ಮಡಿಕೇರಿ, ಡಿ. 28: ಹದಿನೈದು ದಿನಗಳ ಹಿಂದೆ ಸೋದರ ಸಂಬಂಧಿಗಳಿಬ್ಬರ ನಡುವೆ ಹೊಡೆದಾಟ ಸಂಭವಿಸಿದ್ದು; ಕುಡಿದ ಅಮಲಿನಲ್ಲಿ ಎದುರಾದ ಪ್ರಕರಣದಲ್ಲಿ ಒಬ್ಬಾತ ಸಾವನ್ನಪ್ಪಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆ ಮೇರೆಗೆ ಹಲ್ಲೆ ನಡೆಸಿರುವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಬೆಳವಣಿಗೆ ಭಾಗಮಂಡಲ ಠಾಣಾ ವ್ಯಾಪ್ತಿಯಲ್ಲಿ ಘಟಿಸಿದೆ.ಚೇರಂಬಾಣೆ ಸಮೀಪದ ಕೊಟ್ಟೂರು ಗ್ರಾಮದ ನಿವಾಸಿ ಚೀಯಬೆರ ದಿ. ಮೊಣ್ಣಪ್ಪ ಎಂಬವರ ಪುತ್ರ ಸಿ.ಎಂ. ಪವನ್ ಕಾರ್ಯಪ್ಪ (36) ಕೊಲೆಗೀಡಾಗಿರುವ ದುರ್ದೈವಿ ಎಂದು ಗೊತ್ತಾಗಿದೆ. ಹುತ್ತರಿಯ ಸಂದರ್ಭ ತಾ. 13 ರಂದು ಕೊಟ್ಟೂರುವಿನಲ್ಲಿ ಹಬ್ಬಕ್ಕೆ ತೆರಳಿದ ಸಮಯ; ಕೋಲು ಮಂದ್‍ನಲ್ಲಿ ಕುಡಿದ ಅಮಲಿನಲ್ಲಿ ಚೀಯಬೆರೆ ಸೋಮಯ್ಯ ಎಂಬವರ ಪುತ್ರ ಕಿಂದನ್ ಕಾರ್ಯಪ್ಪ (38) ಹಾಗೂ ಪವನ್ ಕಾರ್ಯಪ್ಪ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದ್ದಾಗಿ ತಿಳಿದು ಬಂದಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವದರೊಂದಿಗೆ ಕಿಂದನ್ ಎದುರಾಳಿಯ ಮರ್ಮಾಂಗಕ್ಕೆ ಹೊಡೆದಿದ್ದಾಗಿ ಪ್ರತ್ಯಕ್ಷದರ್ಶಿಗಳಿಂದ ಬಹಿರಂಗಗೊಂಡಿದೆ.

ಆನಂತರದಲ್ಲಿ ತೀರಾ ಬಳಲಿದ್ದ ಪವನ್ ಕಾರ್ಯಪ್ಪ ವಾಂತಿ ಮಾಡಿಕೊಂಡಿದ್ದು; ಮನೆಗೆ ತೆರಳಿದ ವೇಳೆ ಹಲ್ಲೆಯ ಪರಿಣಾಮ ಸಾವನ್ನಪ್ಪಿದನೆಂದು; ಕುಡಿತದ ಚಟಕ್ಕೆ ಒಳಗಾಗಿರುವ ಆತ ಅಸಹಜ ರೀತಿ ಮೃತನಾಗಿರುವನೆಂಬ ರೀತಿ ಶವ ಸಂಸ್ಕಾರ ಕೂಡ ನಡೆಸಿರುವದಾಗಿ ಇದೀಗ ಬೆಳಕಿಗೆ ಬಂದಿದೆ.

ಇದೀಗ ಗ್ರಾಮಸ್ಥರ ನಡುವೆ ಗುಸು ಗುಸು ಮಾತು ಹೊರ ಬೀಳುವದರೊಂದಿಗೆ; ಮೃತನ ತಾಯಿ ಗಂಗಮ್ಮ ಮೊಣ್ಣಪ್ಪ ಅವರಿಗೆ ಹಲ್ಲೆ ಪ್ರಕರಣದ ವಿಷಯ ತಿಳಿದಿದೆ. ಆ ಮೇರೆಗೆ ಆಕೆ ಭಾಗಮಂಡಲ ಪೊಲೀಸರಿಗೆ ದೂರು ಸಲ್ಲಿಸಿದ್ದು; ಗಂಗಮ್ಮ ನೀಡಿರುವ ಪುಕಾರು ಮೇರೆಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು; ಕಿಂದನ್ ಕಾರ್ಯಪ್ಪನನ್ನು ವಿಚಾರಣೆಗೆ ಒಳಪಡಿಸಿರುವದಾಗಿ ಮಾಹಿತಿ ಲಭಿಸಿದೆ. ಇದರೊಂದಿಗೆ ಆರೋಪಿ ವಿರುದ್ಧ ಪೊಲೀಸ್ ಕಾಯ್ದೆ 302ರ ಅಡಿಯಲ್ಲಿ ಕೊಲೆ ಮೊಕದ್ದಮೆಯೊಂದಿಗೆ ಇಂದು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.