ಮಡಿಕೇರಿ, ಡಿ. 21: ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದ ಹಳೇ ವಿದ್ಯಾರ್ಥಿ, ದುಬೈನಲ್ಲಿ ನೆಲೆಸಿರುವ ಪೆರುಂಬಾಯಿ ಮಂಜುನಾಥ್ ತಾವು ಶಿಕ್ಷಣ ಕಲಿತ ಶಾಲೆಯ ಸ್ಮಾರ್ಟ್ ಕ್ಲಾಸ್‍ಗಾಗಿ ನೂತನ ತರಗತಿ ಕಟ್ಟಡವನ್ನು ರೂ.4 ಲಕ್ಷ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ್ದಾರೆ.
ಶಾಲೆಯ ಹಳೇ ವಿದ್ಯಾರ್ಥಿಯು ಕೊಡುಗೆಯಾಗಿ ನೀಡಿದ್ದ ತರಗತಿ ಕಟ್ಟಡವನ್ನು ರೋಟರಿ ವಲಯ 6ರ ಕಾರ್ಯದರ್ಶಿ ಅನಿಲ್ ಎಚ್.ಟಿ. ಹಾಗೂ ಕುಶಾಲನಗರ ರೋಟರಿ ಅಧ್ಯಕ್ಷ ಎಂ.ಡಿ. ಅಶೋಕ್ ಉದ್ಘಾಟಿಸಿದರು.
ಈ ಸಂದರ್ಭ ಆಯೋಜಿತ ಕಾರ್ಯಕ್ರಮದಲ್ಲಿ ಮಾತನಾಡಿದ ದಾನಿ ಪೆರುಂಬಾಯಿ ಮಂಜುನಾಥ್ ರಾಜ್ ಕುಮಾರ್, ರೋಟರಿಯು ಸ್ವಾರ್ಥ ರಹಿತವಾದ ಸೇವಾ ಮನೋಭಾವ ಹೊಂದಿರುವ ಸಂಸ್ಥೆಯಾಗಿದ್ದು, ತಾನು ರೂ.4 ಲಕ್ಷಗಳನ್ನು ನವೋದಯ ಶಾಲೆಗೆ ನೀಡಿದ್ದೇನೆ ಎಂದರು.
ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, 32 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಉನ್ನತ ಹುದ್ದೆಗೇರಿದ್ದರೂ, ವಿದ್ಯೆ ಕಲಿಸಿದ ಶಾಲೆಗೆ ನೆರವು ನೀಡಬೇಕೆಂಬ ಉದ್ದೇಶದಿಂದ ತರಗತಿ ನಿರ್ಮಿಸಿರುವದು ಇತರರಿಗೆ ಮಾದರಿಯಾಗಬೇಕೆಂದು ಅಭಿಪ್ರಾಯಪಟ್ಟರು.
ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಎಂ.ಡಿ.ಅಶೋಕ್ ಮಾತನಾಡಿ, ಜೀವನದಲ್ಲಿ ಕಲಿಕೆಯು ಸಾಕಷ್ಟು ಬದಲಾವಣೆ ತರುತ್ತದೆ. ಹೀಗಾಗಿ ಕಲಿಕೆ ಎಂಬುದು ಶಾಶ್ವತ ಪ್ರಕ್ರಿಯೆಯಾಗಿದೆ ಎಂದರು.
ನವೋದಯ ಸಂಸ್ಥೆಯ ಪ್ರಾಂಶುಪಾಲ ಈಸಾಕ್ ಮಾತನಾಡಿ, ಪ್ರಸ್ತುತ ಶಾಲೆಯಲ್ಲಿ 14 ಕೋಣೆಗಳಲ್ಲಿ 7 ತರಗತಿಗಳಿದ್ದು 520 ವಿದ್ಯಾರ್ಥಿಗಳಿದ್ದಾರೆ ಎಂದೂ ಸ್ಮರಿಸಿಕೊಂಡರು.
ಶಾಲಾ ಉಪಪ್ರಾಂಶುಪಾಲ ದಿನೇಶ್, ಕುಶಾಲನಗರ ರೋಟರಿ ಕಾರ್ಯದರ್ಶಿ ಸಂಜು ಬೆಳ್ಯಪ್ಪ, ಯೋಜನಾ ನಿರ್ದೇಶಕ ಪಿ.ಆರ್. ನವೀನ್, ನಿರ್ದೇಶಕರಾದ ಕೆ.ಎಂ. ಜೇಕಬ್, ಪ್ರೇಮ್ ಚಂದ್ರ ಬಿ., ಎಂ.ಎಂ. ಸಂತೋಷ್ ಹಾಜರಿದ್ದರು. ಶಾಲಾ ಶಿಕ್ಷಕ ಹೆಚ್.ಆರ್. ಅರವಿಂದ್ ನಿರೂಪಿಸಿದರು.