ವೀರಾಜಪೇಟೆ, ಡಿ. 23: ವೀರಾಜ ಪೇಟೆಯ ಕ್ರಿಕೆಟ್ ಹಬ್ಬ ಎಂದೇ ಪ್ರಸಿದ್ಧಿ ಪಡೆದಿರುವ ಕಳೆದ ವರ್ಷ ಆರಂಭವಾದ “ವೀರಾಜಪೇಟೆ ಪ್ರೀಮಿಯರ್ ಲೀಗ್” (ವಿ.ಪಿ.ಎಲ್) ಕ್ರಿಕೆಟ್ ಪಂದ್ಯಾಟವು ತಾ.24ರಿಂದ (ಇಂದಿನಿಂದ) 29ರವರೆಗೆ ವೀರಾಜಪೇಟೆಯಲ್ಲಿ ನಡೆಯಲಿದೆ. ಈ ಪ್ರಯುಕ್ತ ಇಂದು ತೆಲುಗರ ಬೀದಿಯ ಮಾರಿಯಮ್ಮ ದೇವಾಲಯ ಬಳಿಯಿಂದ ಸಂತ ಅನ್ನಮ್ಮ ಕಾಲೇಜು ಮೈದಾನದವರೆಗೆ ವಿಪಿಎಲ್‍ನ ಅಧಿಕೃತ ತಂಡಗಳ ಆಟಗಾರರು ಮತ್ತು ಮಾಲೀಕರಿಂದ ಉದ್ಘಾಟನಾ ಜಾಥಾ ನಡೆಯಿತು. ಜಾಥಾಕ್ಕೆ ಮೆಗ್ಡೋಲಿಯಾ ರೆಸಾರ್ಟ್ ವ್ಯವಸ್ಥಾಪಕ ಪ್ರವೀಣ್ ಚಾಲನೆ ನೀಡಿದರು.
ಟ್ರೋಫಿಯನ್ನು ವೀರಾಜಪೇಟೆ ನಗರದ ಅರಕ್ಷಕ ವೃತ್ತ ನೀರಿಕ್ಷಕ ಕ್ಯಾತೆ ಗೌಡ ನಗರದ ಠಾಣಾಧಿಕಾರಿ ಮರಿಸ್ವಾಮಿ, ಟ್ರೋಫಿ ದಾನಿಗಳಾದ ಸಾಗರ್ ಡೆಕೋರೇಟರ್ಸ್ ಮಾಲೀಕ ಸಾಗರ್ ಮತ್ತು ಸ್ಪೋಟ್ರ್ಸ್ ವಲ್ರ್ಡ್ ಮಾಲೀಕ ಅನ್ಸಫ್ ಮತ್ತು ಆಯೋಜಕರಾದ ಇಂತಿಯಾಜ್, ನಿತಿನ್ ಲೆಪು, ಅಭಿಲಾಶ್, ಶವಾಜ್, ಮೊಹೀನ್ ಅನಾವರಣಗೊಳಿಸಿದರು.
ವಿಪಿಎಲ್ ಪಂದ್ಯಾಟದಲ್ಲಿ ವೀರಾಜಪೇಟೆ ನಗರಕ್ಕೆ ಒಳಪಡುವ ಕ್ರಿಕೆಟ್ ಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.
ವೀರಾಜಪೇಟೆ ನಗರದ ಯೂತ್ ಫ್ರೆಂಡ್ಸ್ ಸಂಸ್ಥೆ ಆಯೋಜನೆ ಮಾಡಿರುವ “ವಿಪಿಎಲ್” ಕ್ರಿಕೆಟ್ ಪಂದ್ಯಾಟದಲ್ಲಿ ವೀರಾಜಪೇಟೆ ನಗರದ ಪ್ರತಿಷ್ಠಿತ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಪ್ರಥಮ ಹಂತದ ಹರಾಜು ಪ್ರಕ್ರಿಯೆಯ ಪಂದ್ಯಾಟದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದ 200 ಆಟಗಾರರಲ್ಲಿ ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ತೋರಿದ 28 ಆಟಗಾರರನ್ನು ಐಕಾನ್ ಆಟಗಾರರ ಪಟ್ಟಿಯಲ್ಲಿ ಸೇರಿಸಿ ಮೊದಲ ಹಂತದ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು.
ಎರಡನೇ ಹಂತದ ಹರಾಜು ಪ್ರಕ್ರಿಯೆಯಲ್ಲಿ ಹಂತಿಮವಾಗಿ 140 ಆಟಗಾರರು ಪ್ರತಿಷ್ಠಿತ ತಂಡಗಳಿಗೆ ಬಿಕರಿಯಾಗಿದ್ದಾರೆ.
ವಿ.ಪಿ.ಎಲ್.ಗೆ ರಶ್ಮಿಕಾ ಮಂದಣ್ಣ
ಪಂದ್ಯಾಟ ಸಮಾರೋಪ ಸಮಾರಂಭಕ್ಕೆ ಬಹುಭಾಷ ನಟಿ ಕೊಡಗು ಜಿಲ್ಲೆಯವರಾದ ರಶ್ಮಿಕಾ ಮಂದಣ್ಣ ಆಗಮಿಸಲಿದ್ದಾರೆ.
ಅಲ್ಲದೇ ಕ್ರೀಡಾ ಉತ್ಸವದಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.
-ವರದಿ : ಕಿಶೋರ್ ಶೆಟ್ಟಿ, ಇಸ್ಮಾಯಿಲ್