ಶ್ರೀಮಂಗಲ, ಡಿ. 24: ಶ್ರೀಮಂಗಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿ ಕೋತ್ಸವದಲ್ಲಿ ವಿದ್ಯಾರ್ಥಿಗಳ ಸಾಂಸ್ಕøತಿಕ ಪ್ರತಿಭೆ; ನೆರೆದಿದ್ದ ವಿದ್ಯಾಭಿಮಾನಿಗಳ ಮನಸೆಳೆಯಿತು. ಒಂದಕ್ಕಿಂತ ಒಂದು ಮೇಲು ಎಂಬಂತೆ ಕೊಡವ, ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳ ಹಾಡಿಗೆ ಶಾಸ್ತ್ರೀಯ, ಲಘು ಶಾಸ್ತ್ರೀಯ ಹಾಗೂ ಜಾನಪದ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳು ಹಾಗೂ ರಂಗೋಲಿಯಲ್ಲಿ ಚಿತ್ರಚಿತ್ತಾರ ಬಿಡಿಸುವ ಕಲೆ ವಿದ್ಯಾರ್ಥಿಗಳ ಕಲಾ ಕೌಶಲ್ಯವನ್ನು ಅನಾವರಣಗೊಳಿಸಿತು. ಅದರಲ್ಲೂ ಉಪನ್ಯಾಸಕಿ ಚೆಟ್ಟಂಗಡ ಸುನಿತಾಕಿರಣ್, ನೃತ್ಯ ತರಬೇತುದಾರ ರಮೇಶ್ ಹಾಗೂ ಶಫಿಯವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ನೃತ್ಯಗಳಂತೂ ನೆರೆದಿದ್ದವರನ್ನು ಕಣ್ಣು ಮಿಟುಕಿಸದೆ ನೋಡುವಂತೆ ಮಾಡಿತು. ಇದರೊಂದಿಗೆ 20ಕ್ಕೂ ಹೆಚ್ಚು ದತ್ತಿನಿಧಿಗಳ ಬಹುಮಾನವನ್ನು ಪಡೆದುಕೊಂಡ ವಿದ್ಯಾರ್ಥಿಗಳ ಪ್ರತಿಭೆ ಜನ ಮೆಚ್ಚುವಂತದ್ದು ಹಾಗೂ ದತ್ತಿನಿಧಿ ಸ್ಥಾಪಿಸಿದ ದಾನಿಗಳಿಗಿರುವ ವಿದ್ಯಾಭಿಮಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಿತಿಮತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎನ್.ಕೆ ಶಂಭು ಮಾತನಾಡಿ ಸಾಧನೆ ಯಾರ ಸೊತ್ತು ಅಲ್ಲ, ವಿಶೇಷ ಚೇತನರು ಕೂಡ ಹಲವು ಸಾಧನೆ ಮಾಡಿದ ಉದಾಹರಣೆಗಳಿವೆ. ನನ್ನಿಂದ ಸಾಧ್ಯವಾಗುವುದಿಲ್ಲ ಎಂಬ ಕೀಳರಿಮೆ ತೊರೆದು ಸಾಧಿಸುವ ಛಲದೊಂದಿಗೆ ಉತ್ತಮ ಗುರಿ ಸಾಧನೆಗೆ ಪ್ರಯತ್ನಿಸಬೇಕು. ಜೀವನದಲ್ಲಿ ಉತ್ತಮ ಗುರಿ, ಬದಲಾವಣೆಗೆ ಹೊಂದಿಕೊಳ್ಳುವ ಗುಣ, ಸಮಯ ಪ್ರಜ್ಞೆ ಮತ್ತು ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಹಾಗೂ ಶಿಸ್ತನ್ನು ಆಳವಡಿಸಿಕೊಂಡರೆ ಉತ್ತಮ ಪ್ರಜೆಯಾಗಿ ಬದುಕಲು ಸಾಧ್ಯವಾಗುತ್ತದೆ. ಯುವಜನರು ಉತ್ತಮ ಪ್ರಜೆಗಳಾದರೆ ದೇಶದ ಅಭಿವೃದ್ಧಿಗೆ ಸಹಕಾರವಾಗುತ್ತದೆ ಎಂದ ಅವರು ಆಂಗ್ಲ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ 10ನೇ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು 5 ಸಾವಿರ ರೂ. ದತ್ತಿ ನಿಧಿ ಸ್ಥಾಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮದ್ರೀರ ವಿಷ್ಣು ಮಾತನಾಡಿ ವಿದ್ಯೆ ಹಾಗೂ ಸಂಸ್ಕಾರಕ್ಕೆ ಪ್ರಾಥಮಿಕ ಹಂತದಲ್ಲಿಯೇ ಹೆಚ್ಚು ಒತ್ತು ನೀಡಿದರೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಹದಿ ಹರೆಯದಲ್ಲಿ ವಿವೇಚನಾ ಶಕ್ತಿ ಹಾಗೂ ಸ್ವಂತ ಬುದ್ಧಿ ಬೆಳೆಸಿಕೊಳ್ಳಿ ಎಂದರು.

ಪಾರ್ವತಿ ಬೋಪಯ್ಯರಿಗೆ ಸನ್ಮಾನ

ದಕ್ಷಿಣ ಕೊಡಗಿನ ತಾವಳಗೇರಿ ಗ್ರಾಮದ ನಿವಾಸಿ ಸರಳ ಜೀವಿ ಮಹಾದಾನಿಯೆಂದೆ ಹೆಸರು ವಾಸಿಯಾಗಿರುವ ಕೈಬಿಲೀರ ಪಾರ್ವತಿಬೋಪಯ್ಯ ಅವರು ಕೊಡಗು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ದೇವಸ್ಥಾನಗಳಿಗೆ ಹಾಗೂ ವಿದ್ಯಾ ಸಂಸ್ಥೆಗಳಿಗೆ ತಮ್ಮ ನಿವೃತ್ತಿ ವೇತನದ ಉಳಿತಾಯ ಹಣವನ್ನೆಲ್ಲಾ ದಾನ ನೀಡುತ್ತಿದ್ದು, ಅದರಂತೆ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿಯಾಗುವಂತೆ ಶ್ರೀಮಂಗಲ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಸುಮಾರು ರೂ.2 ಲಕ್ಷ ಗಳಷ್ಟು ಹಣವನ್ನು ದಾನ ನೀಡಿದ್ದು ಈ ಸಂದರ್ಭ ಅವರನ್ನು ಸನ್ಮಾನಿಸ ಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾರ್ವತಿ ಬೋಪಯ್ಯ ಶಿಲ್ಪಿ ವಿಗ್ರಹ ಕೆತ್ತಿದಂತೆ ಈ ಶಾಲೆಯ ವಿದ್ಯಾರ್ಥಿ ಗಳನ್ನು ಶಿಕ್ಷಕರು ತಿದ್ದಿದ್ದಾರೆ. ಮಕ್ಕಳು ಕೂಡ ಹಾಗೆಯೇ ಬೆಳೆದಿದ್ದಾರೆ ಎಂಬುದು ಅವರ ಚಟುವಟಿಕೆಯಿಂದ ಅರ್ಥವಾಗುತ್ತದೆ. ಯಾರೂ ಕದಿಯಲು ಸಾದ್ಯವಾಗದ ಸಕಲ ಸಂಪಾದನೆಗೂ ಮಿಗಿಲಾದ್ದುವಿದ್ಯೆ. ಇದನ್ನು ಅಥರ್À ಮಾಡಿಕೊಂಡು ವಿದ್ಯಾರ್ಥಿಗಳು ಛಲದಿಂದ ಕಲಿತು ಸಾಧನೆ ಮಾಡಿ, ಈ ದೇಶದ ಉನ್ನತ ಪದವಿಗೇರಬೇಕು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯರಂತಹ ಮೇರು ವ್ಯಕ್ತಿತ್ವದವರು ಹುಟ್ಟಿದ ಈ ಮಣ್ಣಿಗೆ, ತಂದೆ ತಾಯಿ ಹಾಗೂ ಗುರುಗಳಿಗೆ ಉತ್ತಮ ಹೆಸರು ತರು ವಂತವರಾಗಿ ಎಂದು ಹಾರೈಸಿದರು.

ಈ ಸಂದರ್ಭ ವೇದಿಕೆಯಲ್ಲಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮದ್ರೀರ ವಿಷ್ಣು, ಮುಖ್ಯ ಅತಿಥಿಗಳಾಗಿ ತಿತಿಮತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎನ್.ಕೆ ಶಂಭು, ಪ್ರಾಂಶುಪಾಲ ಕೋಟ್ರಂಗಡ ಚಂಗಪ್ಪ, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕಟ್ಟೇರ ಸುಶೀಲ, ಖಜಾಂಜಿ ಸಂದೀಪ್, ನಿರ್ದೇಶಕರಾದ ಕುಂಞಂಗಡ ರಮೇಶ್, ಮಂದಮಾಡ ಗಣೇಶ್, ಕಳ್ಳಂಗಡ ರಜಿತ್ ಪೂವಣ್ಣ, ವಿನಯ್, ಸ್ಥಳದಾನಿ ಅಜ್ಜಮಾಡ ಕಿಶೋರ್, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ್ಯೆ ಚೆಟ್ಟಂಗಡ ಸುನಿತಾ ಕಿರಣ್, ಚೆಕ್ಕೇರ ಪೊನ್ನಮ್ಮ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ರತ್ನಮ್ಮ ಸಹ ಶಿಕ್ಷಕಿ ಬಾಳೆಯಡ ಕಾವೇರಮ್ಮ ಉಪಸ್ಥಿತರಿದ್ದರು.