ಕುಶಾಲನಗರ, ಡಿ. 23: ಕುಶಾಲನಗರ ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದುಪಡಿ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮೇಳಕ್ಕೆ ಚಾಲನೆ ನೀಡಲಾಯಿತು.
ಕೊಡಗು ಅಂಚೆ ವಿಭಾಗದ ಸಹಾಯಕ ಅಧೀಕ್ಷಕ ದಯಾನಂದ್ ದೇವಾಡಿಗ ಮೇಳಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆಧಾರ್ ಕಾರ್ಡ್ ಸೌಲಭ್ಯದಿಂದ ವಂಚಿತರಾಗಿರುವ ನಾಗರಿಕರಿಗೆ ವಿಶೇಷ ಮೇಳ ಏರ್ಪಡಿಸಲಾಗಿದೆ.
ಆಧಾರ್ ಪಡೆದುಕೊಳ್ಳಲು ಬರುವ ನೂರಾರು ಮಂದಿಗೆ ಏಕಕಾಲದಲ್ಲಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಮೇಳ ನಡೆಸುತ್ತಿದೆ. ಇಲಾಖೆಯ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಪ್ರತಿಯೊಬ್ಬರಿಗೂ ಈ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಅಗತ್ಯ ಬಿದ್ದಲ್ಲಿ ಪ್ರತಿ ತಿಂಗಳಿಗೊಮ್ಮೆ ಮೇಳವನ್ನು ಆಯೋಜಿಸಿ ಹೆಚ್ಚಿನ ರೀತಿಯ ಅನುಕೂಲ ಒದಗಿಸಲು ಇಲಾಖೆ ಚಿಂತನೆ ಹರಿಸಿದೆ ಎಂದು ಹೇಳಿದರು.
ಜಿಲ್ಲಾ ಐಪಿಪಿಬಿ ಬ್ಯಾಂಕ್ ವ್ಯವಸ್ಥಾಪಕ ನಿತಿನ್ ಕೆ ಪ್ರಸಾದ್ ಮಾತನಾಡಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೌಲಭ್ಯ, ವೈಶಿಷ್ಟ್ಯಗಳು, ಖಾತೆ ತೆರೆಯುವ ವಿಧಾನದ ಬಗ್ಗೆ ಮಾಹಿತಿ ಒದಗಿಸಿದರು.
ಐಪಿಪಿಬಿ ಸಹಾಯಕ ವ್ಯವಸ್ಥಾಪಕ ದೀಪಕ್, ಕುಶಾಲನಗರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮಂಜುನಾಥ್ ಮತ್ತು ಸಿಬ್ಬಂದಿಗಳು ಇದ್ದರು.
100 ಕ್ಕೂ ಅಧಿಕ ಮಂದಿ ಆಧಾರ್ ಸೇವೆ ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ಕಾದು ನಿಂತ ದೃಶ್ಯ ಕಂಡುಬಂತು.