ಮಡಿಕೇರಿ, ಡಿ. 23: ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ವತಿಯಿಂದ ನಗರದ ಮೈತ್ರಿ ಹಾಲ್ ಹತ್ತಿರದ ನಿವೃತ್ತ ಪೊಲೀಸ್ ಸಿಬ್ಬಂದಿಗಳ ಕಟ್ಟಡ ಸ್ವಾಭಿಮಾನ್ ಸಭಾಂಗಣದಲ್ಲಿ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪೊಲೀಸ್ ಉಪ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಯುವಜನರು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದರು. ಯುವ ಜನತೆ ಮತ್ತು ಪೊಲೀಸರ ಸಂಬಂದ ಒಳ್ಳೆಯ ರೀತಿಯಲ್ಲಿ ಬೆಳೆಸಿಕೊಳ್ಳಬೇಕು. ಮಹಿಳೆಯರ ರಕ್ಷಣೆಗೆ ಕಾನೂನು ಮತ್ತು ಸಂವಿಧಾನದಲ್ಲಿ ಪ್ರತ್ಯೇಕ ಸ್ಥಾನವಿದೆ. ಪ್ರತಿ ಗ್ರಾಮ ಮತ್ತು ಉಪಗ್ರಾಮದ ಜನರ ರಕ್ಷಣೆಗಾಗಿ ಬೀಟ್ ವ್ಯವಸ್ಥೆಯಾಗಿ ಪೊಲೀಸ್ ಸಿಬ್ಬಂದಿಗಳ ಭೇಟಿ ಮಾಡುತ್ತಾರೆ. ರಾತ್ರಿ ಗಸ್ತು ಹಾಗೂ ಗಸ್ತುಗಾಗಿ ಪ್ರತ್ಯೇಕ ಸಿಬ್ಬಂದಿಗಳು ಇರುತ್ತಾರೆ. ಮಾದಕ ವಸ್ತು ಬಳಸಿದವರಿಗೆ 20 ವರ್ಷ ಶಿಕ್ಷೆ ಜೊತೆಗೆ 5 ರಿಂದ 10 ಲಕ್ಷದವರೆಗೆ ದಂಡ. ಸೇವನೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾದ. ಇಂತಹ ವಿಷಯ ತಿಳಿದು ಬಂದಲ್ಲಿ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಗ್ರಾಮದಲ್ಲಿ ಯುವಕ, ಯುವತಿ ಸಂಘಗಳು ಜನಸಂಪರ್ಕ ಸಭೆಯನ್ನು ಯೋಜಿಸಿಕೊಂಡು ಸಮಸ್ಯೆಯನ್ನು ಚರ್ಚಿಸಿ ಪರಿಹರಿಸಿ ಕೊಳ್ಳಬೇಕು, ಪೋಲಿಸ್ ಠಾಣೆಯಲ್ಲಿ ಯುವ ಜನರು ತಮ್ಮ ಹೆಸರು ಎಪ್.ಐ.ಆರ್ ನಲ್ಲಿ ಹೋಗದ ಹಾಗೆ ನೋಡಿಕೊಳ್ಳು ವುದು ಮತ್ತು ಕಾನೂನು ಪಾಲನೆ ಮಾಡಬೇಕು ಎಂದರು.

ಸಾಮಾಜಿಕ ಕಾರ್ಯಕರ್ತೆ ಬಬ್ಬೀರ ಸರಸ್ವತಿ ಮಾತನಾಡಿ ಯುವ ಜನತೆ ಕಾನೂನಿನ ಅರಿವು ಬೆಳೆಸಿಕೊಳ್ಳ ಬೇಕು, ಕಾನೂನಿನ ಬಗ್ಗೆ ಅರಿವು ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಯಾವುದೇ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಶಿಕ್ಷಣದ ಜೊತೆಗೆ ಕಾನೂನು ಅರಿತುಕೊಂಡರೆ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ, ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಕೆ.ಕೆ. ಗಣೇಶ್ ಇತರರು ಪಾಲ್ಗೊಂಡಿದ್ದರು.