ಶ್ರೀಮಂಗಲ, ಡಿ. 21: ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಪೊರಾಡು ಊರು ಪಂಚಾಯಿತಿ ಆಶ್ರಯದಲ್ಲಿ 63ನೇ ವರ್ಷದ ಪೊರಾಡು ಪುತ್ತರಿ ಊರೋರ್ಮೆ ಮತ್ತು ಮಹಾಸಭೆ ನಡೆಯಿತು. ಊರು ಪಂಚಾಯಿತಿ ಅಧ್ಯಕ್ಷ ಮೀದೇರಿರ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಗ್ರಾಮದ ವ್ಯಾಪ್ತಿಯಲ್ಲಿ ಊರು ಪಂಚಾಯಿತಿಯ ಸದಸ್ಯರು ಮರಣಪಟ್ಟರೆ ಅವರ ಅಂತ್ಯಕ್ರಿಯೆ ಆಗುವವರೆಗೂ ಗ್ರಾಮದ ಪ್ರತೀ ಕುಟುಂಬದ ಕನಿಷ್ಟ ಒಬ್ಬ ಸದಸ್ಯರು ಕಡ್ಡಾಯವಾಗಿ ಅಲ್ಲಿ ಇರತಕ್ಕದ್ದು. ಈ ಮೂಲಕ ನೊಂದ ಕುಟುಂಬದ ಕಷ್ಟದಲ್ಲಿ ನೆರವಾಗುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಹಾಗೆಯೇ ಗ್ರಾಮದಲ್ಲಿ ಸಾವು ಸಂಭವಿಸಿದ ಮನೆಯಲ್ಲಿ ಅಂತ್ಯಕ್ರಿಯೆ ನಂತರ ಮದ್ಯಸೇವನೆ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಮದ್ಯವನ್ನು ದೂರ ಇಡುವ ತೀರ್ಮಾನ ಕೈಗೊಳ್ಳಲಾಯಿತು. ಗ್ರಾಮದಲ್ಲಿ ಮೂರು ದೇವರ ಉತ್ಸವಕ್ಕೆ ಪ್ರತೀ ಕುಟುಂಬದಿಂದ ಕನಿಷ್ಟ ಒಬ್ಬರು ಕಡ್ಡಾಯವಾಗಿ ಹಾಜರಿರುವಂತೆ ಹಾಗೂ ಪ್ರತೀ ವರ್ಷ ಗ್ರಾಮದ ಅಂಬಲದಲ್ಲಿ ನಡೆಯುವ ಪುತ್ತರಿ ಊರ್ ಕೋಲ್ ಮಂದ್ನಲ್ಲಿ ಕಡ್ಡಾಯವಾಗಿ ಪ್ರತೀ ಕುಟುಂಬದವರು ಹಾಜರಿರುವುದು ಮತ್ತು ಸಾಂಪ್ರದಾಯಿಕ ಉಡುಪಿನಲ್ಲಿ ಪುರುಷರು ಹಾಗೂ ಮಹಿಳೆಯರು ಕಡ್ಡಾಯವಾಗಿ ಭಾಗವಹಿಸುವ ಮೂಲಕ ಸಾಂಪ್ರದಾಯಿಕ ಹಬ್ಬಕ್ಕೆ ಹೆಚ್ಚಿನ ಉತ್ತೇಜನ ಕೊಡುವಂತೆ ತೀರ್ಮಾನಿಸಲಾಯಿತು.
ಗ್ರಾಮದಲ್ಲಿ ಮರಣ ವಂತಿಕೆ ಪಾವತಿಸುವ ಕುಟುಂಬದ ವ್ಯಾಪ್ತಿಗೆ ಬರುವ ಯಾವುದೇ ಸದಸ್ಯ ಮರಣಪಟ್ಟರೆ ರೂ. 15 ಸಾವಿರ ಮರಣ ನಿಧಿಯನ್ನು ತಕ್ಷಣದಿಂದಲೇ ನೀಡುವಂತೆ ಊರೋರ್ಮೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭ ಊರು ಪಂಚಾಯಿತಿಯ ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್ ವಾರ್ಷಿಕ ಲೆಕ್ಕ ಪತ್ರ ಹಾಗೂ ವಾರ್ಷಿಕ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿ ಊರು ಪಂಚಾಯಿತಿಯ ನಿರ್ದೇಶಕರುಗಳಾದ ಮೀದೇರಿರ ಚಿಟ್ಟಿಯಪ್ಪ, ಬೋಸ್ ಚಂಗಪ್ಪ, ಲಿವನ್, ಬಲ್ಯಮೀದೇರಿರ ವಿಜಯ್ಪ್ರÀ್ರಸಾದ್, ವಿಜುನಾಚಪ್ಪ, ಎನ್. ಚಂಗಪ್ಪ, ಅಣ್ಣೀರ ಸೋನಿಕುಮಾರ್, ಮಲ್ಲೇಂಗಡ ಸೂರಜ್ ಹಾಜರಿದ್ದರು.