ಕಣಿವೆ, ಡಿ. 26: ಕೆಲವು ರೈತರಿಗೆ ಹಲವು ಬೆಳೆಗಳ ಪೈಕಿ ಕೆಲವು ಕೈ ಹಿಡಿಯುತ್ತವೆ. ಇನ್ನು ಕೆಲವೆಡೆಗಳಲ್ಲಿ ಒಬ್ಬ ರೈತ ಬೆಳೆದ ಬೆಳೆಯನ್ನೇ ಹಲವು ರೈತರು ಬೆಳೆಯಲು ಮುಂದಾಗು ತ್ತಾರೆ. ಆದರೆ ನಂಜರಾಯ ಪಟ್ಟಣ ನಿವಾಸಿ ಪ್ರೇಮಾನಂದ ನೇಂದ್ರ ಬಾಳೆಯನ್ನು ಜಿಲ್ಲೆಗೆ ಪರಿಚಯಿಸಿದ ರೈತರ ಪೈಕಿ ಒಬ್ಬರು.

ಕಳೆದ ಇಪ್ಪತ್ತು ವರ್ಷಗಳಿಂದ ಏಲಕ್ಕಿ ಬಾಳೆ, ಪಚ್ಚೆ ಬಾಳೆ, ಹೂಬಾಳೆ, ಮರಬಾಳೆ, ಸಕ್ಕರೆ ಬಾಳೆ, ಕೆಂಪು ಬಾಳೆ, ಶ್ರೀಮಂತಿ ಬಾಳೆ, ಬೂದು ಬಾಳೆ ಸೇರಿದಂತೆ ಬೇರೆ ಬೇರೆ ಬಾಳೆಯ ತಳಿಗಳನ್ನು ಬೆಳೆಯುತ್ತಿದ್ದ ಇವರು ಈ ಕೃಷಿಯಲ್ಲಿ ಸಿಹಿ - ಕಹಿ ಎರಡನ್ನು ಅನುಭವಿಸಿದ್ದಾರೆ. ಹೆಚ್ಚಾಗಿ ನೇಂದ್ರ ಬಾಳೆಗೆ ಒತ್ತು ನೀಡಿರುವ ಈ ರೈತ ನಂಜರಾಯಪಟ್ಟದಲ್ಲಿ ಬರೋಬ್ಬರಿ ಐದು ಎಕರೆ ಭೂಮಿಯಲ್ಲಿ ಈ ಬಾಳೆ ಬೆಳೆದಿದ್ದಾರೆ. ಎಕರೆಯೊಂದಕ್ಕೆ ಸುತ್ತಳತೆ ಆರು ಅಡಿ ಅಂತರದಲ್ಲಿ 1200 ಬಾಳೆ ಗಿಡಗಳನ್ನು ನೆಟ್ಟು ಬೆಳೆಸಬಹುದು. ಏಳು ಅಡಿಗೆ ನೆಟ್ಟರೆ 889 ಗಿಡಗಳನ್ನು ನೆಡಬಹುದು. ಗಿಡಗಳನ್ನು ನೆಟ್ಟ ಏಳನೇ ತಿಂಗಳಲ್ಲಿ ಗೊನೆ ಆರಂಭವಾಗುತ್ತದೆ. ಹಾಗೆ ಬಂದ ಗೊನೆಯ ಕಾಯಿ ಬಲಿತು ಹಣ್ಣುಗಳಾಗಲು ಮೂರುವರೆ ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ಹಾಗೆ ಬಂದ ಗೊನೆಯು ಕನಿಷ್ಟ ಆರು ಕೆ.ಜಿ.ಯಿಂದ ಗರಿಷ್ಠ 20 ಕೆ.ಜಿ. ತನಕವೂ ಇರುತ್ತದೆ. ಈ ಕಟಾವು ಪ್ರಕ್ರಿಯೆ ಎರಡು ತಿಂಗಳ ಅಂತರದಲ್ಲಿ ಮುಗಿಯುತ್ತದೆ. ಮತ್ತೆ ಬೇಕಾದರೆ ಅದೇ ಬಾಳೆಗಿಡದ ಕಾಂಡವೊಂದನ್ನು ಬಿಟ್ಟು ಬೇಕಾದರೂ ಬೆಳೆಸಬಹುದು. ಇಲ್ಲವೇ ಹೊಸದಾಗಿ ಗಿಡವನ್ನು ಬೆಳೆಸಬಹುದು ಎನ್ನುತ್ತಾರೆ ಪ್ರೇಮಾನಂದ. ನೇಂದ್ರ ಬಾಳೆಯಲ್ಲಿ ಸ್ವರ್ಣ ಮುಖಿ, ಕಾಡುನೇಂದ್ರ ಹಾಗೂ ಕ್ವಿಂಟಾಲ್ ನೇಂದ್ರ ಎಂಬ ತಳಿಗಳನ್ನು ಇವರು ಬೆಳೆಸಿದ್ದು, ಫಸಲನ್ನು ಹೆಚ್ಚಾಗಿ ಕೇರಳಕ್ಕೆ ರಫ್ತು ಮಾಡುತ್ತಾರೆ. ರೀಟೇಲ್ ದರದಲ್ಲಿ ಕೆ.ಜಿ.ಯೊಂದಕ್ಕೆ 50 ರೂಪಾಯಿಗೆ ಮಾರಾಟ ಮಾಡಬಹುದು. ಇನ್ನು ಹೋಲ್‍ಸೇಲ್ ದರವಾದರೆ ಕೆ.ಜಿ.ಗೆ ಕೇವಲ 26 ರೂಪಾಯಿಗಳು ಮಾತ್ರ ಸಿಗುತ್ತದೆ. ಎಕರೆಗೆ ವಾರ್ಷಿಕ ಸರಾಸರಿ 1-50 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳವರೆಗೂ ಖರ್ಚು ತಗಲುತ್ತದೆ. ಈ ಬೆಳೆಗೆ ನೀರಿನ ಲಭ್ಯತೆ ಸಾಮಾನ್ಯವಾಗಿದ್ದರೆ ಸಾಕು. ಅಂದರೆ ಒಂದು ಗಿಡಕ್ಕೆ 15 ರಿಂದ 20 ಲೀ. ನೀರು ಸಾಕು. ಹಾಗೆಯೇ ಕೂಲಿ ಕಾರ್ಮಿಕರು ಹೆಚ್ಚೇನು ಬೇಡ. ರಾಸಾಯನಿಕಗಳ ಬಳಕೆಯಂತೂ ಇಲ್ಲವೇ ಇಲ್ಲ. ಗಿಡಗಳು ಚೆನ್ನಾಗಿ ಬೆಳೆದು ಫಸಲು ಚೆನ್ನಾಗಿ ಹಿಡಿದರೆ ಖರ್ಚಿನ ಎರಡು ಪಟ್ಟು ಲಾಭ ನಿರೀಕ್ಷಿಸಬಹುದು ಎನ್ನುವ ಪ್ರೇಮಾನಂದ, ಮಳೆ ಹಾಗೂ ಗಾಳಿ ಅಬ್ಬರಕ್ಕೆ ಕೆಲವೊಮ್ಮೆ ಇಡೀ ಫಸಲು ನೆಲಕಚ್ಚಿದ್ದು ಉಂಟು ಎನ್ನುತ್ತಾರೆ. ಈ ಬೆಳೆಗೆ ಇಲಾಖೆ ಸಹಾಯಧನ ನೀಡಬೇಕು. ಏಕೆಂದರೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಬಾಳೆ ಬೆಳೆಗಾರರಿಗೆ ಪ್ರೋತ್ಸಾಹ ಧನ ಕೊಡುತ್ತಿರುವ ಬಗ್ಗೆ ಮಾಹಿತಿ ಇರುವ ಕಾರಣ ಕೊಡಗು ಜಿಲ್ಲೆಯಲ್ಲಿಯೂ ಬಾಳೆ ಕೃಷಿಕರಿಗೆ ಪ್ರೋತ್ಸಾಹ ಧನ ನೀಡಬೇಕೆಂದು ಆಗ್ರಹಿಸುತ್ತಾರೆ.

ಕೇರಳದಲ್ಲಿ ಈ ನೇಂದ್ರ ಬಾಳೆ, ಮರಗೆಣಸು, ಸುವರ್ಣಗೆಡ್ಡೆ, ಕೆಸ ಮೊದಲಾದ ಕೃಷಿ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಿ ಆರೋಗ್ಯಕ್ಕೆ ಒತ್ತು ನೀಡುತ್ತಿದ್ದಾರೆ. ಹೂಬಾಳೆಯಲ್ಲಿ 60 ಪೌಷ್ಟಿಕಾಂಶಗಳ ಕ್ಯಾಲರಿ ಇದ್ದರೆ, ಪಚ್ಚೆಬಾಳೆಯಲ್ಲಿ ಕೇವಲ 40 ಕ್ಯಾಲರಿ ಇದೆ. ಆದರೆ ನೇಂದ್ರ ಬಾಳೆಯಲ್ಲಿ 200 ಕ್ಯಾಲರಿ ಇದೆ. ಆದ್ದರಿಂದ ಕೊಡಗಿನಲ್ಲಿಯೂ ನೇಂದ್ರ ಬಾಳೆಯನ್ನು ಜನ ಹೆಚ್ಚು ಸವಿಯಬೇಕು ಎನ್ನುತ್ತಾರೆ. ಬೆಂಗಳೂರು, ಕಾರ್ಕಳ ಮೊದಲಾದೆಡೆಗಳಿಂದ ಅಂಗಾಂಶ ಕಸಿ ಮಾಡಿದ ಬಾಳೆ ಕಂದುಗಳ ಗಿಡಗಳನ್ನು ತಂದು ಬೆಳೆಯನ್ನು ಬೆಳೆವ ಇವರು, ತಮ್ಮ ಸುತ್ತಲಿನ ಆಸಕ್ತ ಕೃಷಿಕರಿಗೂ ಬಿತ್ತನೆ ಕಂದುಗಳನ್ನು ಕೊಟ್ಟು ಬೆಳೆಸಲು ಸಹಕಾರಿಯಾಗುತ್ತಿದ್ದಾರೆ. ನೇಂದ್ರ ಬಾಳೆಯನ್ನು ಬೆಳೆಯಲು ಆಸಕ್ತಿ ತೋರುವವರು ಹೆಚ್ಚಿನ ಮಾಹಿತಿಗೆ 94492-55134 ಸಂಪರ್ಕಿಸಬಹುದು.

- ಕೆ.ಎಸ್. ಮೂರ್ತಿ