ಋಷಿ ಮುನಿಗಳ ಸಭೆಯಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ರಲ್ಲಿ ಯಾರು ಶ್ರೇಷ್ಠರು ? ಎಂಬ ವಿಷಯ ಚರ್ಚೆಗೆ ಬರುತ್ತದೆ. ಋಷಿಗಳ ನಡುವೆ ಒಮ್ಮತ ಮೂಡದ ಕಾರಣ ತ್ರಿಮೂರ್ತಿ ಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಪರೀಕ್ಷಿಸಿ ನಂತರ ನಿರ್ಧಾರ ಮಾಡುವ ಜವಾಬ್ದಾರಿ ಯನ್ನು ಭೃಗು ಮಹರ್ಷಿಗೆ ವಹಿಸಲಾಯಿತು. ತುಂಬ ಯೋಚಿಸಿದ ನಂತರ ಒಂದು ಶುಭ ದಿನ ತ್ರಿಮೂರ್ತಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಒಬ್ಬೊಬ್ಬರನ್ನು ಒಂದೊಂದು ರೀತಿ ಪರೀಕ್ಷಿಸುವ ಎಂದು ಭೃಗು ಮಹರ್ಷಿ ನಿರ್ಧರಿಸಿದ.
ಮೊದಲು ಬ್ರಹ್ಮನ ಬಳಿ ಹೋದ. ತನ್ನ ಬಳಿ ಬಂದ ಭೃಗುವನ್ನು ಕಂಡು ಬ್ರಹ್ಮನಿಗೆ ಸಂತೋಷವಾಯಿತು. ಆದರೆ ಏನೂ ಮಾತನಾಡದೇ ಕಲ್ಲು ಗಂಬದಂತೆ ನಿಂತಿದ್ದ ಮಹರ್ಷಿ ಯನ್ನು ಕಂಡು ಆಶ್ಚರ್ಯ ವಾಯಿತು. ಯಾವ ರೀತಿಯ ಪ್ರತಿಕ್ರಿಯೆಯನ್ನು ತೋರದೆ ಭೃಗು ಮಹರ್ಷಿ ಬ್ರಹ್ಮನನ್ನು ನೋಡಿಯೂ ನೋಡದಂತೆ ಕಲ್ಲಿನ ಪ್ರತಿಮೆಯ ರೀತಿ ನಿಂತು ಕೊಂಡ. ತನಗೆ ವಂದಿಸದೇ, ಸುಮ್ಮನೆ ಅವಿಧೇಯ ವಿದ್ಯಾರ್ಥಿ ಯಂತೆ ನಿಂತುಕೊಂಡಿದ್ದ ಭೃಗುವನ್ನು ಕ್ಷಣಕಾಲ ನೋಡಿದ ಬ್ರಹ್ಮನಿಗೆ ಕೋಪ ಬಂತು. ಆದರೂ ಅದನ್ನು ತೋರ ಗೊಡದೆ, ಮಗನನ್ನು ಕ್ಷಮಿಸುವ ಪಾಲಕನಂತೆ ಕೋಪವನ್ನು ನಿಗ್ರಹಿಸಿಕೊಂಡ. ಬ್ರಹ್ಮನ ಭಾವನೆಗಳನ್ನು ಅರ್ಥ ಮಾಡಿ ಕೊಂಡ ಭೃಗು ತನ್ನ ಪರೀಕ್ಷೆ ಯಲ್ಲಿ ಬ್ರಹ್ಮ ಪಾಸಾಗಲಿಲ್ಲ ಎಂದು ಮನಸ್ಸಿನಲ್ಲಿ ನಿರ್ಧರಿಸಿ ಏನೂ ಮಾತನಾಡದೆ ಬ್ರಹ್ಮ ನೋಡುತ್ತಿರುವಂತೆಯೇ ಅಲ್ಲಿಂದ ನಿರ್ಗಮಿಸಿದ.
ಎರಡನೇ ಪರೀಕ್ಷಾರ್ಥಿ ಯನ್ನು ಭೇಟಿ ಮಾಡಲು ಕೈಲಾಸದೆಡೆ ಹೊರಟ. ತನ್ನ ಬಳಿ ಬರುತ್ತಿರುವ ಮಹರ್ಷಿ ಯನ್ನು ಎದುರ್ಗೊಳ್ಳಲು ಶಿವ ತನ್ನ ಪೀಠದಿಂದ ಇಳಿದು ಬಂದ. ತನ್ನ ಬಳಿ ಬರುತ್ತಿರುವ ಶಿವನನ್ನು ನೋಡಿದ ಭೃಗು ಕೈ ಸನ್ನೆಯಿಂದ ಅಲ್ಲಿಯೇ ನಿಲ್ಲುವಂತೆ ಸೂಚಿಸಿ, ನಿಮಗೆ ಯಾವ ಸಂಪ್ರದಾಯವೂ ಗೊತ್ತಿಲ್ಲ. ಇಷ್ಟ ಬಂದಂತೆ ಅಲೆಯುತ್ತಿರುತ್ತೀರಿ. ಸ್ಮಶಾನದಲ್ಲಿ ವಾಸ ಮಾಡಿ ಕೊಂಡು ಮೈಗೆಲ್ಲಾ ಬೂದಿ ಬಳಿದು ಕೊಂಡು ಕೊಳಕಾಗಿ ಇರುತ್ತೀರಿ. ಎಂದೆಲ್ಲ ಹೇಳತೊಡಗಿದ. ತನ್ನ ಲೋಕಕ್ಕೆ ಬಂದ ಮಹರ್ಷಿಯನ್ನು ಆಲಿಂಗಿಸಿ, ಆತ್ಮೀಯ ಸ್ವಾಗತ ನೀಡುವ ಉತ್ಸಾಹದಿಂದಿದ್ದ ಶಿವನಿಗೆ ಭೃಗುವಿನ ಮಾತನ್ನು ಕೇಳುತ್ತಿದ್ದಂತೆ ಅಸಾಧ್ಯ ಕೋಪ ಬಂತು. ತನ್ನ ಮೂರನೇ ಕಣ್ಣನ್ನು ತೆರೆದು ಭೃಗುವನ್ನು ಸುಟ್ಟು ಅಲ್ಲಿಯೇ ಬೂದಿ ಮಾಡಲಿದ್ದ ಶಿವನನ್ನು ಪಾರ್ವತಿ ತಡೆದಳು. ಸದ್ಯ ಬಚಾವಾದನೆಂದು ಮನಸ್ಸಿನಲ್ಲಿಯೇ ಭಾವಿಸಿದ ಋಷಿ ತನ್ನ ಪರೀಕ್ಷೆಯಲ್ಲಿ ಶಿವನನ್ನು ಅನುತ್ತೀರ್ಣಗೊಳಿಸಿ ಮುಂದಿನ ಪರೀಕ್ಷಾ ಕೇಂದ್ರವಾದ ವೈಕುಂಠದೆಡೆ ಹೊರಟ.
ಬ್ರಹ್ಮನ ಬಳಿ ಏನೂ ಮಾತನಾಡಲಿಲ್ಲ. ಗೌರವ ಕೊಡದೇ ಅವೀಧೇಯನಾಗಿ ವರ್ತಿಸಿದೆ. ಶಿವನ ಬಳಿ ಉದ್ಧಟತನದಿಂದ ಮಾತನಾಡಿ ಕೆಣಕಿದೆ. ನಾರಾಯಣನ ಬಳಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪರೀಕ್ಷಿಸುವ ಎಂದು ಯೋಚಿಸುತ್ತಾ ವಿಷ್ಣುವಿನ ಲೋಕಕ್ಕೆ ಕಾಲಿರಿಸಿದ. ವಿಷ್ಣುವಿನ ಪತ್ನಿ ಲಕ್ಷ್ಮಿ ಪತಿಸೇವೆ ಮಾಡುತ್ತಾ ಪಾದದ ಬಳಿ ಕುಳಿತಿದ್ದಳು. ವಿಷ್ಣುವಿನ ಬಳಿ ತೆರಳಿದ ಭೃಗು ಏನೂ ಮಾತನಾಡದೇ ಸೀದಾ ವಿಷ್ಣುವಿನ ಎದೆಗೆ ಒದ್ದ. ತಕ್ಷಣ ಭೃಗುವಿನ ಪಾದವನ್ನು ಹಿಡಿದ ನಾರಾಯಣ ನನ್ನ ಎದೆ ಕಲ್ಲಿನಂತೆ ಕಠೋರವಾಗಿದೆ. ನಿಮ್ಮ ಪಾದವಾದರೋ ಬೆಣ್ಣೆಯಂತೆ ಮೃದುವಾಗಿದೆ. ನಿಮ್ಮ ಪಾದಕ್ಕೆ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳುತ್ತಾ, ಭೃಗು ಮಹರ್ಷಿಯ ಪಾದಗಳಿಗೆರಗಿ, ಪಾದಗಳನ್ನು ಕಣ್ಣಿಗೊತ್ತಿಕೊಂಡ. ನಿಮ್ಮ ಪಾದದ ಗುರುತನ್ನು ಯಾವಾಗಲೂ ತನ್ನ ಎದೆಯಲ್ಲಿ ಧರಿಸಿರುತ್ತೇನೆ ಎಂದು ಹೇಳಿದ ವಿಷ್ಣುವನ್ನು ತನ್ನ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಿ, ತ್ರಿಮೂರ್ತಿಗಳಲ್ಲಿ ಶ್ರೀಮನ್ನಾರಾಯಣನೇ ಶ್ರೇಷ್ಠನೆಂದು ಭೃಗು ಮಹರ್ಷಿ ನಿರ್ಧರಿಸಿದ. ಭಗವಾನ್ ವಿಷ್ಣು ತನ್ನ ಭಕ್ತರನ್ನು ಉಪಚರಿಸಿ, ಸತ್ಕರಿಸುವ ರೀತಿಗೆ ಭೃಗು ಮಹರ್ಷಿ ಬೆರಗಾದ. ಭಗವಾನ್ ವಿಷ್ಣು ಬ್ರಾಹ್ಮಣರಿಗೆ ತೋರುವ ಗೌರವ, ಆದರಗಳಿಗೆ ಈ ಘಟನೆ ಸಾಕ್ಷಿ ಎಂದುಕೊಂಡ.
ವಿಷ್ಣುವಿನ ಪಾದದ ಬಳಿ ಕುಳಿತಿದ್ದ ಲಕ್ಷ್ಮಿ ಮಾತ್ರ ಈ ಘಟನೆಯಿಂದ ಸಹಿಸಲಾಗದಷ್ಟು ಆಘಾತಗೊಂಡಿದ್ದಳು. ಆದರೆ ಭೃಗುವಿನೊಡನೆ ತನ್ನ ಪತಿಯ ವರ್ತನೆಗೆ ಎದುರಾಗಿ ಬಹಿರಂಗವಾಗಿ ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿ ಅನುಭವಿಸುತಿದ್ದಳು. ತನ್ನ ಕಣ್ಣೇದುರೇ ತನ್ನ ಪತಿಯ ಎದೆಗೆ ಒದ್ದ ಬ್ರಾಹ್ಮಣನ ಅತಿರೇಕದ ವರ್ತನೆಯನ್ನು ಕ್ಷಮಿಸಲು ಆಕೆ ಯಾವ ಕಾರಣಕ್ಕೂ ತಯಾರಿರಲಿಲ್ಲ. ಪ್ರತಿಯಾಗಿ ಮನಸ್ಸಿನಲ್ಲಿಯೇ ಪ್ರತೀಕಾರ ಎಂಬಂತೆ ಆ ಕ್ಷಣದಲ್ಲಿಯೇ ದೃಢ ನಿರ್ಧಾರ ಕೈಗೊಂಡಿದ್ದಳು. ಇನ್ನೆಂದೂ ಬ್ರಾಹ್ಮಣರ ಮನೆಗೆ ಕಾಲಿಡುವುದಿಲ್ಲ ಎಂಬ ಶಪಥವನ್ನು ಮನಸ್ಸಿನಲ್ಲಿ ಮಾಡಿದ್ದಳು.
ತನಗೊಪ್ಪಿಸಿದ್ದ ಕೆಲಸವನ್ನು ಯಶಸ್ವಿಯಾಗಿ ಮುಗಿಸಿ, ಫಲಿತಾಂಶವನ್ನು ಋಷಿಮುನಿಗಳ ಸಭೆಯಲ್ಲಿ ಪ್ರಕಟಿಸುವ ಉತ್ಸಾಹದಲ್ಲಿ ಭೃಗು ಮಹರ್ಷಿ ಅಲ್ಲಿಂದ ನಿರ್ಗಮಿಸುವಾಗ, ಲಕ್ಷ್ಮಿಯ ಕೋಪದ ಅರಿವೇ ಆತನಿಗೆ ಆಗಿರಲಿಲ್ಲ. ಚರ್ಚೆಗೆ ಉಚಿತವಲ್ಲದ ವಿಷಯವನ್ನು ಮುಂದಿಟ್ಟು ತ್ರಿಮೂರ್ತಿಗಳನ್ನು ಪರೀಕ್ಷಿಸಿದ ಕಾರಣ ಇಡೀ ಬ್ರಾಹ್ಮಣ ಕುಲಕ್ಕೆ ಕಂಟಕಪ್ರಾಯ ವಾದ ಶಾಪವನ್ನು ತಮ್ಮ ತಲೆಮೇಲೆ ಎಳೆದುಕೊಳ್ಳಲು ಋಷಿಮುನಿಗಳೇ ಕಾರಣರಾದರು. ಅಂದಿನಿಂದ ಇಂದಿನವರೆಗೂ ಲಕ್ಷ್ಮಿ ಯಾವ ಬ್ರಾಹ್ಮಣರ ಮನೆಗೂ ಕಾಲಿಟ್ಟಿಲ್ಲ. ಹದಿನೆಂಟು ಪುರಾಣಗಳಲ್ಲಿ ಮಹಾಪುರಾಣ ವೆಂದು ಪ್ರಸಿದ್ಧಿ ಹೊಂದಿರುವ ಭಾಗವತ ಪುರಾಣದಲ್ಲಿ ಬರುವ ಒಂದು ಉಪಕಥೆ ಮೇಲಿನದು. ಅಂದಿನ ಕಾಲದಲ್ಲಿ ಬ್ರಾಹ್ಮಣರು ಎಂದರೆ ಬ್ರಹ್ಮವನ್ನು ಅರಿತವರು ಅಥವಾ ಆತ್ಮ ಸಾಕ್ಷಾತ್ಕಾರ ಮಾಡಿ ಕೊಂಡವರು.