ಮಡಿಕೇರಿ, ಡಿ. 22: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಮಡಿಕೇರಿ ಕೊಡವ ಸಮಾಜದ ವತಿಯಿಂದ ಇಂದು ಪುತ್ತರಿ ಊರೊರ್ಮೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಂಗವಾಗಿ ಕೊಡವ ಸಮಾಜದಲ್ಲಿ ಬೆಳಿಗ್ಗೆ ಉಪಾಧ್ಯಕ್ಷ ಚೋವಂಡ ಡಿ. ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ನಗರದ ಹಿರಿಯ ದಂತ ವೈದ್ಯ ಮೂಡೆರ ಅನಿಲ್ ಚಂಗಪ್ಪ ಪಾಲ್ಗೊಂಡಿದ್ದರು.

ಚೋವಂಡ ಡಿ. ಕಾಳಪ್ಪ ಮಾತನಾಡಿ, ಹಿರಿಯರು ಬೆಳೆಸಿದ ಸಂಸ್ಕøತಿ, ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ಕೊಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಮೂಡೆರ ಅನಿಲ್ ಚಂಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಅವರು, ಮಡಿಕೇರಿಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ನಗರದ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದ್ದರೂ ಕೂಡ ನೀವು ಯಾಕೆ ಸುಮ್ಮನಿದ್ದೀರಿ ಎಂದು ಹೊರ ಜಿಲ್ಲೆಯವರು ಪ್ರಶ್ನಿಸಿದಾಗ ಉತ್ತರಿಸಲು ಸಾಧ್ಯವಿಲ್ಲದಂತಾಗಿದೆ. ಈ ಕುರಿತು ಒಗ್ಗೂಡಿ ಸಮಸ್ಯೆಗಳ ವಿರುದ್ದ ಧ್ವನಿ ಎತ್ತುವ ಅವಶ್ಯಕತೆ ಇದೆ. ಸಮಾಜ ಒಂದು ವಿಚಾರದ ಬಗ್ಗೆ ಧ್ವನಿ ಎತ್ತಿದರೆ ಅದಕ್ಕೆ ಮನ್ನಣೆ ಸಿಗುವಂತಾಗಬೇಕು ಎಂದ ಅವರು, ಕೊಡವರು ತಮ್ಮ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು ಎಂದು ಹೇಳಿದರು.

ಗೌರವ ಕಾರ್ಯದರ್ಶಿ ಅರೆಯಡ ಪಿ. ರಮೇಶ್, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಮಾದೇಟಿರ ಪಿ.ಬೆಳ್ಯಪ್ಪ ಮತ್ತಿತರರು ಇದ್ದರು.

ಜನಪದ ಪ್ರದರ್ಶನ

ಕಾರ್ಯಕ್ರಮದ ಬಳಿಕ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್, ಒಡ್ಡೋಲಗ ಸಹಿತ ನಗರದಲ್ಲಿರುವ ಮಂದ್‍ಗೆ ತೆರಳಲಾಯಿತು. ಅಲ್ಲಿ ಕೋಲಾಟ್, ಉಮ್ಮತಾಟ್, ಬೊಳಕಾಟ್‍ನಂತಹ ಜನಪದ ನೃತ್ಯದ ಮೂಲಕ ಪುತ್ತರಿ ಊರೊರ್ಮೆಗೆ ತೆರೆಬಿತ್ತು.