ಮಡಿಕೇರಿ, ಡಿ. 23 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರುದ್ಧ ತಾ.30 ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಜನವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಸಿಎಎ ಯನ್ನು ರದ್ದುಗೊಳಿಸುವಲ್ಲಿಯವರೆಗೆ ಕಾಂಗ್ರೆಸ್ ಪಕ್ಷದಿಂದ ನಿರಂತರ ಪ್ರತಿಭಟನೆ ನಡೆಯಲಿದೆ ಎಂದರು. ಡಿ.30 ರಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದೆಂದು ತಿಳಿಸಿದರು.
ದೇಶದ ಪ್ರಜೆ ಎನ್ನುವುದಕ್ಕೆ 1971 ರ ಹಿಂದಿನ ದಾಖಲೆಗಳನ್ನು ಕೇಳಲಾಗುತ್ತಿದ್ದು, ಇದನ್ನು ಒದಗಿಸಲು ಮುಸಲ್ಮಾನರು ಮಾತ್ರವಲ್ಲ, ಹಿಂದೂಗಳಿಂದಲೂ ಸಾಧ್ಯವಿಲ್ಲವೆಂದು ಮಂಜುನಾಥ್ ಕುಮಾರ್ ಅಭಿಪ್ರಾಯಪಟ್ಟರು. ಬಹಳ ಹಿಂದಿನ ಶಾಲಾ ದಾಖಲಾತಿಗಳು ಅಥವಾ ಆಸ್ಪತ್ರೆಗಳಲ್ಲಿ ಜನನ ಪ್ರಮಾಣ ಪತ್ರಗಳು ಇಲ್ಲಿಯವರೆಗೆ ಉಳಿಸಿಕೊಂಡಿರುವ ಬಗ್ಗೆ ಸಂಶಯಗಳಿವೆ. ಆದ್ದರಿಂದ ಸಿಎಎ ಜನರ ನೆಮ್ಮದಿ ಭಂಗ ಮಾಡುವ ಕಾಯ್ದೆಯಾಗಿದೆಯೇ ಹೊರತು ಯಾವುದೇ ಜನಹಿತ ಇದರಲ್ಲಿ ಅಡಗಿಲ್ಲವೆಂದು ಟೀಕಿಸಿದರು.
ತೈಲೋತ್ಪನ್ನಗಳ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ, ಇದನ್ನು ನಿಯಂತ್ರಿಸಲಾಗದ ಸರ್ಕಾರ ಜನರ ಹಾದಿ ತಪ್ಪಿಸುವ ಮೂಲ ಉದ್ದೇಶದಿಂದ ಸಿಎಎ ಮತ್ತು ಎನ್ ಆರ್‍ಸಿ ಮೂಲಕ ಗೊಂದಲ ಸೃಷ್ಟಿಸಿದೆ. ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಕಾಳಜಿ ತೋರದ ಸರ್ಕಾರ ಮಳೆಹಾನಿ ಸಂತ್ರಸ್ತರನ್ನು ಮರೆತೇ ಬಿಟ್ಟಿದೆ. ಕೊಡಗಿನ ಸಂತ್ರಸ್ತರಿಗೆ ಕೇವಲ ತಲಾ 10 ಸಾವಿರ ರೂ. ಪರಿಹಾರ ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಧನ ಸಹಾಯ ಮಾಡಿಲ್ಲ. ಈ ಹಿಂದಿನ ಮೈತ್ರಿ ಸರ್ಕಾರ 2018 ರ ಅತಿವೃಷ್ಟಿ ಹಾನಿ ಸಂತ್ರಸ್ತರಿಗಾಗಿ 800 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿತ್ತು. ಆದರೆ ಈಗಿನ ಬಿಜೆಪಿ ನೇತೃತ್ವದ ಸರ್ಕಾರ ಒಂದೇ ಒಂದು ಮನೆಯನ್ನೂ ನಿರ್ಮಿಸಿಲ್ಲ ವೆಂದು ಅವರು ಆರೋಪಿಸಿದರು.
ಪಕ್ಷ ಸಂಘಟನೆಗೆ ಆದ್ಯತೆ : ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಆದ್ಯತೆ ನೀಡುವ ಸಲುವಾಗಿ ಐದು ಬ್ಲಾಕ್‍ಗಳಿಗೆ ಯುವ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ. ನೂತನ ಅಧ್ಯಕ್ಷರುಗಳ ಆಯ್ಕೆ ಸಂದರ್ಭ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ವ್ಯಕ್ತವಾಗುವುದು ಸಾಮಾನ್ಯವೆಂದು ಮಂಜುನಾಥ್ ಕುಮಾರ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಕುಶಾಲನಗರ ಬ್ಲಾಕ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿಪೂಣಚ್ಚ, ಪೊನ್ನಂಪೇಟೆ ಅಧ್ಯಕ್ಷ ಕೋದಂಡ ಸಂಪತ್ ಸೋಮಣ್ಣ ಹಾಗೂ ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್ ಉಪಸ್ಥಿತರಿದ್ದರು.