ಸೋಮವಾರಪೇಟೆ, ಡಿ. 23: ಕಾಡಾನೆ ಪೀಡಿತ ಗ್ರಾಮಗಳಾದ ಯಡವಾರೆ, ಐಗೂರು ಗ್ರಾಮಸ್ಥರ ಮನವಿಯ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಗ್ರಾಮಕ್ಕೆ ಭೇಟಿ ನೀಡಿ ಕೃಷಿಕರ ಸಮಸ್ಯೆಯನ್ನು ಆಲಿಸಿದರು.
ಕಾಜೂರು ಜಂಕ್ಷನ್‍ನಿಂದ ಮೀಸಲು ಅರಣ್ಯದ ಸುತ್ತ ಆನೆಕಂದಕ ನಿರ್ಮಿಸಿದ್ದು, ಕಲ್ಲುಬಂಡೆ ಸಿಕ್ಕಿದ ಕಡೆ ಹಾಗೇ ಬಿಡಲಾಗಿದ್ದು, ಆ ಭಾಗದಲ್ಲಿ ಕಾಡಾನೆಗಳು ಗ್ರಾಮಕ್ಕೆ ನುಗ್ಗುತ್ತಿವೆ ಎಂದು ಗ್ರಾಮಸ್ಥರು ವಿವರಿಸಿದರು.
ಕಾಜೂರು ಜಂಕ್ಷನ್ ಸಮೀಪ ಟಾಟಾ ಕಾಫಿ ತೋಟದೊಳಗೆ ಆನೆ ಕಾರಿಡಾರ್ ಇದ್ದು, ಆ ಜಾಗದಲ್ಲೇ ಹೊಳೆಗೆ ತೆರಳಿ, ನೀರು ಕುಡಿದು ಆನೆಗಳು ವಾಪಾಸ್ ಅರಣ್ಯಕ್ಕೆ ತೆರಳುತ್ತಿದ್ದವು. ಆದರೆ ಈಗ ತೋಟದ ಬೇಲಿಗೆ ಸೋಲಾರ್ ತಂತಿ ಅಳವಡಿಸಿರುವದರಿಂದ ಕಾಡಾನೆಗಳು ಹೊಳೆಗೆ ತೆರಳಲು ಸಾಧ್ಯವಾಗದೆ ಗ್ರಾಮಗಳಿಗೆ ನುಗ್ಗುತ್ತಿವೆ ಎಂದು ಗ್ರಾಮಸ್ಥರಾದ ಮಚ್ಚಂಡ ಅಶೋಕ್ ಅಧಿಕಾರಿಯ ಗಮನಕ್ಕೆ ತಂದರು.
ಕಾಡಾನೆಗಳು ನೀರು ಕುಡಿಯಲು ಕಾಡಿನೊಳಗೆ ತೆಗೆದಿರುವ ಕೆರೆಗಳನ್ನು ದುರಸ್ತಿ ಪಡಿಸಬೇಕು. ಕಂದಕದಲ್ಲಿ ಕಲ್ಲುಬಂಡೆಯಿರುವ ಜಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಗು ಸೋಲಾರ್ ತಂತಿಬೇಲಿ ನಿರ್ಮಿಸುವಂತೆ ಗ್ರಾಮಸ್ಥರು ಬೇಡಿಕೆಯಿಟ್ಟರು.
ಆನೆ ಕಂದಕದಲ್ಲಿ ಬಂಡೆಗಳಿರುವ ಜಾಗದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕೆರೆಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗುವದು ಎಂದು ಪ್ರಭಾಕರನ್ ಭರವಸೆ ನೀಡಿದರು.
ಈ ಸಂದರ್ಭ ಗ್ರಾಮಸ್ಥರಾದ ಬಾರನ ಭರತ್, ಯೋಗೇಶ್, ಚಿನ್ನಳ್ಳಿ ಹರೀಶ್, ಪ್ರಮೋದ್, ಮನು, ಬಗ್ಗನ ಹರೀಶ್, ಕೆ.ಬಿ.ದಿಗಂತ್, ನಾರೂರು ಈರಪ್ಪ, ಪ್ರಕಾಶ್, ಡಿ.ಪಿ.ಕೃಷ್ಣಪ್ಪ, ಆರ್.ಎಫ್.ಒ. ಶಮಾ, ಡಿ.ಆರ್. ಎಫ್.ಒ. ಸತೀಶ್, ಜಗದೀಶ್ ಉಪಸ್ಥಿತರಿದ್ದರು.