ಮಡಿಕೇರಿ, ಡಿ. 26: ಕಳೆದೆರಡು ದಶಕಗಳಲ್ಲಿ ಸ್ಯಾಂಡಲ್ವುಡ್ ಅಂಗಳದಲ್ಲಿ ಕೊಡಗಿನ ಹಲವು ತಾರೆಯರು ಮಿಂಚಿದ್ದಾರೆ. ಅವರಲ್ಲಿ ನೆರವಂಡ ಪ್ರೇಮ, ನಿಧಿ ಸುಬ್ಬಯ್ಯ, ಹರ್ಷಿಕ ಪೂಣಚ್ಚ, ಡೈಸಿ ಬೋಪಣ್ಣ, ಭುವನ್ ಪೊನ್ನಣ್ಣ ಸೇರಿದಂತೆ ಹತ್ತು ಹಲವು ತಾರೆಯರು ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇದೀಗ ಇವರ ಸಾಲಿಗೆ ಮಡಿಕೇರಿ ಸಮೀಪದ ಇಬ್ಬನಿವಳವಾಡಿ ಗ್ರಾಮದ ಮಾಲೇರ ಪ್ರಮೋದ್ ಬೋಪಣ್ಣ ಹೊಸ ಸೇರ್ಪಡೆಯಾಗಿದ್ದಾರೆ.
ಶುಕ್ರ ಫಿಲಂಸ್ ಬ್ಯಾನರ್ನಡಿ ನಿರ್ಮಾಣವಾಗಿರುವ ‘ಅಂದು ಕೊಂಡಂತೆ’ ಸಿನಿಮಾಕ್ಕೆ ನಿರ್ದೇಶಕ ಶ್ರೇಯಸ್ ಆಕ್ಷನ್ ಕಟ್ ಹೇಳಿದ್ದಾರೆ. ಟಗರು ಸಿನಿಮಾದಲ್ಲಿ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅನಂತ್ ಕಾಮತ್ ಈ ಸಿನಿಮಾದಲ್ಲಿ ಮುಖ್ಯ ಸಂಗೀತ ನಿರ್ದೇಶಕ ರಾಗಿ ಕೆಲಸ ಮಾಡಿದ್ದಾರೆ. ರಮೇಶ್ ಕೊಯಿರಾ ಮತ್ತು ನಿರ್ದೇಶಕ ಶ್ರೇಯಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ‘ಅಂದು ಕೊಂಡಂತೆ’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಉದಯಾ ವಾಹಿನಿಯಲ್ಲಿ ಸುದ್ದಿವಾಚಕರಾಗಿ ಕಾರ್ಯನಿರ್ವಹಿಸಿದ್ದ ಮಾಲೇರ ಪ್ರಮೋದ್ ಬೋಪಣ್ಣ ಈ ಸಿನಿಮಾದಲ್ಲಿ ನಾಯಕನಟರಾಗಿ ಅಭಿನಯಿಸಿದ್ದಾರೆ. ಇವರೊಂದಿಗೆ ರಿಶ್ವಿ ಭಟ್ ನಾಯಕ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಧ್ವನಿಸುರುಳಿ ಅತಿ ಶೀಘ್ರದಲ್ಲೇ ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿದ್ದು, ಈ ಸಿನಿಮಾದ ಫಸ್ಟ್‍ಲುಕ್ ಅನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ಪ್ರಮೋದ್ ಬೋಪಣ್ಣ ಈಗಾಗಲೇ ಮರೆಯದೇ ಕ್ಷಮಿಸು ಸಿನಿಮಾದಲ್ಲಿಯೂ ನಾಯಕನಟನಾಗಿ ಅಭಿನಯಿಸಿದ್ದು; ಜೋಕರ್ ಸಿನಿಮಾವೂ ಅತಿ ಶೀಘ್ರದಲ್ಲಿ ಸೆಟ್ಟೇರಲಿದೆ. ಇವರಿಗೆ ಆಲ್ ದಿ ಬೆಸ್ಟ್ ಹೇಳೋಣ ಅಲ್ವೆ?
-ಗೋಪಾಲ್ ಸೋಮಯ್ಯ