ಲೋಪಾಮುದ್ರೆ-ಅಗಸ್ತ್ಯರ ವಿವಾಹ ಸಂಭ್ರಮ ಮುಗಿಯಿತು. ಸಾಮಾನ್ಯ ಮಾನವರಲ್ಲಿ ವಿವಾಹದ ಬಳಿಕ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ನಡೆಯುತ್ತವೆ. ಬಂಧುಗಳಿಗೆ ಔತಣ ಕೂಟಗಳು, ಮನೆ ಮಗಳನ್ನುತವರು ಮನೆಯಿಂದ ಬೀಳ್ಕೊಡುವದು, ಪತಿಯ ಮನೆ ಸೇರುವದು, ಅಲ್ಲಿ ಸ್ವಾಗತ ಕಾರ್ಯಕ್ರಮಗಳು-ಹೀಗೇ ಅದರ ಕೊಂಡಿ ಮುಂದುವರಿಯುತ್ತದೆ. ಆದರೆ, ಮಹಾನ್ ಅವತಾರ ವ್ಯಕ್ತಿಗಳಿಗೆ ಈ ಯಾವದೂ ಅನ್ವಯವಾಗದು. ಅವರು ಜನ್ಮತಾಳಿದ ಉದ್ದೇಶ ಈಡೇರಿಕೆ, ಲೋಕ ಕಲ್ಯಾಣಾರ್ಥ ಕಾರ್ಯಕ್ರಮಗಳಿಗೆ ಮಾತ್ರ ಅವರ ಜೀವನ ಕ್ರಮ ನಡೆಯುತ್ತದೆ. ವಿವಾಹವಾಗುವದಕ್ಕೂ ಲೋಕ ಹಿತ ಚಿಂತನೆಯ ಗುರಿಯಿರುತ್ತದೆ. ದಾರ್ಶನಿಕರೆನಿಸಿಕೊಂಡಿರುವ ಇಂತಹ ಮಹಾನ್ ವ್ಯಕ್ತಿಗಳು ಪ್ರಾಪಂಚಿಕ ಸುಖದಲ್ಲಿ ಮುಳುಗುವದಿಲ್ಲ. ಅದೆಲ್ಲವನ್ನೂ ಕರ್ತವ್ಯದಂತೆ ಮಾಡುತ್ತ ತಾವು ಜನಿಸಿದ ಮೂಲ ಉದ್ದೇಶದತ್ತ ಹೆಜ್ಜೆಯಿಡುತ್ತ ಸಾಗುತ್ತಾರೆ. ಲೋಕೋಪಕಾರದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ.
ಅದೇ ರೀತಿ ಅಗಸ್ತ್ಯ-ಲೋಪಾಮುದ್ರೆಯರ ಜೋಡಿ ಪರಸ್ಪರ ಅರ್ಥೈಸಿಕೊಂಡು ಮೇಲ್ನೋಟಕ್ಕೆ ಸಾಮಾನ್ಯ ವ್ಯಕ್ತಿಗಳಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಾರೆ. ಆದರೆ, ಅಧ್ಯಾತ್ಮಿಕ ರಹಸ್ಯದಲ್ಲಿ ಅವರ ಪ್ರತಿಯೊಂದು ನಡೆಯೂ ಅರ್ಥಗರ್ಭಿತ, ನ್ಯಾಯ ಸಮ್ಮತ, ಸಂದರ್ಭೋಚಿತ, ವಿಶ್ವ ಹಿತ ಪ್ರೇರಿತ. ಸೃಷ್ಟಿ, ಸ್ಥಿತಿ, ಲಯ ಕರ್ತೃಗಳಾದ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವರಂತೆ ಅಗಸ್ತ್ಯರ ಪ್ರಭಾವವಿದ್ದರೆ, ತ್ರಿಮೂರ್ತಿ ಪತ್ನಿಯರಾದ ಶಾರದೆ, ಲಕ್ಷ್ಮಿ, ಗೌರಿಯರ ಪಾತ್ರದಂತೆ ಸ್ವಯಂಶಕ್ತಿಯೊಂದಿಗೆ ಪತಿಯ ಪ್ರಭಾವವನ್ನೂ ಒಳಗೊಂಡ ಮಹಾನ್ ಸತಿಯೇ ಲೋಪಾಮುದ್ರೆ.
ವಿವಾಹಾನಂತರ ಲೋಕ ಸುಂದರಿ, ರಾಜ ಕುವರಿ ಲೋಪಾಮುದ್ರೆ ತನ್ನ ಪೋಷಕರಿಂದ ಏನನ್ನೂ ಬಯಸುವದಿಲ್ಲ. ಅವಳು ವಿವಾಹ ಸಂದರ್ಭ ಅತ್ಯಮೂಲ್ಯ ವಸ್ತ್ರವನ್ನು ಧರಿಸಿರುತ್ತಾಳೆ, ಕಣ್ಣು ಕೋರೈಸುವ ಬೆಲೆಬಾಳುವ ಅತ್ಯಾಕರ್ಷಕ ವಿನ್ಯಾಸದ ಆಕರ್ಷಕ ರತ್ನಾಭರಣಗಳನ್ನು ಧರಿಸಿರುತ್ತಾಳೆ. ವಿವಾಹ ಕಾರ್ಯ ಮುಗಿದ ಬಳಿಕ ಲೋಪಾ ಮುದ್ರೆಯೊಂದಿಗೆ ಪತಿ ಅಗಸ್ತ್ಯರು ಹೇಳುತ್ತಾರೆ “ಲೋಪಾಮುದ್ರೆ, ಅರಣ್ಯವಾಸಿಗಳಾದ ನಮಗೆ ಬಹುಮೌಲ್ಯಗಳಾದ ಈ ಅಮೂಲ್ಯ ವಸ್ತ್ರಗಳಿಂದಾಗಲೀ, ದಿವ್ಯಾಭರಣಗಳಿಂದಾಗಲೀ ಪ್ರಯೋಜನವಿಲ್ಲ. ಆದುದರಿಂದ ನೀನೀಗಲೇ ಈ ಆಭರಣಗಳನ್ನೂ, ರಾಜ ಮನೆತನದ ವಸ್ತ್ರಗಳನ್ನೂ ಇಲ್ಲಿಯೇ ಪರಿತ್ಯಜಿಸು. ಅರಣ್ಯವಾಸಕ್ಕೆ ಉಚಿತವಾದ ನಾರುಮಡಿಯನ್ನು ಧರಿಸುವವಳಾಗು”
ಈ ಸನ್ನಿವೇಶ ಅವತಾರ ಪುರುಷ, ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಸೀತೆಯರ ಚರಿತ್ರೆಯನ್ನು ನೆನಪಿಸುತ್ತದೆ. ತನ್ನ ತಂದೆ ದಶರಥನಿಗೆ ಕೊಟ್ಟ ಮಾತಿನಂತೆ ಶ್ರೀರಾಮನು ವನವಾಸಕ್ಕೆ ಹೊರಡಲನುವಾಗುತ್ತಾನೆ, ಅದಕ್ಕೋಸ್ಕರ ಕಾಷಾಯ ವಸ್ತ್ರಗಳನ್ನು ಉಟ್ಟುಕೊಳ್ಳುತ್ತಾನೆ. ಇದನ್ನು ನೋಡಿದ ಪತ್ನಿ ಸೀತೆ ಆತನನ್ನೇ ಅನುಸರಿಸಲು ನಿರ್ಧರಿಸುತ್ತಾಳೆ. ತಾನೂ ನಾರು ಮಡಿಯನ್ನುಟ್ಟು ಪತಿ ಶ್ರೀ ರಾಮನನ್ನು ಕಾಡಿನಲ್ಲಿ ನೆರಳಿನಂತೆ ಹಿಂಬಾಲಿಸುತ್ತಾಳೆ. ಅದೇ ರೀತಿಯಲ್ಲಿ ಅಗಸ್ತ್ಯರ ಸೂಚನೆಯನ್ನು ಗ್ರಹಿಸಿದ ಸಾಧ್ವಿಯಾದ ಸುಕೋಮಲೆ ನವವಿವಾಹಿತೆ ಲೋಪಾಮುದ್ರೆಯು ಮರು ಮಾತನಾಡದೆ ತಕ್ಷಣವೆ ಅಮೂಲ್ಯವಾದ ವಸ್ತ್ರಾಭರಣಗಳೆಲ್ಲವನ್ನೂ ಪರಿತ್ಯಜಿಸಿ ನಾರು ಮಡಿಯ ಬಟ್ಟೆಯನ್ನುಟ್ಟು ಕೊಂಡು ಹೊರಡಲು ಸಿದ್ಧಳಾದಳು. ವಿದರ್ಭ ರಾಜ ಹಾಗೂ ಮಹಾರಾಣಿ ಆ ಸಂದರ್ಭ ನಿರಾಭರಣಿಯಾಗಿ ನಾರು ಮಡಿಯನ್ನು ಟ್ಟಿದ್ದ ತಮ್ಮ ಪುತ್ರಿಯನ್ನು ಅಗಲುವ ಅನಿವಾರ್ಯತೆಗಾಗಿ ಮನಸ್ಸನ್ನು ನಿಯಂತ್ರಿಸಿಕೊಳ್ಳುವದರೊಂದಿಗೆ ಮಹಾನ್ ತಪಸ್ವಿ ಅಗಸ್ತ್ಯರೊಂದಿಗೆ ಲೋಪಾಮುದ್ರೆ ತೆರಳಲು ಬೀಳ್ಕ್ಕೊಟ್ಟರು.
ಬಳಿಕ ಅಗಸ್ತ್ಯ ಮಹರ್ಷಿಗಳು ವಿದರ್ಭ ರಾಜ್ಯದಿಂದ ಲೋಪಾಮುದ್ರೆಯೊಡನೆ ಹೊರಟು ಗಂಗಾದ್ವಾರವನ್ನು ಸೇರಿದರು. ತನಗೆ ಅನುಕೂಲಳಾಗಿದ್ದ ತಮ್ಮ ಪತ್ನಿಯ ಸಹಕಾರದಿಂದ ಅಗಸ್ತ್ಯರು ಗಂಗಾ ದ್ವಾರದಲ್ಲಿ ಉಗ್ರವಾದ ತಪಸ್ಸು ಮಾಡಿದರು. ಲೋಪಾಮುದ್ರೆಯು ಪತಿ ಅಗಸ್ತ್ಯರ ವಿಷಯದಲ್ಲಿ ಪರಮ ಪ್ರೀತಳಾಗಿ ದ್ದಳು. ತನ್ನ ಪತಿಯು ಮಾಡು ತ್ತಿದ್ದ ಉಗ್ರ ತಪಸ್ಸಿ ನಿಂದ ಆಕೆಯ ವರ್ಚಸ್ಸೂ ಕೂಡ ಹೆಚ್ಚಲಾರಂಭಿಸಿತ್ತು. ಅವರಿಗೆ ತಪೋಭಂಗ ವಾಗದಂತೆ ನೋಡಿಕೊಳ್ಳುತ್ತ ಎಡೆಬಿಡದೆ ಉಪಚರಿಸುತ್ತಿದ್ದಳು. ಮಹಾತ್ಮರಾದ ಅಗಸ್ತ್ಯರೂ ಕೂಡ ಪತ್ನಿಯಾದ ಲೋಪಾಮುದ್ರೆಯ ವಿಚಾರದಲ್ಲಿ ಅತೀವ ಅನುರಾಗ ಹೊಂದಿದ್ದರು.
ಅಗಸ್ತ್ಯ-ಲೋಪಾಮುದ್ರೆಯರ ಆ ಪ್ರೇಮಮಯವಾದ ತಪೋಜೀವನವು ಬಹುದಿನಗಳವರೆಗೆ ಹೀಗೆಯೇ ಕಳೆಯಿತು. ರಾಜಕುಮಾರಿಯಾದ ಲೋಪಾಮುದ್ರೆಯೂ ಸಹ ತಪಸ್ವಿನಿಯೇ ಆಗಿಬಿಟ್ಟಳು. ಕಾಲಕ್ರಮೇಣ ಒಂದೊಮ್ಮೆ ತಪಸ್ಸ್ಸಿಗೆ ಸ್ವಲ್ಪ ವಿರಾಮವಾದಂತೆ ಕಂಡುಬಂದಿತು. ಈ ನಡುವೆ ಲೋಪಾಮುದ್ರೆ ಋತುಮತಿಯಾಗಿ ಋತು ಸ್ನಾನ ಪೂರೈಸುತ್ತಿದ್ದಂತೆ ಅಗಸ್ತ್ಯರಿಗೆ ಆಕೆಯ ನೈಜ ಸೌಂದರ್ಯದ ದರ್ಶನವಾಗುತ್ತದೆ. ಆಕೆ ತನ್ನ ತಪೋ ಸಂದರ್ಭ ನಡೆಸುತ್ತಿದ್ದ ಅಮೋಘ ಸೇವೆ ಅವರ ಮನ;ಪಟಲದಲ್ಲಿ ಅಚ್ಚೊತ್ತಿ ಬಿಟ್ಟಿರುತ್ತದೆ. ಅಂತರಂಗ ದಲ್ಲಿಯೂ, ಬಹಿರಂಗದಲ್ಲಿಯೂ ಆಕೆ ಪರಿಶುದ್ಧಳಾಗಿರುವದನ್ನು ಮಹರ್ಷಿ ಗಮನಿಸುತ್ತಾರೆ. ತನ್ನ ಅಪಾರ ಸೌಂದರ್ಯದ ನಡುವೆಯೂ ಅವಳ ಜಿತೇಂದ್ರಿಯತೆ ಅವರನ್ನು ಅಚ್ಚರಿಗೊಳಿಸುತ್ತದೆ. ತನ್ನ ನಿರಂತರ ತಪಸ್ಸಿನ ಸಂದರ್ಭ ಎಲ್ಲ ಅನುಕೂಲಗಳನ್ನು ಕಲ್ಪಿಸಿ ಸಹಕರಿಸಿದ ಪತ್ನಿ ಲೋಪಾಮುದ್ರೆ ಒಮ್ಮೆಯೂ ಕೂಡ ತನ್ನ ತಪಸ್ಸಿಗೆ ಅಡ್ಡಿಯಾಗು ವಂತಹ ನಡತೆ ತೋರಲಿಲ್ಲ ಎಂಬದು ಅವರಿಗೆ ಆಕೆಯಲ್ಲಿರುವ ಇಂದ್ರಿಯ ಹಾಗೂ ಮನೋ ನಿಗ್ರಹದ ಶಕ್ತಿಯನ್ನು ಸಾಕ್ಷೀಕರಿಸುತ್ತದೆ. ಅವಳ ಸೌಂದರ್ಯ ಮತ್ತು ಸದ್ಗುಣ-ಈ ಎರಡಕ್ಕೂ ಅವರು ಮಾರು ಹೋಗುತ್ತಾರೆ. ಇದುವರೆಗೆ ಯಾವ ಸ್ತ್ರೀಯಿಂದಲೂ ಆಕರ್ಷಿತರಾಗದ ಆ ತಪೋ ಮಹಿಮರು ತನ್ನ ಧರ್ಮಪತ್ನಿ ಲೋಪಾಮುದ್ರೆಯಿಂದ ಪ್ರಥಮ ಬಾರಿಗೆ ಆಕರ್ಷಿತರಾಗುತ್ತಾರೆ. ತನ್ನೊಂದಿಗೆ ಸುರತ ಕ್ರಿಯೆ ನಡೆಸುವಂತೆ ಅವರು ಪ್ರೇಮಮಯರಾಗಿ ಆಹ್ವಾನಿಸುತ್ತಾರೆ. ಇದುವರೆಗೂ ತಪಸ್ಸಿನಲ್ಲಿ ತಲ್ಲೀನರಾಗಿದ್ದ ಪತಿ ಇದೀಗ ಸಂಪೂರ್ಣ ವಾಗಿ ತಪಸ್ಸಿನಿಂದ ಹೊರಬಂದು ತನ್ನನ್ನು ಪ್ರೇಮಾಲಿಂಗನಕ್ಕೆ ಕರೆದಾಗ ಲೋಪಾಮುದ್ರೆ ಒಮ್ಮೆಲೇ ನಾಚಿಕೊಳ್ಳುತ್ತಾಳೆ. ವಿವಾಹವಾದ ಬಳಿಕ ಪ್ರಥಮ ಸಮಾಗಮಕ್ಕೆ ಅಗಸ್ತ್ಯರು
ಇಚ್ಛೆ ಪಟ್ಟಾಗ ಆಕೆ ಲಜ್ಜೆಯಿಂದಲೇ ತಲೆ ತಗ್ಗಿಸಿ ಪ್ರಣಯ ಪೂರ್ವಕವಾದ ಈ ಮಾತುಗಳ ನ್ನಾಡುತ್ತಾಳೆ:-
ಮಹರ್ಷೇ, ಮಕ್ಕಳನ್ನು ಪಡೆಯುವ ಸಲುವಾಗಿ ಪುರುಷರು ವಿವಾಹ ವಾಗುತ್ತಾರೆಂಬುದರಲ್ಲಿ
ಸಂಶಯವಿಲ್ಲ. ಆದರೆ, ಕೇವಲ ಸಂತಾನಾರ್ಥವಾಗಿ ಸಮಾಗಮವಾಗಬೇಕು ಎಂದರೆ ಅದು ಬರೀ ಇತರ ಕೆಲಸಗಳಂತೆಯೇ ಒಂದು ಕರ್ತವ್ಯ ಎಂದೆನಿಸಿಕೊಂಡು ಬಿಡುತ್ತದೆ. ಭಾವನಾತ್ಮಕ ಪ್ರೇಮಕ್ಕಿಂತ ಯಾಂತ್ರೀಕೃತ ಸೇರ್ಪಡೆ ಎನಿಸಿಬಿಡುತ್ತದೆ. ಸಂತಾನವಾಗ ಬೇಕಾದುದು ಎಷ್ಟು ಅವಶ್ಯಕತೆಯೋ ಅಷ್ಟೇ ಪ್ರಮುಖ ವಾಗಿ ಪ್ರೇಮ ಪೂರ್ವಕವಾದ ಸಮಾಗಮವೂ ನಡೆಯಬೇಕಿದೆ. ನಾನು ನಿಮ್ಮಿಂದ ನಿಜಕ್ಕೂ ವ್ಯಾಮೋಹಿತಳಾಗಿದ್ದೇನೆ, ನೀವೂ ಕೂಡ ನನ್ನಲ್ಲಿ ವ್ಯಾಮೋಹಿತರಾಗಲು ಕೇಳಿಕೊಳ್ಳುತ್ತೇನೆ. ನಾನು ವಿವಾಹಕ್ಕೆ ಮೊದಲು ನನ್ನ ತಂದೆಯ ಅರಮನೆಯಲ್ಲಿ ಹಂಸತೂಲಿಕಾ ತಲ್ಪದಲ್ಲಿ ವಿರಮಿಸುತ್ತಿದ್ದೆ. ಇದೀಗ ಅಂತಹ ಹಂಸತೂಲಿಕಾ ತಲ್ಪದ ಮಂಚದ ಮೇಲೆಯೇ ನಿಮ್ಮೊಡನೆ ರಮಿಸಲು ಇಚ್ಛಿಸುತ್ತೇನೆ. ಮಾತ್ರವಲ್ಲ, ನೀವು ಈಗ ಇರುವ ಕಾಷಾಯವಸ್ತ್ರ ಧರಿಸಿ ಈ ಸಮಾಗಮವಾಗುವದು ಬೇಡ. ನಿಮ್ಮ ಜಟಾಜೂಟಗಳನ್ನು ವರ್ಜಿಸಿ ಉತ್ತಮವಾದ ವಸ್ತ್ರಗಳಿಂದಲೂ, ದಿವ್ಯಾಭರಣಗಳಿಂದಲೂ, ದಿವ್ಯ ಮಾಲೆಗಳಿಂದಲೂ ಅಲಂಕರಿಸಿಕೊಳ್ಳಬೇಕು.ಅಲ್ಲದೆ, ಪರಿಮಳಯುಕ್ತ ದಿವ್ಯ ಗಂಧಾದಿಗಳಿಂದ ನಿಮ್ಮ ಶರೀರವನ್ನು ಲೇಪಿಸಿಕೊಳ್ಳಬೇಕು. ನಾನೂ ಕೂಡ ನಿಮ್ಮೊಂದಿಗೆ ರಮಿಸಬೇಕಾದರೆ, ಈಗಿರುವ ಈ ನಾರು ಮಡಿಯ ಬಟ್ಟೆಯನ್ನು ವರ್ಜಿಸುತ್ತೇನೆ. ನನಗೆ ಆಸಕ್ತಿಯುಳ್ಳಂತಹ ದಿವ್ಯಾಭರಣಗಳಿಂದಲೂ, ಉತ್ತಮ ವಸ್ತ್ರಗಳಿಂದಲೂ ಅಲಂಕರಿಸಿಕೊಳ್ಳ್ಳುತ್ತೇನೆ. ಪರಿಮಳಯುಕ್ತ ಗಂಧವನ್ನು ಲೇಪಿಸಿಕೊಳ್ಳುತ್ತೇನೆ. ನಾನು ಸರ್ವಾಲಂಕಾರ ಭೂಷಿತೆಯಾಗಿ ರಾಜಕುವರಿಯಂತೆಯೇ ಸಿದ್ಧಗೊಳ್ಳುತ್ತೇನೆ. ಬಳಿಕವಷ್ಟೇ ನಾವಿಬ್ಬರೂ ಮನ:ಪೂರ್ವಕವಾಗಿ ಅನಂದದಾಯಕ ವಾತಾವರಣದಲ್ಲಿ ಪರಸ್ಪರ ಸಮ್ಮಿಲನಗೊಳ್ಳಲು ಸಾಧ್ಯ. ಈಗ ಇರುವ ಸ್ಥಿತಿಯಲ್ಲಿ ನಾವು ಪ್ರೇಮ ಪ್ರಕ್ರಿಯೆ ನಡೆಸುವದು ಅಸಾಧ್ಯ ಎಂದು ಲೋಪಾಮುದ್ರೆ ದಂಪತಿಯ ನಡುವೆ ಇರಬೇಕಾದ ನೈಜ ಪ್ರೇಮ ಸಲ್ಲಾಪ ಪ್ರಕ್ರಿಯೆ ಕುರಿತು ನೇರವಾಗಿ, ಸಹಜವಾಗಿ, ಮುಕ್ತ ಮಾತಿನಲ್ಲಿ ತನ್ನ ಮನದಿಂಗಿತವನ್ನು ತೆರೆದಿಡುತ್ತಾಳೆ. ಮಾತೃಭಾಷೆ ಸಂಸ್ಕøತದಲ್ಲಿ ಅವಳ ಅಭಿಪ್ರಾಯ ಹೀಗೆ ತಿಳಿಸುತ್ತಾಳೆ :-ನೈವಾಪವಿತ್ರೋ ವಿಪ್ರರ್ಷೇ ಭೂಷಣೋಯಂ ಕಥಂಚನ-ಅಂದರೆ, ರತಿಕಾಲದಲ್ಲಿ ಉತ್ತಮ ವಸ್ತ್ರಗಳನ್ನೂ, ದಿವ್ಯಾಭರಣಗಳನ್ನೂ ಧರಿಸುವದು ಯಾವ ರೀತಿಯಲ್ಲಿಯೂ ಅಪವಿತ್ರವೆನಿಸುವದಿಲ್ಲ. ಆಸಮಯದಲ್ಲಿ ಅಲಂಕಾರವು ಒಂದು ಮುಖ್ಯವಾದ ಅಂಗವೆನಿಸುವದು. ಮೂಲಾರ್ಥ ವೆಂದರೆ, ಈ ನಾರುಮಡಿ, ಕಾಷಾಯ ವಸ್ತ್ರಗಳು ಪರಸ್ಪರ ಸಮ್ಮಿಲನ ಸಮಯದಲ್ಲಿ ಅಪವಿತ್ರವಾಗಬಾರದು ಎಂದು ಲೋಪಾಮುದ್ರೆ ತನ್ನ ಮನದಿಂಗಿತವನ್ನು ತಿಳಿಸುತ್ತ್ತಾಳೆ. ತಪೋ ಸಮಯದಲ್ಲಿ ವ್ರತಧಾರಿಗಳಾಗಿ ಯಾವ ರೀತಿಯಿರಬೇಕು, ಸುರತ ಸಂದರ್ಭದ ಮಾನಸಿಕ, ದೈಹಿಕ ತಯಾರಿ ಯಾವ ರೀತಿ ಇರಬೇಕು. ಹಾಗಿದ್ದರೆ ಮಾತ್ರ ಆಯಾ ಸಂದರ್ಭಗಳ ಮನೋರಥ ಈಡೇರುತ್ತದೆ. ದೈವ ಕಾರ್ಯವೇ ಬೇರೆ, ದೈಹಿಕ ಬಯಕೆಗಳ ಈಡೇರಿಕೆಯೇ ಬೇರೆ ಎಂಬದನ್ನು ರಾಜಕುವರಿ ಮಹರ್ಷಿಗಳಿಗೆ ತಿಳಿಸುತ್ತಾಳೆ. ಲೋಪಾಮುದ್ರೆ ಈ ಎಲ್ಲ ವಿಷಯಗಳಲ್ಲಿ, ಸಮರ್ಪಕ ಪರಿಜ್ಞಾನ ಹೊಂದಿದ್ದಳು, ಸೂಕ್ತವಾದ ಅಧ್ಯಯನ ನಡೆಸಿದ್ದಳು. ಒಂದೆಡೆ ಧಾರ್ಮಿಕ ವಿಧಿವಿಧಾನಗಳ ಮಹಾನ್ ಜ್ಞಾನದಿಂದ ಆಕೆ ತಪೋನಿಷ್ಠರಾದ ಅಗಸ್ತ್ಯರಿಗೆ ಸಮರ್ಪಕವಾದ ನೆರವನ್ನು ಅವರ ತಪೋ ವ್ರತಗಳ ಸಂದರ್ಭ ಒದಗಿಸಿದ್ದಳು, ಇನ್ನೊಂದೆಡೆ, ದೈಹಿಕ ಸಮಾಗಮಕ್ಕೆ ಮುನ್ನ ಯಾವ ರೀತಿಯ ತಯಾರಿ, ಸೂಕ್ತ ವಾತಾವರಣ ಇರಬೇಕೆಂಬದರ ಬಗ್ಗೆ ತನ್ನ ಪತಿ ಮಹರ್ಷಿಗಳಿಗೆ ತಾನೇ ತಿಳುವಳಿಕೆ ನೀಡಿದಳು. ಅಂದರೆ ಆಕೆಯ ಸಾಂದರ್ಭಿಕ ಪಾತ್ರ, ವರ್ತನೆ, ಕಾರ್ಯಕ್ಷಮತೆ ಅತ್ಯದ್ಭುತ, ಆಶ್ಚರ್ಯಕರ.