ಶ್ರೀಮಂಗಲ, ಡಿ. 22: ಕೊಡಗು ಜಿಲ್ಲೆಗೆ ವಿನಾಶಕಾರಿಯಾಗಿರುವ ಬಹುಪಥ ಹೆದ್ದಾರಿ ಹಾಗೂ ರೈಲ್ವೆ ಮಾರ್ಗದ ಬಗ್ಗೆ ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ ಅವರು ಕೊಡಗು- ಮೈಸೂರು ಸಂಸದ ಪ್ರತಾಪ್ಸಿಂಹ ಅವರಿಗೆ ಪತ್ರ ಬರೆದಿದ್ದು, ವಿವರ ಕೆಳಗಿನಂತಿದೆ:
ಪ್ರವಾಸಿಗರ ಸಂಚಾರಕ್ಕೆ ಅನುಕೂಲವಾಗುವಂತೆ ಮೈಸೂರಿನಿಂದ ಕೊಡಗು ಜಿಲ್ಲೆಯ ಕುಶಾಲನಗರದವರೆಗೆ ರೈಲ್ವೆ ಮಾರ್ಗವನ್ನು ಅನುಮೋದಿಸಿದಕ್ಕಾಗಿ ಮತ್ತು ಈ ಮಾರ್ಗವನ್ನು ಜಿಲ್ಲೆಯ ಮಡಿಕೇರಿಯವರೆಗೆ ತರಲು ವಿನಂತಿಸಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ಗೋಯಲ್ ಅವರಿಗೆ ಪತ್ರ ಬರೆದಿರುವ ಸಂಸದರ ನಿಲುವಿಗೆ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಮೈಸೂರಿನಲ್ಲಿ ರೈಲ್ವೆ ಯೋಜನೆ ವಿರುದ್ಧ ನಡೆಸಿದ ರ್ಯಾಲಿಯ ಸಂದರ್ಭದಲ್ಲಿ ಜಿಲ್ಲೆಗೆ ರೈಲ್ವೆ ಯೋಜನೆ ಮಾಡಲು ಬೆಂಬಲ ನೀಡುವುದಿಲ್ಲ ಎಂದು ಭರವಸೆ ನೀಡಿದ್ದೀರಿ. ಆದರೆ, ಈಗ ನಿಲುವನ್ನು ಬದಲಾಯಿಸಿದ ರೀತಿಗೆ ನಾವು ನಿಜವಾಗಿಯೂ ಗೊಂದಲಗೊಳಗಾಗಿದ್ದೇವೆ ಎಂದು ರಾಜೀವ್ಬೋಪಯ್ಯ ಅವರು ತಿಳಿಸಿದ್ದಾರೆ.
ಕೊಡಗಿನಲ್ಲಿ ಸಾಮೂಹಿಕ ಆಕ್ರಮಣಕಾರಿ ಪ್ರವಾಸೋದ್ಯಮದಿಂದ ಈಗಾಗಲೇ ಕೆಟ್ಟದಾಗಿ ಕೊಡಗು ಜಿಲ್ಲೆ ಹಾನಿಗೊಳಗಾಗುತ್ತಿದೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಬದಲು ನಿಯಂತ್ರಿಸುವ ಅವಶ್ಯಕತೆ ಇದೆ ಎಂಬುದನ್ನು ಮನಗಾಣ ಬೇಕಾಗಿದೆ ಎಂದು ಉಲ್ಲೇಖಿಸಿದ್ದಾರೆ.
‘‘ಕೊಡಗು ಮೂಲಕ ರೈಲ್ವೆ ಮತ್ತು ಬಹುಪಥದ ರಾಷ್ಟ್ರೀಯ ಹೆದ್ದಾರಿಗಳ ಯೋಜನೆ ಪರವಾಗಿ ನೀವು ಕಾಣಿಸುತ್ತೀರಿ. ಈ ಯೋಜನೆಗಳಿಗೆ ಬೊಕ್ಕಸಕ್ಕೆ ಸುಮಾರು ರೂ. 30 ಸಾವಿರ ಕೋಟಿ ವೆಚ್ವವಾಗಲಿದೆ. ಇದು ತೆರಿಗೆ ಪಾವತಿದಾರರ ಹಣದ ಸಂಪೂರ್ಣ ವ್ಯರ್ಥವಾಗಿದೆ. ಕೆಲವು ಗುತ್ತಿಗೆದಾರರು ಮತ್ತು ರಾಜಕಾರಣಿಗಳಿಗೆ ಮಾತ್ರ ಈ ಯೋಜನೆಯಿಂದ ಲಾಭವಾಗುತ್ತದೆ. ಕೊಡಗಿನಲ್ಲಿ ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ಪ್ರಾಕೃತಿಕ ವಿಕೋಪÀಕ್ಕೆ ತುತ್ತಾಗಿ ನಲುಗಿದ ಕೊಡಗಿನ ಸಂತ್ರಸ್ತರಿಗೆ ಇನ್ನೂ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಕಾಲೂರು, ಮುಕ್ಕೋಡ್ಲು, ತಂತಿಪಾಲ ಮುಂತಾದ ಈ ಬೆಟ್ಟದ ಜನರು ಸಂಕಷ್ಟದಲ್ಲಿದ್ದಾರೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷದ ಪ್ರಾಕೃತಿಕ ವಿಕೋಪದ ಸಂದರ್ಭದ ಪರಿಹಾರದ ಕಾರ್ಯಗಳನ್ನು ನಾಗರಿಕ ಸಮಾಜ ಮತ್ತು ಕೊಡಗಿನ ಜನರ ಮೂಲಕ ಮಾಡಲಾಗಿದೆ. ಈ ಹಳ್ಳಿಗಳಿಗೆ ನೀವು ಎಷ್ಟು ಬಾರಿ ಭೇಟಿ ನೀಡಿದ್ದೀರಿ ಮತ್ತು ಕಳೆದ ಆಗಸ್ಟ್ನಿಂದ ನೀವು ಸಂತ್ರಸ್ತರಿಗೆ ಮಾಡಿದ ನಿರ್ದಿಷ್ಟ ಕೆಲಸ ಯಾವುದು ಮತ್ತು ಈ ವರ್ಷದ ಆಗಸ್ಟ್ನಲ್ಲಿ ಭೂಕುಸಿತ ಮತ್ತು ಧಾರಾಕಾರ ಮಳೆಯ ಸಂತ್ರಸ್ತರಿಗಾಗಿ ನೀವು ಏನು ಮಾಡಿದ್ದೀರಿ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ಇಳಿಜಾರು ಪ್ರದೇಶಗಳಿಗೆ ಮತ್ತಷ್ಟು ಅಪಾಯ ಉಂಟುಮಾಡುವ ವೀರಾಜಪೇಟೆ ರಸ್ತೆಯ ವಿಸ್ತರಣೆಗೆ ಶಾಸಕ ಕೆ.ಜಿ.ಬೋಪಯ್ಯ ಒತ್ತಾಯಿಸಿದ್ದಕ್ಕಾಗಿ ನಾವು ತೀವ್ರ ನಿರಾಶೆಗೊಂಡಿದ್ದೇವೆ. ವೀರಾಜಪೇಟೆಯ ತೋರ ಗ್ರಾಮದಲ್ಲಿ ಆಗಸ್ಟ್ನಲ್ಲಿ ಸಂಭವಿಸಿದ ಭೂಕುಸಿತ ದಿಂದ ಪ್ರಾಣ ಮತ್ತು ಆಸ್ತಿ-ಪಾಸ್ತಿ ನಷ್ಟ ಇನ್ನು ಹಚ್ಚಹಸಿರಾಗಿರು ವಾಗಲೇ ಮತ್ತೊಂದು ದುರಂತಕ್ಕಾಗಿ ವಿನಾಶಕಾರಿ ಯೋಜನೆಯ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿರುವ ಅವರು ಕೊಡಗಿನ ಅನೇಕ ರಸ್ತೆಗಳು ಗುಂಡಿ ಬಿದ್ದು ದುಸ್ಥಿತಿಯಲ್ಲಿದ್ದು, ನೂರಾರು ಗ್ರಾಮೀಣ ರಸ್ತೆಗಳು ತೀರಾ ಶೋಚನಿಯ ಸ್ಥಿತಿಯಲ್ಲಿದೆ ಎಂದು ಗಮನ ಸೆಳೆದಿದ್ದಾರೆ.