ಚಕ್ರವರ್ತಿ ಸೂಲಿಬೆಲೆ

ಕುಶಾಲನಗರ, ಡಿ 22: ಮನಸ್ಸಿನ ನಿಯಂತ್ರಣ ಮೂಲಕ ಯಾವುದೇ ಸಾಧನೆಗಳನ್ನು ಮಾಡಬಹುದು ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮರ್ಥ ಭಾರತ ನಿರ್ಮಾಣ ವಿಷಯದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸದೃಢ ಮನಸ್ಸಿನ ಮೂಲಕ ಸದೃಢ ದೇಹ ಬೆಳೆಸುವುದರೊಂದಿಗೆ ಸಮರ್ಥ ಭಾರತ ನಿರ್ಮಾಣದಲ್ಲಿ ಭಾಗಿ ಯಾಗಬಹುದು ಎಂದರು. ಸ್ವಾತಂತ್ರ್ಯ ಹೋರಾಟಗಾರರು, ದೇಶಭಕ್ತರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುವುದ ರೊಂದಿಗೆ ಉತ್ತಮ ಜ್ಞಾನ ಸಂಪಾದನೆ ಗಳಿಸಬೇಕು. ವಿದ್ಯಾರ್ಥಿ ಗಳು ಅನ್ಯ ಮಾರ್ಗದ ಸಂಪಾದನೆಗೆ ಚಿಂತನೆ ಹರಿಸದೆ ಸದಾಕಾಲ ಶ್ರಮವಹಿಸಿ ದುಡಿಯುವ ಪ್ರವೃತ್ತಿ ಹೊಂದಬೇಕು ಎಂದ ಅವರು, ಸರಕಾರದಿಂದ ದೊರೆಯುವ ಸವಲತ್ತು ಗಳನ್ನು ಸದುಪ ಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಗಳಿಸುವುದರೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿ ಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳು ಕೇಳಿದ ಪೌರತ್ವ ಕಾಯ್ದೆ ತಿದ್ದುಪಡಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಪ್ರಶ್ನೆಗಳಿಗೆ ಚಕ್ರವರ್ತಿ ಉತ್ತರಿಸಿ ಸಂಶಯ ನಿವಾರಿಸಿದರು. ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ, ಶಿಕ್ಷಕರಾದ ಕೆ.ಆರ್. ರಮೇಶ್, ಕರಿಯಪ್ಪ ಮತ್ತಿತರರು ಇದ್ದರು.