ಶ್ರೀಮಾತೆ ಶಾರದಾಮಣಿ ದೇವಿಯವರು ಬಂಗಾಳದ ಜಯರಾಮವಟಿ ಎಂಬ ಗ್ರಾಮದಲ್ಲಿ 22-12-1853 ರಂದು ಜನಿಸಿದರು. ಸರಳ ಸ್ವಭಾವದ ಅವರ ತಂದೆ ರಾಮಚಂದ್ರ ಮುಖ್ಯೋಪಾಧ್ಯಾಯ ಮತ್ತು ತಾಯಿ ಶ್ಯಾಮಾಸುಂದರಿಯರದು, ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. 5 ವರ್ಷದ ಶಾರದೆಯ ಮದುವೆ 23 ವರ್ಷದ ಶ್ರೀರಾಮಕೃಷ್ಣರೊಂದಿಗಾಯಿತು (ಅಂದಿನ ಬಾಲ್ಯವಿವಾಹದ ಈ ವಿಧಿಯು ಇಂದಿನ ನಿಶ್ಚಿತಾರ್ಥಕ್ಕೆ ಸಮ). ಈ ಸಮಯದಲ್ಲಿ ಶ್ರೀರಾಮಕೃಷ್ಣರು ಹಲವಾರು ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದ್ದರು.
ತಮ್ಮ 18ನೇ ವಯಸ್ಸಿನಲ್ಲಿ ಶಾರದಾದೇವಿಯವರು, ಶ್ರೀರಾಮಕೃಷ್ಣರು ಅರ್ಚಕರಾಗಿದ್ದ ದಕ್ಷಿಣೇಶ್ವರದ ಕಾಳೀ ಮಂದಿರಕ್ಕೆ ಆಗಮಿಸಿದರು. ಅವರನ್ನು ಪ್ರೀತಿ ಮತ್ತು ಆದರದಿಂದ ಬರಮಾಡಿಕೊಂಡ ಶ್ರೀರಾಮಕೃಷ್ಣರು, ಲೌಕಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು. ತಮ್ಮನ್ನು ಮಾತೃ ಭಾವದಿಂದ ಕಾಣುತ್ತಿದ್ದ ಪತಿಯ ಆಧ್ಯಾತ್ಮಿಕ ಸಾಧನೆಗೆ ಅಡ್ಡಿಯಾಗದೆ, ಅವರ ಸಾಧನೆಗಳಿಗೆ ಪೂರಕವಾಗಿರುವುದರಲ್ಲಿ ಅವರಿಗೆ ತಮ್ಮ ಜೀವನಪಥ ಕಂಡುಬಂದಿತು.
ಶ್ರೀರಾಮಕೃಷ್ಣರು ಫಲಹಾರಿಣಿ ಕಾಳೀ ಪೂಜೆಯ ದಿನ ಶ್ರೀಶಾರದಾದೇವಿಯವರನ್ನು ಜೀವಂತ ದುರ್ಗೆಯಾಗಿ ಭಾವಿಸಿ ಪೂಜೆಗೈದರು. ಇದರೊಂದಿಗೆ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಸಾಧನೆಯ ಜೀವನಘಟ್ಟ ಕೊನೆಗೊಂಡಿತು; ಮುಂದೆ ಒಬ್ಬ ಆಚಾರ್ಯರಾಗಿ, ಅವತಾರ ಪುರುಷರೆಂದು ಅವರು ಪ್ರಸಿದ್ಧರಾದರು. ಶ್ರೀರಾಮಕೃಷ್ಣರನ್ನು ಕೇಳಲು, ಕಾಣಲು ಬರುತ್ತಿದ್ದ ಭಕ್ತಾದಿಗಳ ಆಹಾರ/ವಸತಿಗಳ ವ್ಯವಸ್ಥೆಯನ್ನು ಮಾಡುತ್ತ ಶಾರದಾದೇವಿಯವರು ಜಪವೇ ಮೊದಲಾದ ಮೌನ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದರು.
ಜೀವನದಲ್ಲಿ ನೊಂದ ಮಹಿಳಾ ಭಕ್ತರಿಗೆ ಸಾಂತ್ವನ ನೀಡುತ್ತ, ಎಲ್ಲರ ತಾಯಾಗಿ ‘ಶ್ರೀಮಾತೆ’ ಎಂದೆನಿಸಿದರು. ಶ್ರೀರಾಮಕೃಷ್ಣರ ಮಹಾಸಮಾಧಿಯ ನಂತರ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಮುನ್ನಡೆಸುವ, ಭಕ್ತರಿಗೆ ಮತ್ತು ಸಾಧಕರಿಗೆ ಮಾರ್ಗದರ್ಶನ ನೀಡುವ ಗುರುತರ ಹೊಣೆಯನ್ನು ಅವರು ವಹಿಸಿಕೊಂಡರು. ಸನ್ಯಾಸಿ-ಗೃಹಸ್ಥ, ಬಡವ-ಬಲ್ಲಿದ, ಬಾಲಕ-ವೃದ್ಧ, ಪತಿತ-ಪಾವನ ಮೊದಲಾದ ಯಾವುದೇ ಭೇದ-ಭಾವಗಳನ್ನು ಕಾಣದೇ ವಾತ್ಸಲ್ಯ ಪ್ರೇಮಪ್ರವಾಹವನ್ನೇ ಹರಿಸ ತೊಡಗಿದರು.
1911 ರಲ್ಲಿ ದಕ್ಷಿಣ ಭಾರತದ ತೀರ್ಥಯಾತ್ರೆಯನ್ನು ಕೈಗೊಂಡಾಗ, ಬೆಂಗಳೂರಿನ ಬಸವನಗುಡಿಯ ಶ್ರೀರಾಮಕೃಷ್ಣ ಮಠಕ್ಕೆ ಆಗಮಿಸಿ ಭಕ್ತರನ್ನು ಆಶೀರ್ವದಿಸಿದರು. ಅಲ್ಲಿ ಅವರು ಧ್ಯಾನ ಮಾಡಿದ ಶಿಲಾಸನವಿಂದು ಭಕ್ತರ ತೀರ್ಥ ಸ್ಥಾನವಾಗಿದೆ. 1920ರ ಜುಲೈ 21 ರಂದು ಅವರು ತಮ್ಮ ಶರೀರವನ್ನು ತ್ಯಜಿಸಿದರು. ಸಾಮಾನ್ಯ ಸ್ತ್ರೀಯಂತೆ ಬಾಳಿದ ಅವರ ಜೀವನ ಕರ್ಮಯೋಗಕ್ಕೊಂದು ಶ್ರೇಷ್ಠ ವ್ಯಾಖ್ಯಾನದಂತಿತ್ತು.
ಅಂದಿನ ಜಾತಿ, ಅತಿಯಾದ ಮಡಿ-ಮೈಲಿಗೆಯೇ ಮೊದಲಾದ ಕಂದಾಚಾರಗಳನ್ನು ತಮ್ಮ ಮಾತೃಪ್ರೇಮದ ಮೂಲಕ ಇಲ್ಲದಂತೆ ಮಾಡಿ ಅಸಂಖ್ಯ ಭಕ್ತರಿಗೆ ಸಾಂತ್ವನ ಒದಗಿಸಿದರು. ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ, ಆಚಾರ್ಯ ರಜನೀಶ ಮೊದಲಾದ ಚಿಂತಕರು ಶಾರದಾದೇವಿಯವರ ಜೀವನ, ಆಧುನಿಕ ಭಾರತೀಯ ಮಹಿಳೆಯ ಮುಂದಿರುವ ಅನುಸರಿಸಲು ಯೋಗ್ಯವಾದ ಆದರ್ಶ ಎಂದಿದ್ದಾರೆ. ಎಲೆಮರೆಯ ಹೂವಿನಂತೆ ಆಧ್ಯಾತ್ಮಿಕ ಸೌರಭವನ್ನು ಸೂಸಿದ ಶಾರದಾದೇವಿಯವರ ಹೆಸರಿನಲ್ಲಿ ಶ್ರೀಶಾರದಾ ಮಠ ಎಂಬ ಸನ್ಯಾಸಿನಿಯರ ಸಂಘವೊಂದು ಜನ್ಮತಾಳಿತು. ಬೆಂಗಳೂರಿನ ನಂದಿ ದುರ್ಗದ ಬಳಿ ಅದರ ಶಾಖೆಯೊಂದು ಸೇವೆಸಲ್ಲಿಸುತ್ತಿದೆ.
- ಜಿ.ಎಸ್. ಶಿವರುದ್ರಪ್ಪ