ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನು ಬಿಟ್ಟು ಹೋದ ಕೆಲವು ಸಾರ್ವಕಾಲಿಕ ಉತ್ತಮ ಲೇಖಕರಲ್ಲಿ ಮತ್ತು ಸಾಹಿತ್ಯಕ ಮೌಲ್ಯದ ಉತ್ತಮ ಭಾಷಣಕಾರರಲ್ಲಿ ಎಲ್.ಎಸ್. ಶೇಷಗಿರಿ ರಾಯರೂ ಒಬ್ಬರು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಂದಿನ ದಿನಗಳಲ್ಲಿ ನೂತನವಾಗಿ ಪ್ರಾರಂಭವಾದ ಸರಕಾರಿ ಕಾಲೇಜ್‍ನಲ್ಲಿ ಕೆಲವು ವರ್ಷಗಳಲ್ಲಿ ಇದ್ದಂತಹ ಹೆಸರಾಂತ ಪ್ರಾಧ್ಯಾಪಕರಲ್ಲಿ ಬೆಂಗಳೂರಿನಿಂದ ಬಂದಿದ್ದ ಶೇಷಗಿರಿ ರಾಯರೂ ಒಬ್ಬರಾಗಿದ್ದರು. ಇವರು ಮಡಿಕೇರಿಯಲ್ಲಿದ್ದಷ್ಟು ಸಮಯ ಇಲ್ಲಿನ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು.

ಶೇಷಗಿರಿ ರಾಯರು ಪ್ರಾಧ್ಯಾಪಕರಾಗಿ ಕಾಲೇಜ್ ಪ್ರವೇಶಿಸಿದ ಆರಂಭ ದಿನಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಇವರನ್ನು ‘ಇಂಗ್ಲಿಷ್ ಲೆಕ್ಚರರ್’ ಎಂದು ಪರಿಗಣಿಸಲು ಸಿದ್ಧರಾಗಿರಲಿಲ್ಲ. ಶಾಲಾ ವಿದ್ಯಾರ್ಥಿಯಾಗಿರಬಹುದು ಎಂದು ಭಾವಿಸಿದ ಇಲ್ಲಿನ ವಿದ್ಯಾರ್ಥಿಗಳು ಅವರ ತರಗತಿ ಪಾಠವನ್ನು ಕೇಳಲಾರಂಭಿಸಿದಂತೆ ಬೋಧನಾ ಕ್ರಮ, ಭಾಷೆಯ ಮೇಲಿನ ಹಿಡಿತ ಮತ್ತು ಎಲ್ಲಕ್ಕೂ ಮೇಲಾಗಿ ಸ್ಪಷ್ಟ ಉಚ್ಛ ಕಂಠದ ಗಂಡು ಧ್ವನಿಗೆ ಮಾರುಹೋದರಂತೆ.

ಆಗಿನ ದಿನಗಳಲ್ಲಿ ಇವರ ಸಹಪಾಠಿಗಳಾಗಿದ್ದವರಲ್ಲಿ ನಾಪೋಕ್ಲಿನ ಪ್ರೊ. ಬಿ.ಸಿ. ಪೊನ್ನಪ್ಪ ಅವರನ್ನು, ಜಿ.ಟಿ. ನಾರಾಯಣ ರಾಯರನ್ನು, ಭಗವಾನ್, ಗೌರಮ್ಮ ಮುಂತಾದವರನ್ನು ನೆನಪಿಸಿಕೊಳ್ಳಬಹುದು. 1962-64 ರ ಸಾಲಿನ ಪದವಿ ತರಗತಿಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಮಡಿಕೇರಿಯ ಜಿ.ಆರ್. ನಾರಾಯಣ ರಾಯರು, ಶೇಷಗಿರಿ ರಾಯರ ಪಾಠವನ್ನು ಆಲಿಸುವುದೇ ಒಂದು ರೀತಿಯ ಆನಂದವಾಗಿತ್ತು. ಅವರ ಪಾಠ ಈಗಲೂ ತನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ ಎಂದಿದ್ದಾರೆ.

ಅಂದಿನ ದಿನಗಳಲ್ಲಿ ಶೇಷಗಿರಿ ರಾಯರ ಸಾಹಿತ್ಯ ಕೃಷಿಗೆ ಕೊಡಗು ಜಿಲ್ಲೆ ಬಹಳ ಸಣ್ಣ ಕ್ಷೇತ್ರವಾಗಿತ್ತು. ಆದುದರಿಂದ ಮಡಿಕೇರಿಯಿಂದ ವರ್ಗ ಆದೊಡನೆ ಅವರು ಕರ್ನಾಟಕದಾದ್ಯಂತ ಮನೆ ಮಾತಾಗತೊಡಗಿದರು. ಶ್ರೀಯುತರ ಬೋಧನಾ ಕಲೆಯು ಇಂಗ್ಲಿಷ್ ಪಠ್ಯವೇ ಆಗಿದ್ದರೂ ಕನ್ನಡ ಭಾಷೆಯ ಮೇಲಿನ ಹಿಡಿತ ಪ್ರೌಢಿಮೆಯು ಸಂಪಾದನಾ ಕ್ಷೇತ್ರದವರೆಗೂ ಮುಂದುವರಿಯಿತು. ಈ ದಿಶೆಯಲ್ಲಿ ಅವರು ರಾಷ್ಟ್ರೋತ್ಥಾನ ಬಳಗದಲ್ಲಿ ಒಬ್ಬರಾಗಿ ನಮ್ಮ ಸನಾತನ ಸಂಸ್ಕøತಿಯನ್ನು ಎತ್ತಿಹಿಡಿದದ್ದನ್ನು ನೆನಪಿಸಿಕೊಳ್ಳಬೇಕು.

ವರ್ಷ 2006 ಮೇ ತಿಂಗಳು, ಅಂದು ಎರಡು ದಿನಗಳ ಕಾಲ ಮಡಿಕೇರಿ ಕಾವೇರಿ ಕಲಾ ಕ್ಷೇತ್ರದಲ್ಲಿ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಕೊಡಗಿನವರೇ ಆಗಿದ್ದ ವಿಜ್ಞಾನ ಸಾಹಿತಿ ಜಿ.ಟಿ. ನಾರಾಯಣ ರಾಯರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಅಂದು ಶೇಷಗಿರಿ ರಾಯರು ಉದ್ಘಾಟನಾ ಭಾಷಣ ಮಾಡಿದ್ದರು. ನಂತರದ ದಿನಗಳಲ್ಲಿ ಶ್ರೀಯುತರ ಸಾಹಿತ್ಯ ಸೇವೆಯನ್ನು ಮನಗಂಡು ಅವರನ್ನು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿಯೂ ಆರಿಸಲಾಯಿತು.

ಎಲ್.ಎಸ್. ಶೇಷಗಿರಿ ರಾಯರು ತಮ್ಮ ವೃದ್ಧಾಪ್ಯದಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಾ ಸಾಹಿತ್ಯ ಸೇವೆಯನ್ನು ಎಡೆಬಿಡದೆ ಮಾಡುತ್ತಲೇ ಇದ್ದರು. ಆದರೆ ಇವರೆಂದೂ ಪ್ರಚಾರ ಪ್ರಿಯರಾಗಿರಲಿಲ್ಲ. ಶ್ರೀಯುತರು ತಮ್ಮ 95ನೇ ವರ್ಷ ಪ್ರಾಯದಲ್ಲಿ ನಿಧನ ಹೊಂದಿದರು. ಇವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ನಷ್ಟವೆಂದೇ ಹೇಳಬಹುದು. ಅಗಲಿದ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸೋಣ.

- ಜಿ.ಟಿ. ರಾಘವೇಂದ್ರ, ಮಡಿಕೇರಿ.