ಗೋಣಿಕೊಪ್ಪ ವರದಿ, ಡಿ. 23: ಕಾರ್ಮಿಕರನ್ನು ಸಾಗಿಸುವ ವಾಹನ ಚಾಲಕರಿಂದ ಹೆದ್ದಾರಿ ಸಂಚಾರಿ ಪೊಲೀಸರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ತಿತಿಮತಿ ಗ್ರಾಮಸ್ಥರು, ವಸೂಲಿ ಕ್ರಮವನ್ನು ನಿಲ್ಲಿಸಬೇಕು ಎಂದು ತಿತಿಮತಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಿತಿಮತಿ ಗ್ರಾಮಸಭೆಯಲ್ಲಿ ಒತ್ತಾಯಿಸಿದರು.

ಈ ಬಗ್ಗೆ ಪ್ರಸ್ತಾಪಿಸಿದ ಸ್ಥಳೀಯ ಬೆಳೆಗಾರರು, ಗ್ರಾಮಸ್ಥರುಗಳು, ಕಾಫಿ ಕೊಯ್ಲು ಸೇರಿದಂತೆ, ಕೃಷಿ ಚಟುವಟಿಕೆ ಆರಂಭಗೊಂಡಿರುವುದರಿಂದ ಕಾರ್ಮಿಕರ ಕೊರತೆ ಎದುರಿಸುತ್ತಿದ್ದೇವೆ. ಪಕ್ಕದ ಗ್ರಾಮ ಅಥವಾ ಹೊರ ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆ ತರುವ ವಾಹನಗಳ ಚಾಲಕರಿಂದ ಪ್ರತಿ ವಾಹನಕ್ಕೆ 100 ರೂ. ಹಣ ಪೊಲೀಸರು ವಸೂಲಿ ಮಾಡುತ್ತಿರುವುದರಿಂದ ಕಾರ್ಮಿಕರನ್ನು ಕರೆತರಲು ವಾಹನ ಚಾಲಕರು ಹಿಂದೇಟು ಹಾಕುತ್ತಿದ್ದಾರೆ ಎಂದು ನೋವು ಹಂಚಿಕೊಂಡರು.

ನಿಯಮ ಪಾಲಿಸದ ವಾಹನಗಳಿಗೆ ದಂಡ ವಿಧಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಕಾರ್ಮಿಕರನ್ನು ಸಾಗಿಸುವ ವಾಹನವನ್ನು ಗುರಿಯಾಗಿಸಿಕೊಂಡು ಅನಗತ್ಯ ವಸೂಲಿ ಮಾಡುವುದರಿಂದ ಕಾರ್ಮಿಕರ ಸಮಸ್ಯೆ ಹೆಚ್ಚಾಗಲಿದೆ. ಇದನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಸಿಬ್ಬಂದಿ ಚಂದ್ರಯ್ಯ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ತಿತಿಮತಿ ಗ್ರಾ. ಪಂ. ಅಧ್ಯಕ್ಷ ಶಿವಕುಮಾರ್ ಮಾತನಾಡಿ, ದ್ವಿಚಕ್ರ ಸವಾರರಿಂದ ದಾಖಲೆ ಪಡೆಯಲು ಬೈಕ್ ಚಲಿಸುವ ಸಂದರ್ಭದಲ್ಲಿಯೇ ಸವಾರರಿಗೆ ಪೊಲೀಸರು ಹೊಡೆಯುತ್ತಿರುವುದರಿಂದ ಗಾಬರಿಗೊಂಡು ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ವಾಹನ ಸಂಖ್ಯೆ ನಮೂದಿಸಿಕೊಂಡು ಕಾನೂನು ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.

ಗ್ರಾಮಸ್ಥ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ನಾಯಿಮನೆ ಕಾಲನಿ ಸಮೀಪ ಜೂಜಾಟ ಹೆಚ್ಚಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಇತ್ತ ಅಕ್ರಮ ಮದ್ಯ ಮಾರಾಟದಿಂದ ಬಡ ಕಾರ್ಮಿಕರು ಹಣ ಕಳೆದುಕೊಳ್ಳುತ್ತಿದ್ದಾರೆ ಎಂದರು. ತಿತಿಮತಿ ಪ್ರಾದೇಶಿಕ, ಮತ್ತಿಗೋಡು ವನ್ಯಜೀವಿ ವ್ಯಾಪ್ತಿಯ ಜನತೆ ಕಾಡಾನೆ ಸಮಸ್ಯೆಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದು, ಇಲಾಖೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಆಹಾರ ಸರಬರಾಜು, ಕೃಷಿ ಇಲಾಖೆ, ಪ್ರಾದೇಶಿಕ ಅರಣ್ಯ, ವನ್ಯಜೀವಿ, ಉದ್ಯೋಗಖಾತ್ರಿ ಯೋಜನೆಗಳ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಯಿತು. ನೋಡೆಲ್ ಅಧಿಕಾರಿಯಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ತಾಲೂಕು ಅಧಿಕಾರಿ ಗುರುಶಾಂತಪ್ಪ ಪಾಲ್ಗೊಂಡಿದ್ದರು. ಈ ಸಂದರ್ಭ ಜಿ. ಪಂ. ಸದಸ್ಯೆ ಪಂಕಜ, ಗ್ರಾ. ಪಂ. ಉಪಾಧ್ಯಕ್ಷೆ ರಶಿ, ಪಿಡಿಒ ಮಮತಾ ಉಪಸ್ಥಿತರಿದ್ದರು.