ಗೋಣಿಕೊಪ್ಪ, ಡಿ. 22: ಇಲ್ಲಿಗೆ ಸಮೀಪದ ಅತ್ತೂರಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾ ದಿನಾಚರಣೆಯನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಕುಂಞಪ್ಪ ಮೆಮೋರಿಯಲ್ ತುದಿಯಿಂದ ಶಾಲಾ ಕ್ರೀಡಾನಾಯಕರಾದ ಧನುಷ್, ಉಪನಾಯಕಿ ಮೌಲ್ಯ ಮಹೇಶ್ ಹಾಗೂ ಇತರ ಕ್ರೀಡಾಳುಗಳ ನೇತೃತ್ವದಲ್ಲಿ ಕ್ರೀಡಾ ಜ್ಯೋತಿಯು ಆಗಮಿಸಿತು. ಕ್ರೀಡಾ ಜ್ಯೋತಿಯನ್ನು ಶಾಲಾ ಟ್ರಸ್ಟಿ ರಕ್ಷಿತ್ ಅಯ್ಯಪ್ಪ ಹಾಗೂ ಪ್ರಾಂಶುಪಾಲ ಅರುಣ್‍ಕುಮಾರ್ ಸ್ವೀಕರಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಅರುಣ್‍ಕುಮಾರ್ ಕ್ರೀಡಾವಿಧಿ ಬೋಧಿಸಿದರು. ಬ್ಯಾಂಡ್ ಮಾಸ್ಟರ್ ರವಿಶಂಕರ್ ನೇತೃತ್ವದಲ್ಲಿ ಶಾಲೆಯ ನಾಲ್ಕು ತಂಡಗಳು ಬ್ಯಾಂಡ್‍ಗೆ ತಕ್ಕಂತೆ ಪಥಸಂಚಲನ ನಡೆಸಿ ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲರು, ಶೈಕ್ಷಣಿಕ ಕಾಲಘಟ್ಟದಲ್ಲಿ ಪಠ್ಯ ಹಾಗೂ ಪಠ್ಯೇತರ ಅಂಶಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಮತ್ತೊಂದಕ್ಕೆ ಮಹತ್ವವಿರುವುದಿಲ್ಲ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ಮೈಸೂರಿನ ಮನುಗೌಡ ಅವರ ತರಬೇತಿಯಲ್ಲಿ ಪಳಗಿದ್ದ ಶಾಲಾ ವಿದ್ಯಾರ್ಥಿಗಳು ಕ್ರೀಡೋತ್ಸವದಲ್ಲಿ ಸಂತಸದಿಂದ ಪಾಲ್ಗೊಂಡರು. ಮುತ್ತಣ್ಣ ಹಾಗೂ ಮುತ್ತಪ್ಪ ಅವರ ತೀರ್ಪುಗಾರಿಕೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಥ್ರೋಬಾಲ್, ಫುಟ್ಬಾಲ್ ಹಾಗೂ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಲಾಯಿತು. ಇದೇ ಸಂದರ್ಭ ಶಿಕ್ಷಕರ ತಂಡಗಳ ನಡುವೆ ಥ್ರೋಬಾಲ್, ಹ್ಯಾಂಡ್‍ಬಾಲ್ ಪಂದ್ಯಾವಳಿಗಳು ನಡೆಯಿತು. ಎರಡು ದಿನಗಳ ಕ್ರೀಡಾಚಟುವಟಿಕೆಗೆ ಅಂತಿಮವಾಗಿ ತೆರೆಎಳೆಯಲಾಯಿತು. ಶಿಕ್ಷಕ ಆ್ಯಲೆನ್‍ಟಾಮ್ ನಿರೂಪಿಸಿ, ಶಿಕ್ಷಕಿ ಫೆಲ್ಸಿಟಾಕ್ಲ್ಯಾಮಿ ವಂದಿಸಿದರು.

ಬ್ರಹ್ಮಗಿರಿ ಸಹೋದಯದ ಅಡಿಯಲ್ಲಿ ಅರಮೇರಿಯ ಎಸ್‍ಎಂಎಸ್ ವಿದ್ಯಾಪೀಠದಲ್ಲಿ ನಡೆದ ಕೆಸರು ಗದ್ದೆಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೌಲ್ಯ ಮಹೇಶ್, ಅನುಷ್ಕಾ, ಅರಿಲ್, ರಿಶಾ ನಾಣಯ್ಯ 4x100 ರಿಲೇಯಲ್ಲಿ ದ್ವಿತೀಯ, ಋತ್ವಿಕ್, ಚಿರಾಗ್, ಲಿಖಿತ್, ಶಿವಶಂಕರ್ 4x100 ರಿಲೇಯಲ್ಲಿ ತೃತೀಯ, ಋತ್ವಿಕ್ ಹಾಗೂ ಅರಿಲ್ ಟಿ.ಎಸ್. 100 ಮೀ. ಓಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಮಡಿಕೇರಿಯ ಬಿವಿಬಿಕೆವಿಯಲ್ಲಿ ನಡೆದ ಅಥ್ಲೆಟಿಕ್ಸ್‍ನಲ್ಲಿ ಭಾಗವಹಿಸಿದ ಮೌಲ್ಯ ಮಹೇಶ್, ಅರಿಲ್ ಓಟದ ಸ್ಪರ್ಧೆಯಲ್ಲಿ, ದಯಾನಂದ್ ಬಾರದಗುಂಡು ಎಸೆತದಲ್ಲಿ, ಋತ್ವಿಕ್ ಉದ್ದ ಜಿಗತದಲ್ಲಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಮಡಿಕೇರಿಯಲ್ಲಿ ನಡೆದ ಅಖಿಲ್ ಕುಟ್ಟಪ-ಅಶ್ವಥ್ ಅಯ್ಯಪ್ಪ ಸಹೋದರರ ಜ್ಞಾಪಕಾರ್ಥ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಲಾ ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕ ಮೈಸೂರಿನ ಮನುಗೌಡ ಅವರ ತರಬೇತಿಯಲ್ಲಿ ಭಾಗವಹಿಸಿದ್ದರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.