಸಂಶಯದಿಂದ ಮತ್ತೊಮ್ಮೆ ಅದರ ಚಾಲನೆಯನ್ನು ದೃಢಪಡಿಸಿಕೊಂಡೆ. ಲಾಠಿ ನನ್ನ ವಾಹನದ ಗಾಜನ್ನು ಜೋರಾಗಿ ತಟ್ಟಿದಾಗ ಇನ್ನೇನು ಕೆಳಗಿಳಿಸದಿದ್ದರೆ ಹೊಡೆದು ಹಾಕುವ ಹಂತಕ್ಕೆ ಬಂದಾಗ ಗಾಜನ್ನು ಮೆಲ್ಲನೆ ಕೆಳಗಿಳಿಸಿದೆ. “ಸಾಹೇಬರು ಕರೆಯುತ್ತಿದ್ದಾರೆ” ಇನ್ನು ವಿಧಿಯಿಲ್ಲ. ವಾಹನದ ದಾಖಲೆಗಳನ್ನು ನಡುಗುವ ಕೈಗಳಲ್ಲೇ ಠಾಣಾಧಿಕಾರಿಯ ಕರಗಳಲ್ಲಿ ಇಟ್ಟೆ. ನನ್ನ ಮುಖ ನೋಡದೆ ಪರಿಶೀಲಿಸಿ, ಹಿಂತಿರುಗಿಸಿದಾಗ ಬದುಕಿದೆಯ ಬಡಜೀವ ಎಂದು ಹೆಜ್ಜೆ ಹಾಕಬೇಕು ಅನ್ನುವಷ್ಟರಲ್ಲಿ ‘‘ಎಲ್ಲಿಗೆ ಹೊರಟೆ ? ಉಸಿರು ಬಿಡು’’ ಎಂದರು. ಆ ಶಬ್ದ ನನ್ನ ಉಸಿರನ್ನು ನಿಲ್ಲಿಸಿದಂತಾಯಿತು. ಇನ್ನು ನುಣುಚಿ ಕೊಳ್ಳಲು ಸಾಧ್ಯವಿಲ್ಲ ಖಾತರಿಯಾಯಿತು.. “ಹಬ್ಬ ಅಲ್ವಾ ಸಾರ್, ಸ್ವಲ್ಪ...’ ಊದಿಸುವ ಮೊದಲೇ ನಾನೇ ಹೇಳಿ ತಪ್ಪೊಪ್ಪಿಕೊಂಡೆ, ಏಕೆಂದರೆ ಅದರಲ್ಲಿ ಸ್ವಲ್ಪ ಸ್ವಾರ್ಥ ಚಿಂತನೆಯು ಇತ್ತು.
ಸತ್ಯವನ್ನು ಹೇಳಿದಕ್ಕೆ ಸಿಕ್ಕಬಹುದು ದಯೇ. ಕುಡಿದಿರುವ ಅಮಲಿನ ಅಳತೆ ತಿಳಿಯದಿರಲಿ ಎಂದು. “ಹರಿಶ್ಚಂದ್ರ ನೋಡಪ್ಪ ಎಣ್ಣೆ ಹಾಕಿ ಗಾಡಿ ಓಡಿಸುತ್ತಿದ್ದಾನೆ ಕೇಸಿನ ವಿಚಾರ ಹೇಳಿ ರಸೀದಿ ಹರಿದು ಕೊಡು’’ ಪೇದೆಯ ಕರೆದು ನಾನು ಕುಡಿದಿರುವೆ ಎಂದು ಒಪ್ಪಿದ ತಪ್ಪಿಗೆ ಬೆಲೆಯೇ ಕೊಡದೆ, ನನ್ನ ದಯಾ ಅರ್ಜಿಯನ್ನು ಒಂದೇ ಮಾತಿನಲ್ಲಿ ಹರಿದು ಹಾಕಿ ನನ್ನ ಹಿಂದಿನವನ ದಾಖಲೆಗಳನ್ನು ಪರಿಶೀಲಿಸತೊಡಗಿದ. ಕುಡಿದಿದ್ದೆಲ್ಲ ಒಂದೇ ಸಮನೆ ಇಳಿದು ಹೋಯಿತು, ತಲೆ ತಗ್ಗಿಸಿ ಅಪರಾಧಿ ಸ್ಥಾನದಲ್ಲಿದ್ದ ನನಗೆ ಪೇದೆಯ ಬುದ್ಧಿ ಮಾತುಗಳ ಸುರಿಮಳೆ, “ಅಲ್ಲ ಸರ್ ನೀವು ವಿದ್ಯಾವಂತರು, ಸಮಾಜದಲ್ಲಿ ಹೆಸರಿರುವವರು, ಅಷ್ಟು ಗೊತ್ತಾಗುದಿಲ್ಲವೇ ? ನಮ್ಮ ಠಾಣಾಧಿಕಾರಿ ತುಂಬಾ ಸ್ಟ್ರಿಕ್ಟು’’ ಏನು ಮಾಡುವುದು ಈಗ ಹೇಳಿ ಬೇಗ ಅವನ ಮಾತಿನಲ್ಲಿ ದಂಡ ಕಟ್ಟುವುದಲ್ಲದೆ ಪರ್ಯಾಯ ವ್ಯವಸ್ಥೆಯ ಅರ್ಥದ ಧ್ವನಿ ಇದ್ದ ಹಾಗೆ ಇತ್ತು. ಆದರೂ ಸ್ವಲ್ಪ ಧೈರ್ಯದಿಂದ ಕೇಳಿದೆ; ದಂಡ ಎಷ್ಟು ?’’
‘‘10 ಸಾವಿರ” ನನ್ನ ಪ್ರ್ರಶ್ನೆಗೆ ತನ್ನ ಸಿದ್ದ ಉತ್ತರವನ್ನು ಕೊಟ್ಟು “ಬೇಗ ತೆಗಿ’’ ಅಂದ. ಆ ಸ್ವರದಲ್ಲಿ ನನ್ನ “ ದಂಡ ಎಷ್ಟು’’ ಎಂಬ ಪ್ರಶ್ನೆ ಅವನನ್ನು ಕೆರಳಿಸಿದ ಹಾಗೆ ಇತ್ತು. 10 ಸಾವಿರ ಅಬ್ಬಾ ತಲೆ ಗಿರ್ರ್ ಅಂತ ಸುತ್ತುವ ಹಾಗೆ ಆಗುತ್ತಿದೆ ಖಂಡಿತವಾಗಿಯೂ ಅಮಲಿನ ಸುತ್ತು ಅಲ್ಲ, ಅದೆಲ್ಲ ಯಾವಾಗಲೋ ಇಳಿದು ಹೋಗಿತ್ತು, ರಕ್ತದ ಒತ್ತಡ ಸಂಪೂರ್ಣವಾಗಿ ಕಡಿಮೆಯಾಗುವಂಥಹ ಸ್ಥಿತಿ, ಸ್ವಲ್ಪ ಸುಧಾರಿಸಿ “ಸರ್ ಏನಾದರು ಮಾಡಬಹುದೇ” ದೀನಸ್ವರದಲ್ಲಿ ಮೆಲ್ಲೆನೆ ಕೇಳಿದೆ. ಅಷ್ಟೇ, ಆತನ ಕಿವಿಗಳು ನಿಮಿರಿದವು, ಕಣ್ಣಿನ ಹುಬ್ಬು ಅರ್ಧ ಚಂದ್ರಾಕೃತಿಯ ರೂಪ ಪಡೆಯಿತು. ತಡಮಾಡಲಿಲ್ಲ, ಮುಖ ನೋಡಲಿಲ್ಲ, ತಕ್ಷಣವೇ ಉತ್ತರ ಬಂತು. 5 ಸಾವಿರ ಕೊಡು ಹೇಳಿ ನೋಡುವೆ, ಮತ್ತೆ ಬರ ಸಿಡಿಲು, 5000 ಹೋಗಿ 500 ಇದೆಯಾ ಎಂದು ತಡಕಾಡಿದೆ. ಎಟಿಎಂನಿಂದ ತೆಗೆದುಕೊಟ್ಟರೆ ಸಂದೇಶ ಅವಳಿಗೆ ಹೋಗುತ್ತದೆ, ಮತ್ತೆ ಮುಗಿಯಿತು. ಮೆಲ್ಲನೆ ಹೇಳಿದೆ ‘‘ಸರ್ ಕೈಯಲ್ಲಿ 500 ರೂ. ಇದೆ ಸರ್ ಅಷ್ಟೇ. ಅನ್ನುವಷ್ಟರಲ್ಲಿ ನಾನೇನೋ ಅವನ ಕುತ್ತಿಗೆ ಹಿಡಿದವನ ಥರ ಎಗರಿ ಬಂದು ನನ್ನ ವಾಹನದ ಕೀಯನ್ನು ಕಿತ್ತು ಕೊಂಡು ಠಾಣಾಧಿಕಾರಿ ಹತ್ತಿರ ಹೋಗಿಯೇ ಬಿಟ್ಟ.
ಛೇ.. ಕೈಯಲ್ಲಿ ಒಂದೋ ಎರಡೂ ಸಾವಿರ ಇದ್ದಿದ್ದರೆ. ವ್ಯವಹಾರ ಕುದುರಿಸಬಹುದಿತ್ತೋ ಕೆಟ್ಟ ಘಳಿಗೆ, ಯಾರ ಮುಖ ನೋಡಿ ಎದ್ದೆನೋ ಎದ್ದ ತಕ್ಷಣ ನನ್ನನ್ನೇ ಕನ್ನಡಿಯಲ್ಲಿ ನೋಡಿದ್ದು ನೆನಪಾದಾಗ ಆ ವಿಷಯ ಅಲ್ಲಿಗೆ ಬಿಟ್ಟೆ. ಇದರ ಮದ್ಯದಲ್ಲಿ ಕೆಲಸದವಳು ಎರಡು ಸಲ ಕರೆ ಮಾಡಿದ್ದಳು. ತೆಗೆಯಲಿಲ್ಲ, ಪಾಪ ನನಗೆ ಅಡುಗೆ ಬಡಿಸಿ ಅವಳ ಮನೆಗೆ ಹೋಗಬೇಕು. ನಾನೂ, ಹೆಂಡತಿ ಕೆಲಸದಲ್ಲಿ ಇರುವುದರಿಂದ ದಿನಾ ಸಾಯಂಕಾಲ 6 ಘಂಟೆಯಿಂದ 8.30ರವರೆಗೆ ಬಂದು ಅಡುಗೆ ಮಾಡಿ ಮನೆಯ ಕೆಲಸ ಮುಗಿಸಿ ಹೋಗುತ್ತಾಳೆ. ಇಂದು ಹೆಂಡತಿ ಬೇರೆ ಮನೆಯಲ್ಲಿ ಇಲ್ಲ ಆದುದರಿಂದ ನಾನು ಹೋದ ಮೇಲೆ ಅವಳಿಗೆ ಹೋಗಲು ಸಾಧ್ಯ. ಅದು ಅವಳಿಗೆ ನನ್ನವಳ ಆಜ್ಞೆ. ಅದು ನನ್ನ ಬಗ್ಗೆ ಹೆಚ್ಚು ಕಾಳಜಿಯಿಂದಲ್ಲ ಊರು ಸುತ್ತದೆ ಬೇಗ ನಾನು ಮನೆಗೆ ಬರಲಿ ಅಂತ. ಏನು ಮಾಡುವುದು, ನಾನು ನನ್ನದೇ ವಾಹನದಲ್ಲಿ ಕುಳಿತಿದ್ದರೂ ನೀರಿನಿಂದ ಹೊರ ಬಂದ ಮೀನಿನಂತೆ ಆಗಿತ್ತು ನನ್ನ ಕಥೆ. ಯಾರನ್ನ ಕರೆದರೆ ಈ ಗಂಡಾಂತರದಿಂದ ಮುಕ್ತಿ ಹೊಂದಬಹುದು ಎಂದು ನೆನೆದಾಗ ಯಾವಾಗಲೂ ಹಲ್ಲು ಕಿಸಿದು ಕೈಗಳನ್ನು ಹಣೆಯವರೆಗೆ ಎತ್ತಿ ನಮಸ್ಕಾರ ಮಾಡುವ ನಮ್ಮ ಪ್ರಥಮ ಪ್ರಜೆಯ ಮುಖದ ನೆನಪಾಯಿತು ಮತ್ತೆ ತಡ ಮಾಡಲಿಲ್ಲ, ಮೊಬೈಲ್ ಕೈಗೆತ್ತಿ ಸ್ಥಳೀಯ ಪಂಚಾಯತ್ ಅಧ್ಯಕ್ಷನಿಗೆ ಕರೆ ಮಾಡಿದೆ. ಮುಜುಗರ ಆಗುತ್ತಿದೆ, ಇದುವರೆಗೂ ಕಂಡಾಗ ನಮಸ್ಕಾರ ಸರ್, ಅಂತ ಗೌರವ ಕೊಟ್ಟು ಮಾತಾಡಿಸುತ್ತಿರುವವರ ಹತ್ತಿರ ಹೇಗೆ ಹೇಳುವುದು ? ಆದರೆ ಹೇಳದೆ ವಿಧಿಯಿಲ್ಲ, ಅನಿವಾರ್ಯ ಸಂದರ್ಭಗಳಲ್ಲಿ ಘನತೆಯ ಮುಖವಾಡ ಬಿಚ್ಚಲೇ ಬೇಕಾಗುವುದು. ‘‘ಹಲೋ’’ ಅಧ್ಯಕ್ಷರು ಸ್ವೀಕರಿಸಿದ ಕರೆಗೆ ತನ್ನ ಧರ್ಮ ಸಂಕಟವನ್ನು ಒಂದೇ ಉಸಿರಲ್ಲಿ, ಕಡಿಮೆ ಶಬ್ದದಲ್ಲಿ ವಿವರಿಸಿದೆ. ದೊರಕಿದ ಉತ್ತರ ನೋಡಿ ಇನ್ನು 3 ವರ್ಷ ಕಾಯಬೇಕಲ್ಲ ಸೇಡಿಗೆ ಸೇಡು ತೀರಿಸ ಬೇಕಾದರೆ, ಛೆ.. ಕರೆ ಮಾಡಬಾರದಿತ್ತು ಅಂತ ಅನಿಸಿತ್ತು, ಚುನಾವಣೆಯ ಸಮಯದಲ್ಲಿ ಹಲ್ಲು ಕಿಸಿದು ಬಂದ ಒಂದೆರಡು ದೊಡ್ಡ-ದೊಡ್ಡ ವ್ಯಕ್ತಿಗಳಿಗೆ ಕರೆ ಮಾಡಿ ನೋಡಿದೆ ಒಬ್ಬರೂ ಕರೆ ಸ್ವೀಕಾರ ಮಾಡಲಿಲ್ಲ, ಇನ್ನೊಬ್ಬರು ಸ್ವೀಕಾರ ಮಾಡಿದ ಕರೆ ನನ್ನ ಅವಶ್ಯಕತೆ ಕೇಳುತ್ತಲೇ ನೆಟ್ವರ್ಕ್ ತೊಂದರೆಯಿಂದ ಏಕಮುಖವಾಯಿತು. ಅವರು ಹೇಳುವುದು ನನಗೆ ಕೇಳಿಸಿದರೂ ನಾನು ಹೇಳುವುದು ಅವರಿಗೆ ಕೇಳಿಸದೇ “ಹಲೋ ಹಲೋ’’ ಎಂದು ಕಡಿತ ಗೊಂಡಿತು. ಯೋಚನೆಯಲ್ಲಿ ಇಟ್ಟುಕೊಳ್ಳಬೇಕು. ಮುಂದಿನ ಚುನಾವಣೆಗೆ ಬರುತ್ತಾರಲ್ಲ ಎಂದು ಮನಸ್ಸು ಹೇಳಿತ್ತು. ಆದರೇ ಅದು ಆಗಿನ ಕಥೆ ತಾನೆ ಈಗ ಏನು ಮಾಡುವುದು, ಸಮಯ 9 ಆಗುತ್ತಲಿದೆ. ಬಹುತೇಕ ವಾಹನಗಳ ಚಾಲಕರು ವ್ಯವಹಾರ ಕುದುರಿಸಿ ಹೋಗುತ್ತಿದ್ದಾರೆ. ಮತೊಮ್ಮೆ ದಯಾಹೀನನಾಗಿ ಅವರನ್ನು ನೋಡಿದೆ. ಅತ್ತಿತ್ತ ನೋಡುವುದರ ಮಧ್ಯೆ ನನ್ನ ಕಂಡೂ ಕಾಣದ ಹಾಗೆ ನಟಿಸುತ್ತಿದ್ದವರನ್ನು ಮೆಲ್ಲೆ ಕೈಯಲ್ಲಿ ಸನ್ನೆ ಮಾಡಿ ಕರೆದೆ. ಪ್ರತ್ಯುತ್ತರವಾಗಿ ಬರುವೆ ಅಂತ ಕೈಯ್ಯಲ್ಲೇ ಸನ್ನೆ ಮಾಡಿದರು. ಅವರು ಬರುವಾಗ ಯಾವ ರೀತಿಯಲ್ಲಿ ಅಂಗಲಾಚಬೇಕು ಎಂಬ ತಯಾರಿಯಲ್ಲಿರುವಾಗ ಮತ್ತೆ ಕೆಲಸದವಳ ಕರೆ. ಛೇ ಕರೆ ಸ್ವೀಕಾರ ಮಾಡದಿದ್ದರೆ ಅವಳು ನನ್ನವಳಿಗೆ ಕರೆ ಮಾಡಿ ಬಿಡುತ್ತಾಳೆ. ಎಂಥ ಇಕ್ಕಟ್ಟಿನ ಪರಿಸ್ಥಿತಿ. ಅದು ಸರಿ ಯಾಕೆ ನನ್ನವಳ ಕರೆ ಇನ್ನು ಬರಲಿಲ್ಲ. ಓಹ್ 9 ಘಂಟೆಯವರೆಗೂ ಅವಳ ಧಾರವಾಹಿ ವ್ರತವಿದೆಯಲ್ಲ ಅಯ್ಯೋ ಅದು ಮುಗಿದರೆ ಕರೆ ಕಂಡಿತಾ, ಮನೆ ತಲುಪಿದ್ದೀರಾ ? ಲಕ್ಷ್ಮಿ ಹೋದಳಾ ? ಊಟ ಮಾಡಿದ್ರಾ ? ಏನು ಸಾರು ಮಾಡಿದ್ದಾಳೆ ? ಹಿಂಬದಿ ಬಾಗಿಲು ಹಾಕಿದೀರಾ ? ಗೇಟ್ಗೆ ಬೀಗ ಹಾಕಿದ್ರ ? ಮೀನಿಗೆ ಆಹಾರ ಕೊಟ್ಟರಾ ? ನೀರಿನ ಮೋಟಾರು ಆನ್ ಮಾಡಿದ್ದೀರಾ ? ಅಯ್ಯೋ... ಅಯ್ಯೋ... ನೂರೆಂಟು ಪ್ರಶ್ನೆಗಳು. ಇನ್ನೇನು ಕರೆ ಕಟ್ಟಾಗುವಷ್ಟರಲ್ಲಿ ಲಕ್ಷ್ಮಿಯ ಕರೆ ಸ್ವೀಕಾರ ಮಾಡಿದೆ. (ಮುಂದುವರಿಯುವದು)
?ಟೋಮಿ ಥೋಮಸ್,
ಸಿದ್ದಾಪುರ, ಕೊಡಗು.