ಪೆರಾಜೆ, ಡಿ. 22: ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿ ಪೆರಾಜೆ ವತಿಯಿಂದ 30ನೇ ವರ್ಷದ ದೀಪೋತ್ಸವವೂ ಶ್ರೀ ಶಾಸ್ತಾವು ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಬೆಳಿಗ್ಗೆ ಗಣಹೋಮ, ಶಾಸ್ತಾವು ದೇವರಿಗೆ ಮಹಾ ಪೂಜೆ, ಕೇರಳ ಚೆಂಡೆ ವಾದನದೊಂದಿಗೆ ಪಾಲ್‍ಕೊಂಬು, ಶಾಲಾ ಮಕ್ಕಳಿಂದ ಹೂ ದೀಪ ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಕೆ.ಎಸ್. ಗೌಡ ಸಂಸ್ಥೆ ನಿಂತಿಕಲ್ಲು ಇದರ ಉಪನ್ಯಾಸಕ ಅಜಿತ್ ಗೌಡ ಮಾತನಾಡಿ, ಅಯ್ಯಪ್ಪ ವ್ರತದಾರಿಯಾಗಿ ಭಸ್ಮವನ್ನು ತೊಡುವುದರಿಂದ ವೈಜ್ಞಾನಿಕವಾಗಿಯು ನಮಗೆ ಪ್ರಯೋಜನಕಾರಿ ಅಲ್ಲದೆ ಮಾಲೆ ತೊಡುವುದರಿಂದ ಶಿಸ್ತು, ಸಂಯಮ, ಸಮಯ ಪಾಲನೆ, ಆತ್ಮ ಶುದ್ಧತೆ ಜೊತೆಗೆ ಹೊಸತನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಾಜೆ ಅಯ್ಯಪ್ಪ ದೀಪೋತ್ಸವ ಸಮಿತಿ ಅಧ್ಯಕ್ಷ ಪೆರುಮುಂಡ ಬೋಜಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ಪೆರಾಜೆ ಶಾಸ್ತಾವು ದೇವಸ್ಥಾನದ ಮೊಕ್ತೇಸ ವಿಶ್ವನಾಥ ಕುಂಬಳಚೇರಿ, ಸಂಪಾಜೆ ಕಂದಾಯ ಪರಿವೀಕ್ಷಕ ಸದಾನಂದ ಮೂಲೆಮಜಲು, ಶ್ರೀನಿಧಿ, ಮನು ಪೆರುಮುಂಡ, ಕಾರ್ಯಕ್ರಮದ ಸ್ಥಳ ದಾನಿಗಳಾದ ಗೌತಮ್ ಸುಬ್ರಮಣ್ಯ ಮೂಲೆಮಜಲು ಉಪಸ್ಥಿತರಿದ್ದರು. ಈ ಸಂದರ್ಭ ನಿವೃತ್ತ ಸೈನಿಕ ವೀರಪ್ಪ ಗೌಡ ಪೀಚೆಮನೆ ಅವರನ್ನು ಸನ್ಮಾನಿಸಲಾಯಿತು. ಗಿನಿತ್ ಪಾತಿಕಲ್ಲು ಪ್ರಾರ್ಥಿಸಿ, ಅಶೋಕ ಪೀಚೆಮನೆ ಸ್ವಾಗತಿಸಿ, ಮೋಹನ್ ಪೆರುಮುಂಡ ನಿರೂಪಿಸಿದರು. ಯುವಾನಂದ ಪೆರಂಗಜೆ ವಂದಿಸಿದರು. ರಾತ್ರಿ ಅಗ್ನಿ ಸ್ಪರ್ಶ, ದೀಪಾರಾಧನೆ, ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆ, ಅಪ್ಪಸೇವೆ, ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಕಲಾ ಸಂಘ ಪೆರಾಜೆ ಇದರ ಬಾಲಕಲಾವಿದರಿಂದ ‘ತರುಣಿಸೇನ ಕಾಳಗ’ ಮತ್ತು ಪೆರಾಜೆ ಗ್ರಾಮದ ಹಿರಿಯ ಕಲಾವಿದರಿಂದ ‘ಸುದರ್ಶನ ವಿಜಯ’ ಎಂಬ ಯಕ್ಷಗಾನ ಬಯಲಾಟವನ್ನು ಆಡಿತೋರಿಸ ಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿ ಪೆರಾಜೆ ಇದರ ಕಾರ್ಯದರ್ಶಿಗಳಾದ ಸುರೇಶ್ ಪೆರುಮುಂಡ, ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು, ಶಾಸ್ತಾವು ದೇವಸ್ಥಾನದ ಅರ್ಚಕರು, ಅಯ್ಯಪ್ಪ ವ್ರತದಾರಿಗಳು, ಊರ ಹಾಗೂ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
- ಕಿರಣ್ ಕುಂಬಳಚೇರಿ