ಗೋಣಿಕೊಪ್ಪ ವರದಿ, ಡಿ. 25: ವನ್ಯಪ್ರಾಣಿಗಳಿಂದಾಗುತ್ತಿರುವ ಪ್ರಾಣಹಾನಿ, ಬೆಳೆ ನಷ್ಟದ ವಿಚಾರದಲ್ಲಿ ಅರಣ್ಯ ಇಲಾಖೆ ವೈಜ್ಞಾನಿಕ ಕ್ರಮಕ್ಕೆ ಮುಂದಾಗದಿದ್ದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡು ದಶಕಗಳಿಂದ ನಿರಂತರವಾಗಿ ವನ್ಯಪ್ರಾಣಿಗಳಿಂದ ಮಾನವ ಪ್ರಾಣಹಾನಿ, ಬೆಳೆನಷ್ಟ ಎದುರಿಸುತ್ತಿದ್ದೇವೆ. ತಾತ್ಕಾಲಿಕ ಪರಿಹಾರ ಕ್ರಮ ಅನುಷ್ಠಾನ, ದಯಾತ್ಮಕ ಪರಿಹಾರ ನೀಡುವುದರಿಂದ ಸಮಸ್ಯೆ ಅಂತ್ಯ ಕಾಣುತ್ತಿಲ್ಲ. ಇದರಿಂದಾಗಿ ಅರಣ್ಯ ಸಚಿವ ಹಾಗೂ ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಸುದ್ದಿಗೋಷ್ಠಿ ಯಲ್ಲಿ ಎಚ್ಚರಿಸಿದರು.

ಜನಪ್ರತಿನಿಧಿಗಳು, ಅಧಿಕಾರಿ ವರ್ಗದ ನಿರ್ಲಕ್ಷ್ಯ ಮನೋಭಾವ ದಿಂದ ಸಣ್ಣ ಮಟ್ಟದ ಪರಿಹಾರ ದೊರೆಯುತ್ತಿರುವುದರಿಂದ ಬೆಳೆಗಾರ ನಿರಂತರ ನಷ್ಟದ ಹಾದಿಯಲ್ಲಿದ್ದಾನೆ. ನಿರ್ಲಕ್ಷ್ಯ ಪ್ರಶ್ನಿಸಿ, ಹಾನಿ ಬಗ್ಗೆ ಹೈಕೋರ್ಟ್‍ನಲ್ಲಿ ದಾವೆ ಹೂಡಿ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

ಶ್ರೀಮಂಗಲ ವ್ಯಾಪ್ತಿಯಲ್ಲಿ ಗೋಣಿಕೊಪ್ಪ ಮರ್ಚೆಂಟ್ ಬ್ಯಾಂಕ್ ವತಿಯಿಂದ ಸಾಲ ಪಡೆದ ಒಂದಷ್ಟು ವ್ಯಾಪಾರಿಗಳ ಸಾಲ ಮರುಪಾವತಿಗೆ ತೊಂದರೆಯಾಗಿದೆ. ವ್ಯಾಪಾರವಿಲ್ಲದ ಕಾರಣ ಬ್ಯಾಂಕ್ ಸಾಲ ಪಡೆದವರಿಗೆ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಬೆಳೆ ಪರಿಹಾರದ ವಿಚಾರದಲ್ಲಿ ಇಲ್ಲಿವರೆಗೆ ನಮ್ಮ ಸಮಿತಿಯಿಂದ 250 ಅರ್ಜಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಸೂಕ್ತ ಸ್ಪಂದನೆ ದೊರೆಯುತ್ತಿದೆ. ಆಧಾರ್ ಹಾಗೂ ಪಹಣಿಯಲ್ಲಿನ ಹೊಂದಾಣಿಕೆ ಲೋಪದಿಂದ ಒಂದಷ್ಟು ಪರಿಹಾರ ಬಾಕಿ ಉಳಿದಿರುವುದರಿಂದ ಸಮಸ್ಯೆಯಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಪರಿಹಾರವನ್ನು ಎಲ್ಲರಿಗೂ ತಲುಪಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಶ್ರೀಮಂಗಲ ಹೋಬಳಿ ಅಧ್ಯಕ್ಷ ಮಾಣೀರ ವಿಜಯ ಮಾತನಾಡಿ, ಆಧಾರ್ ಗೊಂದಲ ನಿವಾರಣೆಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಂತೆ ಜನವರಿ 2 ರಿಂದ 3 ದಿನ ಟಿ. ಶೆಟ್ಟಿಗೇರಿಯಲ್ಲಿ ಆಧಾರ್ ಅಭಿಯಾನವನ್ನು ಜಿಲ್ಲಾಡಳಿತ ಅನುಷ್ಠಾನಗೊಳಿಸಲಾಗುತ್ತಿದೆ. ಸೂಕ್ತ ದಾಖಲಾತಿ ಮೂಲಕ ಸಾರ್ವಜನಿಕರು ಆಧಾರ್ ನೋಂದಣಿ, ತಿದ್ದುಪಡಿಯಂತಹ ಲೋಪ ಸರಿಪಡಿಸಿಕೊಳ್ಳಬಹುದು ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಸಹ ಕಾರ್ಯದರ್ಶಿ ಬಾಚಂಗಡ ಲೀಲಾ ನಂಜಪ್ಪ, ಸದಸ್ಯ ಕೋಳೇರ ರಾಜಾ ನರೇಂದ್ರ ಇದ್ದರು.