ಮಡಿಕೇರಿ, ಡಿ. 28: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹೊರ ವಲಯದ ಕುಂದೂರುಕೇರಿ (ತಾಳತ್‍ಮನೆ)ಯಲ್ಲಿ ಸಹಸ್ರ ಮಾನಗಳ ಪುರಾತನ ದೇಗುಲ ವೊಂದು ಕಾಡು ಪಾಲಾಗಿದೆ; ಈ ದೇವಾಲಯದ ಜೀರ್ಣೋದ್ಧಾರಕ್ಕೆ ಅಲ್ಲಿನ ನಿವಾಸಿಗಳು ಸಂಕಲ್ಪ ಕೈಗೊಂಡಿದ್ದು; ಬರುವ ಫೆಬ್ರವರಿ ತಿಂಗಳ 7ನೇ ತಾರೀಕಿನಿಂದ 12ರವರೆಗೆ ಪ್ರತಿಷ್ಠಾಪನಾ ಕೈಂಕರ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ.ಅಷ್ಟಮಂಗಲ ಪ್ರಶ್ನೆಯಂತೆ ಪುರಾತನ ಕಾಲದ ಈ ಕಾಳೀ ಸ್ವರೂಪಿ ಶಕ್ತಿ ದೇವತೆಯ ವಿಶಾಲ ದೇಗುಲ ಕಾರಾಣಾಂತರದಿಂದ ನಿತ್ಯಪೂಜೆ ತಪ್ಪುವಂತಾಗಿ; ಗ್ರಾಮಸ್ಥರ ಕಡೆಗಣನೆಯಿಂದ ಕಾಡು ಪಾಲಾಗಿದೆ. ಸುಮಾರು ಐದು ಶತಮಾನಗಳಿಂದ ಸಂಪೂರ್ಣ ಕಾಡು ಪಾಲಾಗಿ ನಶಿಸಿ ಹೋಗಿದ್ದ ದೇವಾಲಯ ಸ್ಥಳ ಈಗಿನ ಮಂದಿಯ ಅರಿವಿಗೆ ಬಂದಿದೆ.ಆ ಮೇರೆಗೆ ಸ್ಥಳ ಪರಿಶೀಲಿಸ ಲಾಗಿ; ತೀರಾ ಕಾಡು ಪಾಲಾಗಿರುವ ಸ್ಥಳದಲ್ಲಿ ಲಿಂಗರೂಪದ ಶಕ್ತಿದೇವತೆಯ ವಿಗ್ರಹದೊಂದಿಗೆ ನಶಿಸಿಹೋಗಿರುವ ಕುರುಹು ಗೋಚರಿಸಿದೆ. ಈ ಬಗ್ಗೆ ತಾಳತ್‍ಮನೆ ನೇತಾಜಿ ಯುವಕ ಮಂಡಲವು ಗ್ರಾಮಸ್ಥರನ್ನು ಒಗ್ಗೂಡಿಸಿ; 12 ವರ್ಷಗಳ ಹಿಂದೆ ದೇವಾಲಯದ ಜೀರ್ಣೋದ್ಧಾರ ಸಂಬಂಧ ದೈವಜ್ಞ ರಿಂದ ಪ್ರಶ್ನೆ ಇರಿಸಿ ಮಾರ್ಗದರ್ಶನ ಪಡೆದುಕೊಂಡಿದೆ.
ಅಂತೆಯೇ ಒಂದೊಮ್ಮೆ ಈ ಸ್ಥಳದಲ್ಲಿ ವಿಶಾಲ ದೇವಾಲಯ ದೊಂದಿಗೆ; ಮಹಾಕಾಳಿ ಸ್ವರೂಪಳಾದ ಶ್ರೀ ದುರ್ಗಾ ಭಗವತಿಯು ತನ್ನ ಪರಿವಾರದೊಂದಿಗೆ; ಪೂಜೆಗೊಳ್ಳುತ್ತಿದ್ದ ಐತಿಹ್ಯ ಗೋಚರಿಸಿದೆ. ಈ ದಿಸೆಯಲ್ಲಿ ಸಂಬಂಧಿಸಿದ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ; ಐದು ಶತಮಾನಗಳಿಂದ ನಿರ್ಲಕ್ಷಿಸಲ್ಪಟ್ಟಿರುವ ದೇವಿಯನ್ನು ಮರಳಿ ಆರಾಧಿಸು ವಂತಾದರೆ ನಾಡಿಗೆ ಸುಭಿಕ್ಷೆ ಪ್ರಾಪ್ತಿಯಾಗಲಿದೆ ಎಂಬ ಅಂಶವೂ ಕಂಡು ಬಂದಿದೆ.
ಜೀರ್ಣೋದ್ಧಾರ ಸಮಿತಿ : ಅಷ್ಟಮಂಗಲ ಪ್ರಶ್ನೆಯ ಸಂದೇ&divlusmn; Àದಂತೆ ತಾಳತ್‍ಮನೆ ನಿವಾಸಿಗಳು; ಪ್ರಸಕ್ತ ಜಾಗ ಮಾಲೀಕರಾಗಿರುವ ಗೊಲ್ಲ ಸಮುದಾಯದ ಅರೆಯಂಡ ಕುಟುಂಬವನ್ನು ಮನವೊಲಿಸಿ; ಸಂಬಂಧಿಸಿದ ಸ್ಥಳದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಸಾಮೂಹಿಕ ನಿರ್ಧಾರ ಕೈಗೊಂಡಿದ್ದಾರೆ.
ರೂ. 65 ಲಕ್ಷದ ಯೋಜನೆ : ಆ ಮೇರೆಗೆ ತಾಳತ್‍ಮನೆ (ಹಿಂದಿನ ಕುಂದೂರುಕೇರಿ) ನಿವಾಸಿಗಳನ್ನು ಒಗ್ಗೂಡಿಸಿ; ಸುಮಾರು 180 ಕುಟುಂಬಗಳಿಂದ
(ಮೊದಲ ಪುಟದಿಂದ) ಕನಿಷ್ಟ ರೂ. 10 ಸಾವಿರದಂತೆ ಕ್ರೋಢೀಕರಿಸಿ; ದಾನಿಗಳ ನೆರವಿನಿಂದ ಪ್ರಸ್ತುತ ರೂ. 65 ಲಕ್ಷ ಯೋಜನೆಯ ದೇವಾಲಯ ಕೆಲಸ ಕೈಗೊಂಡಿದ್ದಾರೆ.
ಈಗಾಗಲೇ ಪುರಾತನ ಶೈಲಿಯ ಈ ದೇವಾಲಯವು ಹಿಂದಿನ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು; ಗರ್ಭಗೃಹ, ತೀರ್ಥ ಮಂಟಪ, ತೀರ್ಥಬಾವಿ, ಸುತ್ತು ಪೌಳಿ ಇತ್ಯಾದಿ ಮುಕ್ತಾಯ ಹಂತದಲ್ಲಿದೆ; ಅಲ್ಲದೆ ದೈವಜ್ಞರ ಸಲಹೆಯಂತೆ ಐತಿಹಾಸಿಕ ದೇವಾಲಯದ ಲಿಂಗಸ್ವರೂಪಿ ದೇವಿಯನ್ನು ಬಾಲಾಲಯ ನಿರ್ಮಿಸಿ ಆರಾಧಿಸಲಾಗುತ್ತಿದ್ದು; ಆ ಲಿಂಗ ಸಂಪೂರ್ಣ ಚೈತನ್ಯದೊಂದಿಗೆ ಯಾವದೇ ಲೋಪವಾಗದಿರುವದು ಖಾತರಿಯಾಗಿದೆ.
ಪ್ರತಿಷ್ಠಾಪನೆ : ಪ್ರಸ್ತುತ ಈ ದೇವಾಲಯ ಕಾರ್ಯ ಮುಕ್ತಾಯ ಹಂತದಲ್ಲಿದ್ದು; ಬರುವ ಫೆ. 7 ರಿಂದ ಮರು ಪ್ರತಿಷ್ಠಾಪನೆ ಕೈಂಕರ್ಯವನ್ನು ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ನೆರವೇರಿಸಲು ಯೋಜನೆ ರೂಪಿಸಲಾಗಿದೆ. ದೇವಿಯ ಆರಾಧನೆಯೊಂದಿಗೆ ಭವಿಷ್ಯದಲ್ಲಿ ಶ್ರೀ ಮಹಾಗಣಪತಿ, ಗುಳಿಗ, ಚಾಮುಂಡಿ, ನಾಗಸನ್ನಿಧಿಗಳು ಪೂಜೆಗೊಳ್ಳಲಿವೆ ಎಂದು ಸಮಿತಿ ಖಜಾಂಚಿ ಗಿರೀಶ್ ತಾಳತ್‍ಮನೆ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಚೆಟ್ಟೋಳಿರ ಅಪ್ಪಯ್ಯ, ಅರೆಯಂಡ ರಘು ಹಾಗೂ ರಮೇಶ್ ಮತ್ತು ಚೆರಿಯಮನೆ ರಾಜ್‍ಕುಮಾರ್ ಸಹಿತ ಗ್ರಾಮಸ್ಥರು ಬಹುತೇಕ ಕೆಲಸವನ್ನು ಶ್ರಮದಾನದಿಂದ ನಿರ್ವಹಿಸುತ್ತಿರುವದಾಗಿ ಅವರು ನೆನಪಿಸಿದ್ದಾರೆ. ಈ ಪುರಾತನ ದೇಗುಲ ಜೀರ್ಣೋದ್ಧಾರಕ್ಕೆ ಕೈಜೋಡಿಸುವವರು ಮಡಿಕೇರಿ ವಿಜಯ ಬ್ಯಾಂಕ್ ಖಾತೆ ಸಂಖ್ಯೆ 114701011000990 ಹಾಗೂ ಮೊಬೈಲ್ 9449933457 ರಲ್ಲಿ ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.