ವೀರಾಜಪೇಟೆ, ಡಿ. 25: ದತ್ತಿ ಉಪನ್ಯಾಸ ಮಾಲಿಕೆಗಳ ಮೂಲಕ ಯುವ ಜನಾಂಗಕ್ಕೆ ಸ್ಥೈರ್ಯ ತುಂಬುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಹಳ್ಳಿಗಾಡಿನಲ್ಲಿ ಕಾರ್ಯಕ್ರಮ ಆಯೋಜಿಸಿ ಎಲ್ಲಾ ವರ್ಗದ ಜನರಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸುವ ಕೆಲಸ ಆಗುತ್ತಿದೆ ಎಂದು ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಅಭಿಪ್ರಾಯಪಟ್ಟರು.
ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾರ್ಥನಾ ಮಂದಿರದ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುವಿನಿಂದ ಆಯೋಜಿಸಿದ್ದ ಸಭೆಯಲ್ಲಿ ಮೊಣ್ಣಂಡ ಕೆ. ಚಂಗಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಪರಿಷತ್ತು ಕನ್ನಡದ ಬೆಳವಣಿಗೆಗಾಗಿ, ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ ವೀರಾಜಪೇಟೆ ತಾಲೂಕಿನಲ್ಲಿ ಈಗಾಗಲೇ 3 ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆದಿದೆ. ಇದು 4ನೇ ದತ್ತಿ ಉಪನ್ಯಾಸ. ಈ ಸಂದರ್ಭದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಸಲು ಸಹಕರಿಸಿದ ದಾನಿಗಳಿಗೆ ಗೌರವ ಸೂಚಿಸಬೇಕಾಗಿದೆ ಎಂದರು.
ಕನ್ನಡ ಹಾಗೂ ಕೊಡವ ಭಾಷಾ ಬಾಂಧವ್ಯ ವಿಚಾರದಲ್ಲಿ ಉಪನ್ಯಾಸ ನೀಡಿದ ಸಾಹಿತಿ ಚೆಟ್ಟಂಗಡ ರವಿ ಸುಬ್ಬಯ್ಯ ಅವರು ಕನ್ನಡ ಭಾಷೆಯ ಹಲವು ಶಬ್ಧಗಳು ಕೊಡವ ಭಾಷೆಯಲ್ಲಿ ಮಿಳಿತಗೊಂಡು ಪರಿಪೂರ್ಣತೆಗೆ ಕಾರಣವಾಗಿದೆ ಎಂದರು.
ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲ ಯೋಗ ನರಸಿಂಹ ಸ್ವಾಮಿ ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಜಿ ಅಮ್ಮುಣಿಚಂಡ ಪ್ರವೀಣ್ಚಂಗಪ್ಪ, ನಿರ್ದೇಶಕರಾದ ಸಾಯಿನಾಥ್, ಹರ್ಷವರ್ಧನ್ ಉಪಸ್ಥಿತರಿದ್ದರು. ನಿರ್ದೇಶಕ ವೈಲೇಶ್ ವಂದಿಸಿದರು.